ಸೋಮವಾರ, ಡಿಸೆಂಬರ್ 5, 2022
21 °C
ಪ್ರಭಾವಿ ಸಚಿವರ ಕೈವಾಡ ಆರೋಪ

ವಿಜಯನಗರದ ಡಿಸಿ, ಎಸ್ಪಿ ವರ್ಗಾವಣೆ: ಕಟ್ಟುನಿಟ್ಟಿನ ಕಾನೂನು ಅನುಷ್ಠಾನವೇ ತಪ್ಪಾ?

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ.,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ರಾಜ್ಯ ಸರ್ಕಾರ ಶುಕ್ರವಾರ ಒಂದೇ ಸಲ ವರ್ಗಾವಣೆಗೊಳಿಸಿ ದಿಢೀರ್‌ ಆದೇಶ ಹೊರಡಿಸಿದ ನಂತರ ‘ಸಂವಿಧಾನಬದ್ಧವಾದ ಕಾನೂನನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸುವುದೇ ತಪ್ಪಾ?’ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ಇಬ್ಬರೂ ಅಧಿಕಾರಿಗಳು ತಮ್ಮ ಕಾರ್ಯಶೈಲಿ ಮೂಲಕ ಜನರ ಮನ ಗೆದ್ದಿದ್ದರು. ಹೊಸ ಜಿಲ್ಲೆಯನ್ನು ಬಹಳ ವ್ಯವಸ್ಥಿತವಾಗಿ ಕಟ್ಟಲು ಶ್ರಮಿಸುತ್ತಿದ್ದರು. ಹೊಸ ಜಿಲ್ಲೆಯ ಆಡಳಿತದ ಚುಕ್ಕಾಣಿ, ಕಾನೂನು ಸುವ್ಯವಸ್ಥೆ ದಕ್ಷ ಅಧಿಕಾರಿಗಳ ಕೈಗೆ ಕೊಟ್ಟಿದ್ದಕ್ಕೆ ಜನ ರಾಜ್ಯ ಸರ್ಕಾರವನ್ನು ಮುಕ್ತವಾಗಿ ಕೊಂಡಾಡುತ್ತಿದ್ದರು. ಆದರೆ, ಏಕಾಏಕಿ ಅವರ ವರ್ಗಾವಣೆಯಿಂದ ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಪ್ರಭಾವಿ ಸಚಿವರೊಬ್ಬರ ಮಸಲತ್ತಿನ ವಿರುದ್ಧವೂ ಕೆಂಡ ಕಾರುತ್ತಿದ್ದಾರೆ.

ಆಗಿದ್ದೇನು?: ಹೊಸಪೇಟೆಯಲ್ಲಿ ಹಿಂದಿನಿಂದಲೂ ಟೆಂಡರ್‌ ಇಲ್ಲದೆ ಸರ್ಕಾರದ ಕಾಮಗಾರಿಗಳು ನಡೆಯುತ್ತ ಬಂದಿವೆ. ಶಾಸಕ, ಸಚಿವರ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದರು ಎಂಬ ಆರೋಪಗಳಿವೆ. ಅನಿರುದ್ಧ್‌ ಅವರು ಡಿ.ಸಿ. ಆದ ನಂತರ ಇದಕ್ಕೆಲ್ಲ ಕಡಿವಾಣ ಹಾಕಿದ್ದರು. ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಇದು ಜಿಲ್ಲೆಯ ಪ್ರಭಾವಿ ಸಚಿವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇನ್ನು, ಡಾ. ಅರುಣ್‌ ಕೆ. ಅವರು ಜಿಲ್ಲೆಯ ಎಸ್ಪಿ ಆದ ನಂತರ ಜೂಜು, ಮಟ್ಕಾ, ವೇಶ್ಯಾವಾಟಿಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆಲ್ಲ ಬ್ರೇಕ್‌ ಹಾಕಿದ್ದರು. ಇಲಾಖೆಯ ಸಿಬ್ಬಂದಿ ವಿರುದ್ಧ ದೂರು ಬಂದ ತಕ್ಷಣವೇ ಅವರನ್ನು ಅಮಾನತುಗೊಳಿಸಿ, ಕ್ರಮ ಕೈಗೊಂಡಿದ್ದರು. ಇಲಾಖೆಯಲ್ಲಿ ದೊಡ್ಡಮಟ್ಟದಲ್ಲಿ ಶಿಸ್ತು ಮೂಡಿತ್ತು. ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಒಂದೇ ಕಡೆ ಬೇರೂರಿದ್ದವರನ್ನು ಎತ್ತಂಗಡಿ ಮಾಡಿದ್ದರು. ಕಾನೂನು ಮೀರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಿದ್ದರು.

ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ವಿರುದ್ಧ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಒಡ್ಡಿದ ಆರೋಪದ ಕುರಿತು ದೂರು ಬಂದ ತಕ್ಷಣವೇ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿರುದ್ಧ ಜಾತಿ ನಿಂದನೆ, ಕೊಲೆ ಪ್ರಕರಣ ದಾಖಲಿಸಿದ್ದರು. ಬಂದ ದಿನದಿಂದಲೂ ಅವರ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟಿರಲಿಲ್ಲ. ಸಚಿವರ ವಿರುದ್ಧ ಕೇಸ್‌ ದಾಖಲಿಸಿದ ಬೆನ್ನಲ್ಲೇ ಅರುಣ್‌ ಅವರನ್ನು ಎತ್ತಂಗಡಿ ಮಾಡಲಾಗುತ್ತದೆ ಎಂಬ ಪುಕಾರು ಹಬ್ಬಿತ್ತು. ತಕ್ಷಣವೇ ಮಾಡಿದರೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಬಹುದು ಎಂದು ಕಾದು ಈಗ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಇದೆ.

‘ಇಬ್ಬರೂ ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೆಳಹಂತದ ಅಧಿಕಾರಿಗಳಿಗೆ ಧೈರ್ಯ ತುಂಬುತ್ತಿದ್ದರು. ಎಲ್ಲ ಅಕ್ರಮಕ್ಕೆ ಕಡಿವಾಣ ಬಿದ್ದಿತ್ತು. ಹೊಸ ಜಿಲ್ಲೆಗೆ ಇಂಥವರು ಇನ್ನೂ ಕೆಲವು ತಿಂಗಳಾದರೂ ಇರಬೇಕಿತ್ತು. ವರ್ಗಾವಣೆಯಲ್ಲಿ ರಾಜಕೀಯ ದುರುದ್ದೇಶ ಬಿಟ್ಟರೆ ಬೇರೇನೂ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯೊಂದರ ಅಧಿಕಾರಿ ತಿಳಿಸಿದರು.

ಅಧಿಕಾರಿಗಳ ವರ್ಗಾವಣೆ ಕುರಿತು ಸಚಿವ ಆನಂದ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು