ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಪಿಎಚ್‌.ಡಿ ಪ್ರವೇಶದಲ್ಲಿ ಪಾಲನೆಯಾಗದ ನಿಯಮ

ಮತ್ತೆ ಯುಜಿಸಿ ನಿಯಮ ಗಾಳಿಗೆ ತೂರಿದ ಹಂಪಿ ಕನ್ನಡ ವಿಶ್ವವಿದ್ಯಾಲಯ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು 2022–23ನೇ ಸಾಲಿನ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆಯಲ್ಲಿ ಯುಜಿಸಿ ನಿಯಮ ಗಾಳಿಗೆ ತೂರಿರುವ ವಿಷಯ ಗೊತ್ತಾಗಿದೆ.

ಯುಜಿಸಿ, ಮೀಸಲು ನಿಯಮ ಉಲ್ಲಂಘಿಸಿ ಹುದ್ದೆಗಳನ್ನು ತುಂಬಲಾಗುತ್ತಿದೆ ಎಂದು ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿದ ನಂತರ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿದೆ. ಅಲ್ಲದೇ ನೇಮಕಾತಿ ವಿಚಾರ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದೆ. ವಿ.ವಿ. ಆಡಳಿತದ ವಿರುದ್ಧ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿದ್ದವು. ಇಷ್ಟಾದರೂ ವಿ.ವಿ. ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ ಎನ್ನುವುದಕ್ಕೆ ಪಿಎಚ್‌.ಡಿ. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯುಜಿಸಿ ನಿಯಮಕ್ಕೆ ವಿರುದ್ಧವಾಗಿ ಹೊರಡಿಸಿರುವ ಅಧಿಸೂಚನೆಯೇ ಸಾಕ್ಷಿ.

2009ರ ಯುಜಿಸಿ ನಿಯಮದ ಪ್ರಕಾರ, ವಿ.ವಿ. ಪಿಎಚ್‌.ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ, ಯುಜಿಸಿ 2016ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಅದಾದ ನಂತರ ಒಂದೆರಡು ವರ್ಷಗಳಲ್ಲಿ ಎಲ್ಲ ವಿಶ್ವವಿದ್ಯಾಲಯದವರು ಆಂತರಿಕ ಪರಿನಿಯಮಕ್ಕೆ ತಿದ್ದುಪಡಿ ಮಾಡಿಕೊಂಡು, ರಾಜ್ಯಪಾಲರಿಂದ ಅನುಮೋದನೆ ಪಡೆದ ನಂತರ ಪ್ರವೇಶ ಪ್ರಕ್ರಿಯೆ ನಡೆಸಬೇಕು. ಆದರೆ, ಕನ್ನಡ ವಿಶ್ವವಿದ್ಯಾಲಯದ ಪರಿನಿಯಮಕ್ಕೆ ಇದುವರೆಗೆ ತಿದ್ದುಪಡಿಯೇ ಮಾಡಿಕೊಂಡಿಲ್ಲ. ಬೋಧಕ ಹುದ್ದೆಗಳ ವಿಷಯದಲ್ಲೂ ಇದೇ ಮಾನದಂಡ ಅನುಸರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಯಾವ ಕೋರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಯಾವ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು ಎನ್ನುವುದನ್ನು ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ತಿಳಿಸಬೇಕು. ಆದರೆ, ವಿದ್ಯಾರ್ಹತೆ ಬದಲು ನಿರ್ದಿಷ್ಟ ಅಧ್ಯಯನ ಕ್ಷೇತ್ರಗಳನ್ನು ತಿಳಿಸಲಾಗಿದೆ. ಉದಾಹರಣೆಗೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಲಲಿತ ಪ್ರಬಂಧ, ಪ್ರಬಂಧ, ಕಥೆ, ಕಾದಂಬರಿ ಎಂದು ಉಲ್ಲೇಖಿಸಲಾಗಿದೆ. ಪಿಎಚ್‌.ಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದವರಿಗೆ ಕನಿಷ್ಠ ಶೇ 55ರಷ್ಟು ಹಾಗೂ ಎಸ್ಸಿ/ಎಸ್ಟಿ, ಇತರೆ ಹಿಂದುಳಿದ ವರ್ಗದವರಿಗೆ ಶೇ 50ರಷ್ಟು ಅಂಕ ಹಾಗೂ ಶುಲ್ಕ ವಿನಾಯಿತಿಯ ವಿವರ ತೋರಿಸಬೇಕು. ಆದರೆ, ಎಸ್ಸಿ/ಎಸ್ಟಿ, ಪ್ರವರ್ಗ–1ಕ್ಕಷ್ಟೇ ಸೌಲಭ್ಯಗಳನ್ನು ತೋರಿಸಲಾಗಿದೆ. 371(ಜೆ) ಅಡಿ ಅರ್ಜಿ ಸಲ್ಲಿಸುವವರು ಆ ವಿವರವನ್ನು ನಮೂದಿಸಬೇಕೆಂದು ತಿಳಿಸಲಾಗಿದೆ. ಆದರೆ, 371(ಜೆ) ಅಡಿ ಎಷ್ಟು ಸೀಟುಗಳಿವೆ, ಇತರೆ ಭಾಗದವರಿಗೆ ಎಷ್ಟು ಸೀಟುಗಳಿಗೆ ಎನ್ನುವುದನ್ನು ತೋರಿಸಿಲ್ಲ.

ಇನ್ನು, ವಿಶ್ವವಿದ್ಯಾಲಯದಲ್ಲಿ 61 ಸೀಟು, ವಿ.ವಿ. ವ್ಯಾಪ್ತಿಯ ಬೇರೆ ಕೇಂದ್ರಗಳಲ್ಲಿ 393 ಪಿಎಚ್‌.ಡಿ. ಸೀಟುಗಳಿವೆ. ಆದರೆ, ಬಹುತೇಕ ಕೇಂದ್ರಗಳಲ್ಲಿ ಮೂಲಸೌಕರ್ಯ, ಪಿಎಚ್‌.ಡಿ ಗೈಡ್‌ಗಳಿಲ್ಲ. ಹೀಗಿರುವಾಗ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಿಎಚ್‌.ಡಿ. ಸೀಟುಗಳನ್ನು ತುಂಬುತ್ತಿರುವುದೇಕೆ? ಇದರ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಮಾಡುವ ಉದ್ದೇಶ ಅಡಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕುಲಸಚಿವರು ಏನೆನ್ನುತ್ತಾರೆ?

‘ಎಸ್ಸಿ/ಎಸ್ಟಿ, ಪ್ರವರ್ಗ–1ಕ್ಕೆ ಮಾತ್ರ ಶುಲ್ಕ ವಿನಾಯಿತಿ ಇದೆ. ಇತರೆ ಹಿಂದುಳಿದ ವರ್ಗದವರು ಸಾಮಾನ್ಯ ವರ್ಗದವರಂತೆ ಶುಲ್ಕ ಕಟ್ಟಬೇಕು. 2009ರಲ್ಲಿ ಪಿಎಚ್‌.ಡಿ. ಪ್ರವೇಶಕ್ಕೆ ಯುಜಿಸಿ ಕೋರ್ಸ್‌ ವರ್ಕ್‌ ಕಡ್ಡಾಯಗೊಳಿಸಿತ್ತು. ಅದಕ್ಕಾಗಿ ಅಧಿಸೂಚನೆಯಲ್ಲಿ ಈ ಅಂಶ ತೋರಿಸಲಾಗಿದೆ. ಆದರೂ ಈ ವಿಷಯದ ಕುರಿತು ಅಧ್ಯಯನಾಂಗದ ನಿರ್ದೇಶಕರೊಂದಿಗೆ ಚರ್ಚಿಸುವೆ’ ಎಂದು ಕನ್ನಡ ವಿ.ವಿ. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT