ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರೊಂದಿಗೆ ಇರುವೆ: ಕಷ್ಟಗಳಿಗೆ ಸ್ಪಂದಿಸುವೆ - ಜಮೀರ್ ಅಹ್ಮದ್ ಖಾನ್‌

ಕಮಲಾಪುರದಲ್ಲಿ ಜನತಾ ದರ್ಶನ– ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲು ಸ್ವೀಕಾರ
Published 24 ಜನವರಿ 2024, 15:48 IST
Last Updated 24 ಜನವರಿ 2024, 15:48 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಜನತಾ ದರ್ಶನದ ಮೂಲಕ ಆಡಳಿತ ಜನರ ಮನೆಬಾಗಿಲಿಗೆ ಹೋಗಬೇಕು ಎಂಬುದು ನಮ್ಮ ಉದ್ದೇಶ. ಜನರೊಂದಿಗೆ ಬೆರೆಯುವ ಜತೆಗೆ ಅವರ ಕಷ್ಟಗಳಿಗೆ ಸ್ಪಂದಿಸುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹೊಸಪೇಟೆ ತಾಲ್ಲೂಕು ಆಡಳಿತಗಳಿಂದಕಮಲಾಪುರದ ಹೊಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಬುಧವಾರ ನಡೆದ ಕಮಲಾಪುರ ಪಟ್ಟಣದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಕಲ್ಪನೆಯ ಜನತಾ ದರ್ಶನ ಎಲ್ಲೆಡೆ ಯಶಸ್ವಿಯಾಗುತ್ತಿದೆ, ವಿಜಯನಗರ ಜಿಲ್ಲೆಯಲ್ಲೂ ನಿಯಮತವಾಗಿ ಜನತಾ ದರ್ಶನ ನಡೆಯುತ್ತಿದೆ, ಜನರಿಗೆ ಪರಿಹಾರಗಳು ಸಿಗುತ್ತಿವೆ ಎಂದರು.

ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಹಾಗೂ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಅವರ ಸಮ್ಮುಖದಲ್ಲಿ ಸಚಿವರು ಸಾರ್ವಜನಿಕರ ಅಹವಾಲು ಆಲಿಸಿದ್ದು ವಿಶೇಷವಾಗಿತ್ತು.

ನಿವಾಸಿಗಳಿಂದ ಜೈಕಾರ: ಬೈಪಾಸ್ ರಸ್ತೆಯಲ್ಲಿನ ಜಂಬುನಾಥಹಳ್ಳಿಯ ಆಶ್ರಯ ಕಾಲೋನಿಯ ನಿವಾಸಿಗಳು ತಂಡವಾಗಿ ವೇದಿಕೆಗೆ ಬಂದು ಸಚಿವರಿಗೆ ತಮ್ಮ ಅಹವಾಲನ್ನು ಸಲ್ಲಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ ಸಚಿವರು, ಈ ನಿವಾಸಿಗಳ ಎಲ್ಲ ಮನೆಗಳಿಗೆ ಹಾಕಿರುವ ದಂಡವನ್ನು ರದ್ದು ಮಾಡಿ ಮೀಟರ್ ಅಳವಡಿಸಲು ಕ್ರಮ ವಹಿಸಬೇಕು. ಪಟ್ಟಾ ಇಲ್ಲದ ಮನೆಗಳಿಗೆ ಪಟ್ಟಾ ಒದಗಿಸಲು ಪರಿಶೀಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರ ಸ್ಪಂದನೆಗೆ ನಿವಾಸಿಗಳು ವೇದಿಕೆಯಲ್ಲಿಯೇ ಜೈಕಾರ ಕೂಗಿ ಸಚಿವರಿಗೆ ಧನ್ಯವಾದಗಳನ್ನು ತಿಳಿಸಿದರು.

ಸ್ಥಳದಲ್ಲಿಯೇ ಆದೇಶ ಪತ್ರ ವಿತರಣೆ: ಜನತಾ ದರ್ಶನದಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಅರ್ಜಿಗಳನ್ನು ಸಲ್ಲಿಸುವ ಮುನ್ನ ಕೌಂಟರ್‌ನಲ್ಲಿ ನೋಂದಾಯಿಸಲು ವ್ಯವಸ್ಥೆ ಮಾಡಿಸಲಾಗಿತ್ತು. ಬೆಳಗ್ಗೆ ಅರ್ಜಿ ಸಲ್ಲಿಸಿದ ಗೋಸಮ್ಮ ಅವರು ವಿದವಾ ವೇತನ ಮಾಸಾಶನ ಆದೇಶ, ಅಶ್ವತ್ಥಮ್ಮ ಅವರು ಸಂದ್ಯಾ ಸುರಕ್ಷಾ ಮಾಸಾಶನ, ವಿಕಲಚೇತನ ಹುಲಗಪ್ಪ ಅವರು ಅಂಗವೀಕಲ ಪೋಷಣಾ ಮಾಸಾಶನ ಆದೇಶ ಪತ್ರಗಳನ್ನು ಸಚಿವರಿಂದ ಪಡೆದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಚಿವರು ವೇದಿಕೆಯಿಂದ ಕೆಳಗಿಳಿದು ಜನರ ಮಧ್ಯೆ ನಡೆದು ಸಾರ್ವಜನಿಕರ ಅಹವಾಲು ಆಲಿಸಿದರು.

ಅರ್ಜಿಗಳ ನೋಂದಣಿ: ಕಂದಾಯ ಇಲಾಖೆಗೆ ಹೆಚ್ಚಿನ ಅರ್ಜಿಗಳು ಸ್ವೀಕೃತವಾದವು. ಇನ್ನುಳಿದಂತೆ ಜಿಲ್ಲಾ ಪಂಚಾಯಿತಿಗೆ 41, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 11, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆಗೆ ತಲಾ 1, ಆರೋಗ್ಯ ಇಲಾಖೆಗೆ 6 ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳ ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಹಂಪಿ ಉತ್ಸವದಲ್ಲಿ ನಮ್ಮ ಜಿಲ್ಲೆಯ ಹೆಚ್ಚಿನ ಕಲಾವಿದರಿಗೆ ಕಾರ್ಯಕ್ರಮ ಕೊಡಲು ಅವಕಾಶ ನೀಡಿದ್ದೇವೆ ಎಂದರು.

ಶಾಸಕಿ ಎಂ.ಪಿ.ಲತಾ ಮಾತನಾಡಿ, ಹಂಪಿ ಉತ್ಸವವನ್ನು ಜನೋತ್ಸವ ಎಂದು ಎಂ.ಪಿ.ಪ್ರಕಾಶ ಅವರು ಕರೆಯುತ್ತಿದ್ದರು. ಅವರ ಆಶಯದಂತೆ ಹಂಪಿ ಉತ್ಸವವು ನಿರಂತರವಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ಸಹ ಅರ್ಜಿಗಳನ್ನು ಸಲ್ಲಿಸಿ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನರಾಜ್ ಸಿಂಗ್, ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್.,  ಉಪವಿಭಾಗಾಧಿಕಾರಿ  ಮೊಹಮ್ಮದ್ ಅಲಿ ಅಕ್ರಂ ಷಾ, ಹರಪನಹಳ್ಳಿ ಉಪವಿಭಾಗಾಧಿಕಾರಿ ಪ್ರಕಾಶ, ತಹಶೀಲ್ದಾರ್ಬ ವಿಶ್ವಜೀತ್ ಮೆಹತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಹಂಪಿ ಉತ್ಸವಕ್ಕಾಗಿ 60 ಎಕರೆ ಪ್ರದೇಶವನ್ನು ತಾತ್ಕಾಲಿಕ ಪಾರ್ಕಿಂಗ್ ಮಾಡಲು ಸಹಕರಿಸಿದ ಜಮೀನುದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ‌

-ಜಮೀರ್ ಅಹ್ಮದ್‌ ಖಾನ್ ಜಿಲ್ಲಾ ಉಸ್ತುವಾರಿ ಸಚಿವ

‘ಹಂಪಿ ಉತ್ಸವ ಈ ಬಾರಿ ಜನೋತ್ಸವ’ ‌

ಹಂಪಿ ಉತ್ಸವ ಈ ಬಾರಿ ಜನರ ಉತ್ಸವವಾಗಲಿದೆ. ಫೆ.2  ಮತ್ತು 4ರಂದು ನಡೆಯುವ ಉತ್ಸವಕ್ಕೆ ಸಾರ್ವಜನಿಕರು ಆಗಮಿಸಲು 100 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹಂಪಿ ಉತ್ಸವಕ್ಕೆ ಪ್ರತಿಯೊಬ್ಬರು ಸಹ ಸಹಕಾರ ನೀಡುತ್ತಿದ್ದಾರೆ. ಜನೋತ್ಸವವಾಗುವ ನಿಟ್ಟಿನಲ್ಲಿ ಮೊದಲನೇ ದಿನ ಎತ್ತುಗಳ ಪ್ರದರ್ಶನ 2ನೇ ದಿನ ಕುರಿಗಳ ಪ್ರದರ್ಶನ 3ನೇ ದಿನ ಶ್ವಾನಗಳ ಪ್ರದರ್ಶನ ನಡೆಯಲಿದೆ. ಸಿರಿಧಾನ್ಯ ಪಾಕ ಸ್ಪರ್ಧೆ ಮಕ್ಕಳ ಕಾರ್ಯಕ್ರಮಗಳೂ ನಡೆಯಲಿವೆ. ಎಲ್ಲರೂ ಭಾಗಿಯಾಗಿ ಕಾರ್ಯಕ್ರಮ ಯಶಗೊಳಿಸಬೇಕು’ ಎಂದು ಸಚಿವ ಜಮೀರ್‌ ಅಹ್ಮದ್ ಖಾನ್ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT