ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಆರ್‌. ಅಶೋಕ್‌ ಚಾಲನೆ

ಬಡವರಿಗೆ ನಿವೇಶನ; ಕೂಡ್ಲಿಗಿಯಲ್ಲಿ 10 ಎಕರೆ ಜಾಗ
Last Updated 26 ಸೆಪ್ಟೆಂಬರ್ 2022, 13:44 IST
ಅಕ್ಷರ ಗಾತ್ರ

ಕೂಡ್ಲಿಗಿ/ಹೊಸಪೇಟೆ (ವಿಜಯನಗರ): ‘ಕೂಡ್ಲಿಗಿ ತಾಲ್ಲೂಕಿನಲ್ಲಿ ಬಡವರಿಗೆ ನಿವೇಶನ ನೀಡುವುದಕ್ಕಾಗಿ 10 ಎಕರೆ ಜಾಗ ಮಂಜೂರು ಮಾಡಲಾಗಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಜಿಲ್ಲೆಯ ಕೂಡ್ಲಿಗಿಯಲ್ಲಿ ಸೋಮವಾರ ಮಿನಿ ವಿಧಾನಸೌಧ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಳೆಗೇರಿ ಮಂಡಳಿಯಿಂದ ಬಸವ, ಅಂಬೇಡ್ಕರ್‌ ವಸತಿ ಯೋಜನೆಯಡಿ 1 ಸಾವಿರ ಮನೆಗಳನ್ನು ನಿರ್ಮಿಸಿ ಬಡವರಿಗೆ ವಿತರಿಸಲಾಗುವುದು. ದೇವರಾಜ ಅರಸು ಯೋಜನೆಯಡಿ 2,300 ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲಾಗುವುದು. ವಿಜಯನಗರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿಗೆ ಪರಿಹಾರ ಕೊಡಲಾಗಿದೆ ಎಂದು ಹೇಳಿದರು.

ಸುದೀರ್ಘ ಅವಧಿಗೆ ಈ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಗೊಲ್ಲರಹಟ್ಟಿ, ಲಂಬಾಣಿ ತಂಡಗಳಲ್ಲಿ ವಾಸಿಸುವ ಜನರಿಗೆ ಸೌಲಭ್ಯಗಳನ್ನು ಕೊಟ್ಟಿಲ್ಲ. ನಮ್ಮ ಸರ್ಕಾರ ಅವುಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ ಹಕ್ಕುಪತ್ರ ವಿತರಿಸುತ್ತಿದೆ. ವಿಜಯನಗರ ಜಿಲ್ಲೆಯಲ್ಲೂ ಆ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.

ಅರ್ಧ ಎಕರೆಗಿಂತ ಕಡಿಮೆ ಜಾಗ ಅತಿಕ್ರಮಿಸಿ ಉಳುಮೆ ಮಾಡುತ್ತಿದ್ದ ರೈತರ ಮೇಲೆ ಹಿಂದಿನ ಸರ್ಕಾರ ಪ್ರಕರಣಗಳನ್ನು ದಾಖಲಿಸಿತ್ತು. ನಮ್ಮ ಸರ್ಕಾರ ಈ ಕಾಯ್ದೆಯನ್ನು ತೆಗೆದಿದೆ. ಅವರಿಗೆ ಉಳುಮೆಗೆ ಅವಕಾಶ ಕಲ್ಪಿಸಿದೆ. ಪಿಂಚಣಿ ಸಮಸ್ಯೆ ಬಗೆಹರಿಸಲಾಗಿದೆ. ಜನರ ಮನೆಬಾಗಿಲಿಗೆ ಹೋಗಿ ಕಂದಾಯ ದಾಖಲೆಗಳನ್ನು ನೀಡಲಾಗುತ್ತಿದೆ. ಡಿ.ಸಿ., ಎ.ಸಿ., ತಹಶೀಲ್ದಾರ್‌ ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ನಡೆಸಿ, ಸ್ಥಳದಲ್ಲೇ ಜನರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದಿನ ಸರ್ಕಾರಗಳು ಈ ಕೆಲಸವೇಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕೂಡ್ಲಗಿಯಲ್ಲಿ ನೂರಕ್ಕೆ ನೂರರಷ್ಟು ಅಭಿವೃದ್ಧಿಯಾಗಿದೆ. ನಮ್ಮದು 100 ಪರ್ಸೆಂಟ್‌ ಆಡಳಿತ ಕೊಡುವ ಸರ್ಕಾರ ಎಂದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ‘ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಯಾತ್ರೆ ಮಾಡುತ್ತಿದೆ. ಅದು ಕಾಂಗ್ರೆಸ್‌ ಪಕ್ಷದ ಮುಖಂಡರ ಜೋಡಿಸುವ ಯಾತ್ರೆ. ಮತ್ತೆ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ ಎಂದು ಹೇಳಿದರು.
ಶಾಸಕ ಎನ್‌.ವೈ.ಗೋಪಾಲಕೃಷ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರ ಇದ್ದಾಗ, ಕೋವಿಡ್‌ ಅವಧಿಯಲ್ಲಿ ಕೆಲಸ ಮಾಡಲು ಆಗಿರಲಿಲ್ಲ. ಕೋವಿಡ್‌ ಬಳಿಕ ₹2,500 ಕೋಟಿ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿವೆ. ಅದರಲ್ಲೂ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೇ 90ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್‌ನೊಳಗೆ ಐದು ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಇದೇ ವೇಳೆ 56, 57 ಅರ್ಜಿ ನಮೂನೆ ಹಕ್ಕುಪತ್ರ ವಿತರಿಸಲಾಯಿತು. ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ., ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೋಯರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾಬಾಯಿ, ಮಾಜಿಸಂಸದೆ ಜೆ. ಶಾಂತಾ ಇದ್ದರು.

ಶಿಷ್ಟಾಚಾರ ಉಲ್ಲಂಘನೆ
ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಂಸದೆ ಜೆ. ಶಾಂತಾ ಅವರಿಗೆ ಕೂರಿಸಿ ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘಿಸಿದೆ ಎಂಬ ಮಾತುಗಳು ಕೇಳಿ ಬಂದವು.

ಸಚಿವರು, ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಕೂಡ್ಲಿಗಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೆ. ಶಾಂತಾ ಅವರಿಗೆ ವೇದಿಕೆ ಮೇಲೆ ಕೂರಿಸಿದ್ದು ಎಷ್ಟು ಸರಿ ಎಂಬ ಗುಸುಗುಸು ಚರ್ಚೆ ನಡೆಯಿತು.

‘ಪ್ರಚಾರಕ್ಕಾಗಿ ಪೇಸಿಎಂ ಅಭಿಯಾನ’
‘ಕಾಂಗ್ರೆಸ್‌ನವರು ಪ್ರಚಾರಕ್ಕಾಗಿ ‘ಪೇಸಿಎಂ’ ಅಭಿಯಾನ ನಡೆಸುತ್ತಿದ್ದಾರೆ. ಶೇ 40ರಷ್ಟು ತಿಂದವರು, ಜೈಲಿಗೆ ಹೋಗಿ ಬಂದವರು, ಬೇಲ್‌ ಮೇಲೆ ಹೊರಗೆ ಇರುವವರು ಇದನ್ನು ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಪೋಸ್ಟರ್‌ ಅಂಟಿಸುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಜೈಲಿಗೆ ಹೋಗಿ ಬಂದಿಲ್ಲ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರೇ ಬೇಲ್‌ ಮೇಲೆ ಹೊರಗಿದ್ದಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಟೀಕಿಸಿದರು.

ಕಾಂಗ್ರೆಸ್‌ನವರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ನಿಲುವಳಿ ತಂದು ವಿಧಾನಸಭೆಯಲ್ಲಿ ಚರ್ಚಿಸುತ್ತಿದ್ದರು. ಆದರೆ, ಅವರ ಬಣ್ಣ ಬಯಲಾಗುತ್ತದೆ ಎಂದು ಪೋಸ್ಟರ್‌ ಅಂಟಿಸುತ್ತಿದ್ದಾರೆ. 65 ವರ್ಷ ರಾಜ್ಯ, ದೇಶ ಲೂಟಿ ಮಾಡಿದವರು ಅವರು. ಅವರ ಪೇಸಿಎಂ ಅಭಿಯಾನಕ್ಕೆ ಸೊಪ್ಪು ಹಾಕುವುದಿಲ್ಲ. ಗೋವಾ, ಮಹಾರಾಷ್ಟ್ರ ಸೇರಿದಂತೆ ಎಲ್ಲ ಕಡೆ ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡಿದ್ದಾರೆ. ರಾಜಸ್ತಾನದಲ್ಲೂ ಅದೇ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದರು.

ಏನೇನು ಉದ್ಘಾಟನೆ?
* ₹10 ಕೋಟಿ ವೆಚ್ಚದ ಮಿನಿ ವಿಧಾನಸೌಧ
* ₹3 ಕೋಟಿ ವೆಚ್ಚದ ಮಹಾದೇವ ಮೈಲಾರ ಕ್ರೀಡಾಂಗಣ
* ₹1.80 ಕೋಟಿಯಲ್ಲಿ ಪಟ್ಟಣ ಪಂಚಾಯಿತಿ ನೂತನ ಕಟ್ಟಡ
* ₹1.50 ಕೋಟಿಯಲ್ಲಿ ಮಹರ್ಷಿ ವಾಲ್ಮೀಕಿ ಭವನ
* ₹1.40 ಕೋಟಿಯಲ್ಲಿ ಗುರು ಭವನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT