ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ: ನೂರಾರು ಮಂದಿಯಿಂದ ಹನುಮನ್‌ ಚಾಲೀಸಾ ಪಠಣ

Published 20 ಜನವರಿ 2024, 13:14 IST
Last Updated 20 ಜನವರಿ 2024, 13:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಅಖಂಡ ಹನುಮಾನ್‌ ಚಾಲೀಸಾ ಪಠಣ ಆರಂಭವಾಗಿದ್ದು, ಸರಾಸರಿ 300ರಷ್ಟು ಮಂದಿ 30 ಗಂಟೆ ಅವಧಿಯಲ್ಲಿ 1.20 ಲಕ್ಷಕ್ಕೂ ಅಧಿಕ ಬಾರಿ ಚಾಲೀಸಾ ಪಠಿಸಲಿದ್ದಾರೆ.

ಇಲ್ಲಿನ ಪಟೇಲ್‌ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪವನ್ನು ನೂತನ ರಾಮಮಂದಿರ ರೀತಿಯಲ್ಲೇ ರೂಪಿಸಲಾಗಿದ್ದು, ಇಡೀ ವಾತಾವರಣದಲ್ಲಿ ಆಂಜನೇಯನ ನಾಮಸ್ತುತಿ ಮಾರ್ದನಿಸುತ್ತಿದೆ. ಜಾತಿ, ಮತ ನೋಡದೆ ಎಲ್ಲರಿಗೂ ಚಾಲೀಸಾ ಪಠಿಸಲು ಅವಕಾಶ ನೀಡಲಾಗಿದ್ದು, ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಉತ್ಸಾಹದಿಂದ ಪಠಣ ಮಾಡುತ್ತಿದ್ದಾರೆ. ಶನಿವಾರ ವಿವಿಧ ಗುಂಪುಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಭಕ್ತರು ಚಾಲೀಸಾ ಪಠಿಸಿದರು.

ಶ್ರೀಕ್ಷೇತ್ರ ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಗುರುಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಭಾನುವಾರ ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ಒಂದು ಸಾವಿರ ಮಂದಿಯಿಂದ ಏಕಕಂಠದಲ್ಲಿ ಚಾಲೀಸಾ ಪಠಣ ನಡೆಯಲಿದೆ. ಸಂಜೆ 7ರಿಂದ ಯಲ್ಲಾಪುರ ತಂಡದಿಂದ ಯಕ್ಷಗಾನ ಪ್ರದರ್ಶನ ಇದೆ. ಸೋಮವಾರ ರಾಮತಾರಕ ಸಾಂಗತಾ ಯಜ್ಞ ನಡೆಯಲಿದೆ.

ಬಂದವರಿಗೆಲ್ಲ ಊಟ, ತಿಂಡಿ: ಅಹೋರಾತ್ರಿ ಹನುಮಾನ್ ಚಾಲೀಸಾ ಪಠಣ ನಡೆಯುವುದರಿಂದ ಪಠಿಸಲು ಬಂದವರಿಗೆ ಮಾತ್ರವಲ್ಲ, ನೋಡಲು ಬಂದವರಿಗೆ ಸಹ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿದೆ. 

‘ಲೋಕಕಲ್ಯಾಣಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೊಸಪೇಟೆ, ಸಂಡೂರು, ಕೊಪ್ಪಳ ಭಾಗದ ನಾಮಸಾಧಕ ಸಮಿತಿಯವರಿಗೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಇತರ ಕಡೆಗಳ ಆಸಕ್ತರೂ ಪಾಲ್ಗೊಂಡಿದ್ದಾರೆ. ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದು, ಅವರಿಗೆಲ್ಲರಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ದೂರದಿಂದ ಬಂದವರಿಗೆ ನಗರದ ಉತ್ತರಾದಿ ಮಠದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ‘ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ವೆಂಕೋಬರಾವ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT