ಹರಪನಹಳ್ಳಿ: ರಸ್ತೆಯ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವ ಪರಿಣಾಮ ಉಲ್ಬಣಿಸುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಇಲ್ಲಿಯ ಪೊಲೀಸ್ ಇಲಾಖೆ ಸಮ-ಬೆಸ ದಿನಾಂಕಗಳಲ್ಲಿ ವಾಹನ ನಿಲುಗಡೆ ಮಾಡುವ ಪ್ರಾಯೋಗಿಕ ಟ್ರಾಫಿಕ್ ವ್ಯವಸ್ಥೆ ಜಾರಿಗೆ ಮುಂದಾಗಿದೆ.
ಪಟ್ಟಣದ ಹೃದಯಭಾಗ ಗೌಳೇರ ಪೇಟೆ ಸದಾ ಜನದಟ್ಟಣೆಯಿಂದ ತುಂಬಿರುತ್ತದೆ. ಪುರಸಭೆ ಮುಂಭಾಗದಿಂದ ತಾಯಮ್ಮನ ಹುಣಸೆಮರದ ಗೌಳೇರಪೇಟೆ ರಸ್ತೆಯಲ್ಲಿ ಸಮ–ಬೆಸ ದಿನಾಂಕವಾರು ಬೈಕ್‌ಗಳನ್ನು ಮಾತ್ರ ನಿಲುಗಡೆ ಮಾಡಬೇಕು. ಪುರಸಭೆ ಮುಂಭಾಗದಿಂದ ಪೂರ್ವ ದಿಕ್ಕಿನ ರಸ್ತೆಯ ಬಲಭಾಗದಲ್ಲಿ ಸಮ ದಿನಾಂಕ, ಎಡ ಭಾಗದಲ್ಲಿ ಬೆಸ ದಿನಾಂಕದಂದು ಬೈಕ್‌ಗಳನ್ನು ನಿಲ್ಲಿಸುವ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಪೊಲೀಸ್ ಇಲಾಖೆ ಜೊತೆಗೆ ಪುರಸಭೆ, ಸಾರ್ವಜನಿಕರು ಸಹಕರಿಸಿದರೆ ಎಲ್ಲ ರಸ್ತೆಗಳಲ್ಲೂ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಬಹುದು. ಆಗ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ.
‘ಸಿನಿಮಾ ಮಂದಿರ ರಸ್ತೆಯಲ್ಲಿ ಮುಂದಕ್ಕೆ ಚಾಚಿಕೊಂಡು, ಫುಟ್‌ಪಾತ್ ಆಕ್ರಮಿಸಿರುವ ಮಳಿಗೆಗಳ ಮಾಲೀಕರು, ಪಾದಚಾರಿ ಮಾರ್ಗ ತೆರವುಗೊಳಿಸಿದರೆ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಸಾರ್ವಜನಿಕರು.
ರಸ್ತೆ ಬದಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು. ನಿಯಮ ಉಲ್ಲಂಘಿಸಿದರೆ ವಾಹನಗಳಿಗೆ ವೀಲ್ ಲಾಕರ್ ಅಳವಡಿಸಿ ದಂಡ ವಿಧಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಪಿಎಸ್ಐ ಶಂಭುಲಿಂಗ ಹಿರೇಮಠ ನೇತೃತ್ವದಲ್ಲಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿ ಹರಪನಹಳ್ಳಿಯಲ್ಲಿ ಪುರಸಭೆ ಮುಂಭಾಗ ನಿಲ್ಲಿಸಿರುವ ಬೈಕ್‌ಗಳಿಗೆ ಟ್ರಾಫಿಕ್ ಪೊಲೀಸರು ವ್ಹೀಲ್ ಲಾಕ್ ಅಳವಡಿಸಿರುವುದು
Highlights - ಟ್ರಾಫಿಕ್ ಸಮಸ್ಯೆ ತಪ್ಪಿಸಲು ಹೊಸ ಪದ್ಧತಿ ಜಾರಿ
ನಿಗದಿತ ಸ್ಥಳದಲ್ಲೇ ಬೈಕ್‌ಗಳನ್ನು ನಿಲ್ಲಿಸಲು ಸೂಚನೆ
ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ