ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಲಾಕ್‌ಡೌನ್‌ ಮತ್ತಷ್ಟು ಸಡಿಲ; ಇನ್ನಷ್ಟು ನಿರಾಳ

ಹೋಟೆಲ್‌ನಲ್ಲಿ ಉಪಾಹಾರ ಸವಿದರು, ಬಟ್ಟೆ ಖರೀದಿಸಿದರು
Last Updated 22 ಜೂನ್ 2021, 10:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಲಾಕ್‌ಡೌನ್‌ ಬಹುತೇಕ ಸಡಿಲಿಸಿ, ಸಂಜೆ ವರೆಗೆ ವಹಿವಾಟಿಗೆ ಅವಕಾಶ ಕಲ್ಪಿಸಿರುವುದರಿಂದ ಜನ, ವ್ಯಾಪಾರಿಗಳು ನಿರಾಳರಾಗಿದ್ದಾರೆ. ಮಂಗಳವಾರ ಮೊದಲ ದಿನವೇ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು.

ಸೋಮವಾರವೇ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಆರಂಭಗೊಂಡಿತು. ಎರಡನೇ ದಿನವೂ ಮುಂದುವರೆಯಿತು. ಮೊದಲ ದಿನದಂತೆ ಎರಡನೇ ದಿನವೂ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಪ್ರಯಾಣಿಕರು ಕಂಡು ಬಂದರು. ಮಧ್ಯಾಹ್ನದ ನಂತರ ಜನ ನಿಲ್ದಾಣದ ಕಡೆಗೆ ಸುಳಿಯಲಿಲ್ಲ.

ಇಷ್ಟು ದಿನ ಪಾರ್ಸೆಲ್‌ ಸೇವೆಗಷ್ಟೇ ಸೀಮಿತವಾಗಿದ್ದ ಹೋಟೆಲ್‌ಗಳಲ್ಲಿ ಜನ ಕುಳಿತುಕೊಂಡು ಉಪಾಹಾರ, ಊಟ ಸವಿದರು. ಮಂಗಳವಾರ ನಗರದ ಬಹುತೇಕ ದರ್ಶಿನಿ, ಹೋಟೆಲ್‌ಗಳು ಬಾಗಿಲು ತೆರೆದಿದ್ದವು. ದರ್ಶಿನಿಗಳಲ್ಲಿ ಜನ ನಿಂತುಕೊಂಡು ಉಪಾಹಾರ ಸವಿದರೆ, ಹೋಟೆಲ್‌ಗಳಲ್ಲಿ ಕುಳಿತುಕೊಂಡು ಊಟ ಮಾಡಿದರು. ಬಹುತೇಕ ಹೋಟೆಲ್‌ಗಳಲ್ಲಿ ಜನ ಕಂಡು ಬಂದರು.

ಸುಮಾರು ಎರಡು ತಿಂಗಳ ನಂತರ ಬಟ್ಟೆ ಅಂಗಡಿಗಳು ಬಾಗಿಲು ತೆರೆದಿದ್ದವು. ಇದರ ನಿರೀಕ್ಷೆಯಲ್ಲಿಯೇ ಜನ ಇದ್ದರೂ ಎಂಬಂತೆ ಮಳಿಗೆ ತೆರೆದ ತಕ್ಷಣ ಒಳ ಹೋಗಿ, ಬಟ್ಟೆ ಬರೆ ಖರೀದಿಸಿದರು. ಹೂ, ಹಣ್ಣು, ಕಾಯಿ, ಬೈಸಿಕಲ್‌, ಪಂಕ್ಚರ್‌, ಚಪ್ಪಲಿ, ಜ್ಯೂಸ್‌, ಝರಾಕ್ಸ್‌, ಎಲೆಕ್ಟ್ರಾನಿಕ್‌ ಮಳಿಗೆಗಳು ಬಾಗಿಲು ತೆರೆದಿದ್ದವು. ಎಲ್ಲ ಕಡೆಗಳಲ್ಲಿ ಜನ ಕಂಡು ಬಂದರು.

ಕೆಲವು ಮಳಿಗೆಯವರು ಜನದಟ್ಟಣೆ ಆಗದಂತೆ ನೋಡಿಕೊಂಡರು. ಕೆಲವೆಡೆ ಅಂತರ ಮರೀಚಿಕೆಯಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಹನಗಳೊಂದಿಗೆ ರಸ್ತೆಗೆ ಇಳಿದಿದ್ದರಿಂದ ಮೇನ್‌ ಬಜಾರ್‌, ಗಾಂಧಿ ವೃತ್ತ, ಹಂಪಿ ರಸ್ತೆ, ಕಾಲೇಜು ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ರಾಮ ಟಾಕೀಸ್‌ ರಸ್ತೆಯಲ್ಲಿ ಜನ, ವಾಹನ ದಟ್ಟಣೆ ಕಂಡು ಬಂತು.

ಸಂಜೆ ಐದು ಗಂಟೆಯ ವರೆಗೆ ಲಾಕ್‌ಡೌನ್‌ ಸಡಿಲಿಸಿರುವುದರಿಂದ ಜನ ದಿನವಿಡೀ ಹೊರಗೆ ಓಡಾಡಿದರು. ವ್ಯಾಪಾರ ವಹಿವಾಟು ನಡೆಯಿತು. ಹೆಚ್ಚಿನ ಕಾಲಾವಕಾಶ ನೀಡಿದ್ದರಿಂದ ಜನ ತರಕಾರಿ, ಹಣ್ಣಿನ ಮಾರುಕಟ್ಟೆಯಲ್ಲಿ ಖರೀದಿಗೆ ಅವಸರ ಮಾಡಲಿಲ್ಲ.

ಜಿಲ್ಲೆಯಲ್ಲಿ ಇಷ್ಟು ದಿನಗಳ ವರೆಗೆ ಇದ್ದ ಕಠಿಣ ಲಾಕ್‌ಡೌನ್‌ ನಿಯಮಗಳು ತೆರವಾಗಿದ್ದರಿಂದ ಜನ ಬೇಕಾಬಿಟ್ಟಿ ಹೊರಗೆ ತಿರುಗಾಡಿದರು. ‘ಲಾಕ್‌ಡೌನ್‌ನಿಂದ ಎಲ್ಲ ವಲಯದವರಿಗೂ ತೊಂದರೆಯಾಗಿದೆ. ಅದರಿಂದ ಹೊರತರಲು ಸರ್ಕಾರ ಲಾಕ್‌ಡೌನ್‌ ತೆರವುಗೊಳಿಸಿದೆ. ಆದರೆ, ಜನ ಅದನ್ನು ಅರಿಯದೆ ಬೇಕಾಬಿಟ್ಟಿ ವರ್ತಿಸುತ್ತಿರುವುದು ಸರಿಯಲ್ಲ. ಈಗಲೂ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ನಿತ್ಯವೂ ಹತ್ತರಿಂದ ಹನ್ನೆರಡು ಜನ ಸಾವನ್ನಪ್ಪುತ್ತಿದ್ದಾರೆ. ಎಚ್ಚರಿಕೆಯಿಂದ ವರ್ತಿಸದಿದ್ದರೆ ಮೂರನೇ ಅಲೆ ಬೇಗ ಬರುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ’ ಹಿರಿಯ ನಾಗರಿಕರಾದ ರಾಮಣ್ಣ, ಬಸವರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT