ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ - ಪ್ರತಿ ಕಂದಾಯ ಗ್ರಾಮಗಳಿಗೆ 10 ಹೋಂ ಸ್ಟೇ: ಸಚಿವ ಆನಂದ್‌ ಸಿಂಗ್‌

Last Updated 13 ಜುಲೈ 2022, 13:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಹೊಸ ಕರಡಿನಲ್ಲಿ ಪ್ರತಿ ಕಂದಾಯ ಗ್ರಾಮಗಳಲ್ಲಿ 10 ಹೋಂ ಸ್ಟೇ ನಡೆಸಲು ಅನುಮತಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜು. 27ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಹಂಪಿ ಮಾಸ್ಟರ್‌ಪ್ಲ್ಯಾನ್‌ಗೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಧಿಕಾರವು ಹಂಪಿ ಸಂರಕ್ಷಣೆ, ನಿರ್ವಹಣೆ, ಅಭಿವೃದ್ಧಿಗಾಗಿ ರಚನೆಯಾದ ಸಂಸ್ಥೆ. ಹೊಸ ಮಾಸ್ಟರ್‌ ಪ್ಲ್ಯಾನ್‌ನಿಂದ ಹಂಪಿಯ ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚಿಸಿದರು.

ಹೊಸ ಕರಡಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವ ಅವಧಿ ಕೊನೆಗೊಂಡ ನಂತರ, ಅವುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್ ಪಿ., ಕೊಪ್ಪಳ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರಿಗೆ ನಿರ್ದೇಶನ ನೀಡಿದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು, ಕರಡಿನಲ್ಲಿರುವ ಕೆಲ ಅಂಶಗಳ ಬಗ್ಗೆ ಆಕ್ಷೇಪ ಇದೆ. ಅದರ ವಿವರ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಿರುವೆ ಎಂದು ಹೇಳಿ ಪತ್ರ ಸಲ್ಲಿಸಿದರು.

ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಮಾತನಾಡಿ, ಪ್ರಾಧಿಕಾರದ ಅಡಿ 41.80 ಚದರ ಕಿ.ಮೀ ಕೋರ್ ಜೋನ್, 191.65 ಚದರ ಕಿ.ಮೀ ಬಫರ್ ಜೋನ್‌, ಫೆರಿಫೆರಲ್ ಜೋನ್‌ ಸೇರಿದಂತೆ ಒಟ್ಟು 236.45 ಚದರ ಕಿ.ಮೀ ವಿಸ್ತೀರ್ಣವಿದೆ. ವಿಜಯನಗರ ಜಿಲ್ಲೆಯ 14 ಗ್ರಾಮಗಳು ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ 15 ಗ್ರಾಮಗಳು ಇದರ ವ್ಯಾಪ್ತಿಗೆ ಸೇರುತ್ತವೆ. ಕೊಪ್ಪಳ ಜಿಲ್ಲೆಯ 15 ಗ್ರಾಮಗಳು ಮತ್ತು ವಿಜಯನಗರ ಜಿಲ್ಲೆಯ 14 ಗ್ರಾಮಗಳಲ್ಲಿ ನಡೆಸುತ್ತಿದ್ದ ಅನಧಿಕೃತ ರೆಸಾರ್ಟ್‍ಗಳನ್ನು ಈಗಾಗಲೇ ಬಂದ್‌ ಮಾಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಎಸ್ಪಿ ಡಾ.ಅರುಣ್ ಕೆ., ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ, ವಿಜಯನಗರ ಜಿ.ಪಂ. ಸಿಇಒ ಹರ್ಷಲ್ ಭೋಯರ್‌ ನಾರಾಯಣರಾವ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಹಿರಿಯ ಐ.ಎ.ಎಸ್ ಅಧಿಕಾರಿಗಳಾದ ಮೋಹನ್ ರಾಜ್, ದೀಪಾ ಚೋಳನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT