ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ಅತ್ಯಂತ ಜನಪ್ರಿಯ ಧ್ವನಿಬೆಳಕಿಗೆ ಮಂಕು?

Published 19 ಜನವರಿ 2024, 6:42 IST
Last Updated 19 ಜನವರಿ 2024, 6:42 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದಲ್ಲಿ ಅತ್ಯಂತ ಜನಪ್ರಿಯ ಪ್ರದರ್ಶನವೆಂದರೆ ‘ವಿಜಯನಗರ ವೈಭವ ಧ್ವನಿ ಬೆಳಕು’. ಈ ಬಾರಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಭವಿ ತಂತ್ರಜ್ಞರು ಅಲಭ್ಯರಿರುವ ಕಾರಣ ಇಡೀ ಕಾರ್ಯಕ್ರಮವೇ ಮಂಕಾಗಿ ಹೋಗುವ ಸಾಧ್ಯತೆ ದಟ್ಟವಾಗಿದೆ.

‘ವಿಜಯನಗರ ವೈಭವ’ ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ತಂತ್ರಜ್ಞರನ್ನು, ತಜ್ಞರನ್ನು ಕಳುಹಿಸಿಕೊಡಬೇಕು ಎಂಬ ವಿಜಯನಗರ ಜಿಲ್ಲಾಧಿಕಾರಿ ಅವರ ಪತ್ರವನ್ನು ಬೆಂಗಳೂರಿನ ಕೇಂದ್ರ ಪ್ರಸಾರ ಇಲಾಖೆಯ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಮಹಾನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಇದಕ್ಕೆ ಜ.18ರಂದು ಉತ್ತರ ಬರೆದಿರುವ ಸಹಾಯಕ ನಿರ್ದೇಶಕಿ (ಕಾರ್ಯಕ್ರಮ) ಡಾ. ಚೈತ್ರಾ ಶರ್ಮಾ ಅವರು, ಸದ್ಯ ದೇಶದಾದ್ಯಂತ ಕೇಂದ್ರ ಸರ್ಕಾರದ ಕಳೆದ 5 ವರ್ಷಗಳ ಸಾಧನೆಯನ್ನು ಬಿಂಬಿಸುವ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ವ್ಯಾನ್‌ ಪ್ರಚಾರ ನಡೆಯುತ್ತಿರುವುದರಿಂದ ಕೇಂದ್ರ ಕಚೇರಿ ಅಥವಾ ಪ್ರಾದೇಶಿಕ ಕಚೇರಿಗಳಿಂದ ತಂತ್ರಜ್ಞರನ್ನು ಕಳುಹಿಸಿಕೊಡಲು ಸಾಧ್ಯವಿಲ್ಲ, ಈ ಬಾರಿ ನೀವೇ ಸ್ಥಳೀಯವಾಗಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಈ ಪತ್ರ  ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆದರೆ ಈ ಆತಂಕವನ್ನು ಅಲ್ಲಗಳೆದಿರುವ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌, ‘ನಾನೇ ಬೆಂಗಳೂರು ಮತ್ತು ದೆಹಲಿಯಲ್ಲಿರುವ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಂಟು ಜನ ತಂತ್ರಜ್ಞರನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಅಗತ್ಯದ ಸಾಧನಗಳು ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲೇ ಇದ್ದು, ಅದನ್ನು ತರಿಸಿಕೊಳ್ಳುವ ಕೆಲಸವಷ್ಟೇ ಜಿಲ್ಲಾಡಳಿತ ಮಾಡಬೇಕಿದೆ. ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಧ್ವನಿಬೆಳಕಿಗೆ ಯಾವುದೇ ಮಂಕು ಕವಿಯುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಆತಂಕ ಏಕಾಗಿ?: ಹಂಪಿ ಉತ್ಸವ ಆರಂಭವಾಗಿ 20 ವರ್ಷ ಕಳೆಯಿತು. ಆಂದಿನಿಂದಲೂ ಇಡೀ ಉತ್ಸವದ ಮುಖ್ಯ ಆಕರ್ಷಣೆಯೇ ‘ವಿಜಯನಗರ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮ. ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುವಲ್ಲಿ ಪುಣೆ, ಹೈದರಾಬಾದ್‌ಗಳಿಂದ ಬರುತ್ತಿದ್ದ ತಂತ್ರಜ್ಞರ ಪಾತ್ರ ದೊಡ್ಡದಿತ್ತು. ಕನ್ನಡ ಭಾಷೆ ಬಾರದಿದ್ದರೂ ಕಾರ್ಯಕ್ರಮಕ್ಕೆ ಒಂದಿಷ್ಟು ಚ್ಯುತಿ ಆಗದಂತೆ ವ್ಯವಸ್ಥೆ ಮಾಡುತ್ತಿದ್ದುದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿತ್ತು. ಸಹಾಯಕ ನಿರ್ದೇಶಕರ ಪತ್ರವನ್ನು ನಂಬುವುದಾದರೆ ಇಂತಹ ಅನುಭವಿ ತಂತ್ರಜ್ಞರು ಈ ಬಾರಿ ಲಭ್ಯವಾಗುವುದು ಕಷ್ಟಸಾಧ್ಯ.

ಮೇಲಾಗಿ ‘ವಿಜಯನಗರ ವೈಭವ’ದ ಪ್ರಸಿದ್ಧ ನಿರ್ದೇಶಕರಾಗಿ ಗಮನ ಸೆಳೆದಿದ್ದ ಹೂಗೊಪ್ಪಲು ಕೃಷ್ಣಮೂರ್ತಿ ಮತ್ತು ಸಹಾಯಕ ನಿರ್ದೇಶಕ ಮನೋಹರ್ ಅವರು ನಿವೃತ್ತಿಯಾಗಿದ್ದಾರೆ. ರಾಜ್ಯದ ಪ್ರಾದೇಶಿಕ ಕಚೇರಿಯಲ್ಲಿ ಸಹ ಕನ್ನಡ ಬಲ್ಲ ಅಧಿಕಾರಿಗಳು, ತಂತ್ರಜ್ಞರ ಕೊರತೆ ಇದೆ. ಇದೆಲ್ಲವನ್ನೂ ಕಂಡಾಗ ಈ ಬಾರಿಯ ‘ಧ್ವನಿ ಬೆಳಕು’ ಅಷ್ಟಾಗಿ ಪ್ರಕಾಶಮಾನವಾಗಿರದು ಎಂಬ ಆತಂಕ ನೆಲೆಸಿದೆ.

ಹಂಪಿ ಉತ್ಸವ ಲಾಂಛನ
ಹಂಪಿ ಉತ್ಸವ ಲಾಂಛನ
ಧ್ವನಿಬೆಳಕಿನ ವೈಭವ ಪ್ರತಿ ವರ್ಷದಂತೆ ಈ ವರ್ಷವೂ ಇರುತ್ತದೆ. ಸ್ಥಳೀಯ ಕಲಾವಿದರು ಸಜ್ಜಾಗಿದ್ದು ಎಲ್ಲವೂ ಯೋಜನಾಬದ್ಧವಾಗಿಯೇ ನಡೆಯಲಿದೆ
ಎಂ.ಎಸ್‌.ದಿವಾಕರ್ ಜಿಲ್ಲಾಧಿಕಾರಿ
ಕಿಕ್ಕಿರಿದು ಸೇರುವ ಪ್ರೇಕ್ಷಕರು
ಮುಖ್ಯ ವೇದಿಕೆಯಲ್ಲಿ ಬಾಲಿವುಡ್ ಗಾಯಕರು ಕಲಾವಿದರು ಪ್ರದರ್ಶನ ನೀಡುತ್ತಿದ್ದರೂ ಅದೇ ಹೊತ್ತಿನಲ್ಲಿ ಧ್ವನಿ ಬೆಳಕಿನ ಕಾರ್ಯಕ್ರವನ್ನು ಕಿಕ್ಕಿರಿದು ಜನ ನೋಡುವುದೇ ಇದರ ವೈಶಿಷ್ಟ್ಯ. ಮುಖ್ಯ ವೇದಿಕೆ ಬಿಕೋ ಎಂದು ಹೇಳಿದ ಅದೆಷ್ಟೋ ನಿದರ್ಶನ ಇದೆ. ಆದರೆ ಆನೆಸಾಲು ಪ್ರದೇಶದಲ್ಲಿ ನಡೆಯುವ ಧ್ವನಿ ಬೆಳಕು ಕಾರ್ಯಕ್ರಮ ಮಾತ್ರ ಪ್ರೇಕ್ಷಕರಿಲ್ಲದೆ ಸಪ್ಪೆಯಾದ ನಿದರ್ಶನವೇ ಇಲ್ಲ. ಸ್ಥಳೀಯ 110 ಮಂದಿ ಕಲಾವಿದರು ಹಿನ್ನೆಲೆ ಧ್ವನಿಗೆ ಮುಂಭಾಗದ ಬೆಳಕಿಗೆ ತಮ್ಮ ವೇಷಭೂಷಣದೊಂದಿಗೆ ವೇದಿಕೆಗೆ ಬಂದು ದೃಶ್ಯಕಾವ್ಯ ಕಟ್ಟಿಕೊಡುವ ಕಾರ್ಯಕ್ರಮಕ್ಕೆ ಈ ಬಾರಿಯೂ ಮಂಕು ಕವಿಯಬಾರದು ಎಂದು ಅನೇಕ ಮಂದಿ ಸ್ಥಳೀಯರು ಹಾಗೂ ಕಲಾವಿದರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT