‘ಗವಿಯಪ್ಪ ನಿರ್ಧಾರ ಗೊತ್ತಿಲ್ಲ, ಮುಂದೆ ಏನಾಗುತ್ತೆ ನೋಡೋಣ’

ಹೊಸಪೇಟೆ (ವಿಜಯನಗರ): ‘ಮುಖಂಡ ಎಚ್.ಆರ್. ಗವಿಯಪ್ಪನವರು ಬಿಜೆಪಿ ಬಿಡುವ ನಿರ್ಧಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಅವರು ಪಕ್ಷ ತೊರೆಯುತ್ತಾರೆ ಎನ್ನುವ ವಿಚಾರ ಕೇಳಿದ್ದೇನೆ. ಮುಂದೆ ಏನಾಗುತ್ತೆ ನೋಡೋಣ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ಥ್ರೀ ಸ್ಟಾರ್ ಹೋಟೆಲ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಗವಿಯಪ್ಪನವರು ಏಕೆ ಬಿಜೆಪಿ ಬಿಡುತ್ತಾರೆ ಗೊತ್ತಿಲ್ಲ. ಈ ಹಿಂದೆ ಅವರು ಬಿಜೆಪಿ ಟಿಕೆಟ್ ಕೇಳಿದ್ದರು. ಬಿ.ಎಸ್. ಯಡಿಯೂರಪ್ಪ, ಅವರಿಗೆ ಮಾತು ಕೊಟ್ಟಿದ್ದರು. ಆ ವೇಳೆ ನಾನು ಇರಲಿಲ್ಲ. ನಾಲ್ಕು ಸಲ ಜನ ನನ್ನನ್ನು ಗೆಲ್ಲಿಸಿದ್ದಾರೆ. ನಿರೀಕ್ಷೆಗಿಂತ ಹೆಚ್ಚಿನ ಕೆಲಸ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಅದನ್ನು ಜನ ನಿರ್ಧರಿಸುತ್ತಾರೆ’ ಎಂದರು.
‘ಗವಿಯಪ್ಪನವರು ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿದ್ದವರು. ಕೆಲ ಕಾರಣಗಳಿಂದ ಅವರು ಬಿಜೆಪಿಗೆ ಬಂದಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇತ್ತೀಚೆಗೆ ಅವರ ಮನೆಗೆ ರಾಜಕೀಯ ಕಾರಣಕ್ಕೆ ಹೋಗಿರಲಿಕ್ಕಿಲ್ಲ. ಯೋಗಕ್ಷೇಮ ವಿಚಾರಿಸಲು ಹೋಗಿರಬಹುದು. ನಾನಂತೂ ಪಕ್ಷದ ತೀರ್ಮಾನಕ್ಕೆ ಬದ್ಧ. ಪಕ್ಷದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತಿರುವೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.