ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಬದಲಾಗಲಿದೆ ಹೊಸಪೇಟೆಯ ಸಂಪೂರ್ಣ ಚಹರೆ

ಗಾಂಧಿ ಜಯಂತಿಗೆ ಹಲವು ಯೋಜನೆಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ
Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆ ಘೋಷಣೆ ಬೆನ್ನಲ್ಲೇ ಜಿಲ್ಲಾ ಕೇಂದ್ರ ಸ್ಥಾನವಾದ ಹೊಸಪೇಟೆಯ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳು ಅನುಷ್ಠಾನಗೊಂಡರೆ ಇಡೀ ನಗರದ ಸಂಪೂರ್ಣ ಚಹರೆಯೇ ಬದಲಾಗಲಿದೆ.

ಈಗಾಗಲೇ ಬಹುತೇಕ ಯೋಜನೆಗಳಿಗೆ ತಾಂತ್ರಿಕ ಒಪ್ಪಿಗೆ ದೊರೆತಿದೆ. ಅಕ್ಟೋಬರ್‌ 2ರಂದು ನಡೆಯಲಿರುವ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದ ದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗಳಿಗೂ ಚಾಲನೆ ಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ ರಸ್ತೆಯ ಆಯಿಲ್‌ ಫ್ಯಾಕ್ಟರಿಯಿಂದ ಇಂಗಳಗಿ ಕ್ರಾಸ್‌, ಅನಂತಶಯನಗುಡಿಯಿಂದ ಕಡ್ಡಿರಾಂಪುರ ಕ್ರಾಸ್‌ ಹಾಗೂ ಟಿ.ಬಿ. ಡ್ಯಾಂ ರಸ್ತೆಯ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ (ಟಿಎಸ್‌ಪಿ) ಕಚೇರಿ ಎದುರಿನ ರಸ್ತೆ ಚತುಷ್ಫಥವಾಗಿ ಮೇಲ್ದರ್ಜೆಗೇರಲಿವೆ.

ಇನ್ನು, ನಗರದ ಹೆಬ್ಬಾಗಿಲಿನಂತಿರುವ ಸುರಂಗ ಮಾರ್ಗ ಹೆರಿಟೇಜ್‌ ಮಾರ್ಗವಾಗಿ ಬದಲಿಸಲು ಯೋಜನೆ ರೂಪಿಸಲಾಗಿದೆ. ಒಟ್ಟು ₹7 ಕೋಟಿಯಲ್ಲಿ ಹೆರಿಟೇಜ್‌ ದ್ವಾರ, ಬೃಹತ್‌ ಭುವನೇಶ್ವರಿ ದೇವಿಯ ಪುತ್ಥಳಿ ನಿರ್ಮಿಸಲು ಯೋಜನೆ ಸಿದ್ಧಗೊಂಡಿದೆ.

ಇನ್ನು, ನಗರ ಹೊರವಲಯದ ಜೋಳದರಾಶಿ ಗುಡ್ಡದಲ್ಲಿ ರಸ್ತೆ, ಚರಂಡಿ, ವಿದ್ಯುತ್‌ ದೀಪ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸ ಭರದಿಂದ ನಡೆದಿದೆ. ಗುಡ್ಡದ ಮೇಲೆ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 45 ಅಡಿ ಎತ್ತರದ ಶ್ರೀಕೃಷ್ಣದೇವರಾಯನ ಪುತ್ಥಳಿ ನಿರ್ಮಾಣ ಕೆಲಸ ಶೇ 60ರಷ್ಟು ಪೂರ್ಣಗೊಂಡಿದೆ.

ನಗರದ ರೈಲು ನಿಲ್ದಾಣ ರಸ್ತೆಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆ (ಎಲ್‌ಎಲ್‌ಸಿ) ಬಳಿ ಈಗಾಗಲೇ ಸ್ವಾತಂತ್ರ್ಯ ಉದ್ಯಾನ ನಿರ್ಮಾಣ ಕೆಲಸ ಭರದಿಂದ ನಡೆಯುತ್ತಿದೆ. ಅಲ್ಲಿ ಕ್ವಿಟ್‌ ಇಂಡಿಯಾ ಸ್ಮಾರಕ, ಮಹಾತ್ಮ ಗಾಂಧೀಜಿ, ಸೂರ್ಯ ನಮಸ್ಕಾರ ಭಂಗಿಯ 12 ಪುತ್ಥಳಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ₹13.5 ಕೋಟಿಯಲ್ಲಿ ನಗರದ ಉದ್ಯೋಗ ಪೆಟ್ರೋಲ್‌ ಬಂಕ್‌ ಬಳಿ ಸುಸಜ್ಜಿತ ಸೂಪರ್‌ ಮಾರ್ಕೆಟ್‌ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಗರಸಭೆಯ ಆವರಣದಲ್ಲಿರುವ ಎಂ.ಪಿ. ಪ್ರಕಾಶ್‌ ಕಲಾ ಮಂದಿರ ಅವೈಜ್ಞಾನಿಕವಾಗಿ ಕಟ್ಟಿದ್ದು, ಅಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಆ ಇಡೀ ಕಟ್ಟಡವನ್ನು ತೆರವುಗೊಳಿಸಿ, ನಗರದ ಬೇರೊಂದು ಕಡೆ ₹10 ಕೋಟಿಯಲ್ಲಿ ಎಂ.ಪಿ. ಪ್ರಕಾಶ್‌ ಕಲಾಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಸ್ಥಳದ ಹುಡುಕಾಟ ನಡೆದಿದ್ದು, ಅದು ಅಂತಿಮಗೊಂಡರೆ ಕೆಲಸ ಆರಂಭವಾಗುತ್ತದೆ.

ನಗರದ ಮಧ್ಯಭಾಗದಲ್ಲಿರುವ ಮುನ್ಸಿಪಲ್‌ ಮೈದಾನ, ತಾಲ್ಲೂಕು ಕ್ರೀಡಾಂಗಣವನ್ನು ಒಟ್ಟುಗೂಡಿಸಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸುವ ಯೋಜನೆ ಕೈಬಿಡಲಾಗಿದೆ. ಈಗಿರುವ ಎರಡೂ ಮೈದಾನಗಳ ಸುತ್ತ ಗ್ರಿಲ್‌ ಅಳವಡಿಸಿ, ಭದ್ರತೆ ಕಲ್ಪಿಸಿ, ಸುತ್ತಲೂ ₹3.5 ಕೋಟಿಯಲ್ಲಿ ನಡಿಗೆ ಪಥ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ನಗರದ ಮಧ್ಯಭಾಗದಲ್ಲಿ ವಾಕಿಂಗ್‌ ಮಾಡಲು ಈಗಿರುವ ಜಾಗ ಬಿಟ್ಟರೆ ಮತ್ತೊಂದು ಇಲ್ಲ. ಅದನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಜಿಲ್ಲಾ ಕ್ರೀಡಾಂಗಣವನ್ನು ನಗರದ ಹೊರಭಾಗದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಇನ್ನಷ್ಟೇ ಸ್ಥಳ ಅಂತಿಮಗೊಳ್ಳಬೇಕಿದೆ.

ಇನ್ನು, ನಗರದ ಟಿಎಸ್‌ಪಿ ಜಾಗವನ್ನು ಮೂರು ಭಾಗಗಳಾಗಿ ಮಾಡಿಕೊಳ್ಳಲಾಗುತ್ತಿದ್ದು, ಈಗಿರುವ ಹಳೆಯ ಕಟ್ಟಡವನ್ನು ₹6 ಕೋಟಿಯಲ್ಲಿ ನವೀಕರಣಗೊಳಿಸಲಾಗುತ್ತಿದೆ. ಕೆಲಸ ಪೂರ್ಣಗೊಂಡ ನಂತರ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಲಿದೆ. 35 ಎಕರೆಯಲ್ಲಿ ಮೆಡಿಸಿಟಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು, ಅದರಲ್ಲಿ ಮೆಡಿಕಲ್‌, ನರ್ಸಿಂಗ್‌ ಕಾಲೇಜು ನಿರ್ಮಿಸಲು ಯೋಜಿಸಲಾಗಿದೆ. ಇನ್ನು 35 ಎಕರೆಯಲ್ಲಿ ವಸತಿಗೃಹ ನಿರ್ಮಾಣವಾಗಲಿವೆ. ಹೀಗೆ ಸಾಲು ಸಾಲು ಯೋಜನೆಗಳಿಂದ ನಗರದ ಚಹರೆಯೇ ಬದಲಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT