ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: 1.65 ಲಕ್ಷ ಕ್ಯುಸೆಕ್‌ಗೆ ಹೆಚ್ಚಾದ ತುಂಗಭದ್ರಾ ಒಳಹರಿವು

Last Updated 17 ಜುಲೈ 2022, 8:16 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಭಾನುವಾರ 1.65 ಲಕ್ಷ ಕ್ಯುಸೆಕ್‌ಗೆ ಹೆಚ್ಚಾಗಿದ್ದು, ನದಿ ತೀರದ ಗ್ರಾಮಗಳ ನೂರಾರು ಎಕರೆ ಬೆಳೆ ಜಲಾವೃತವಾಗಿದೆ.

ಶನಿವಾರ 1.49 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ತುಂಗಾ ಮತ್ತು ಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ನದಿಯಲ್ಲಿ ಸತತ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹಿರೇಬನ್ನಿಮಟ್ಟಿ, ಚಿಕ್ಕಬನ್ನಿಮಟ್ಟಿ, ಬ್ಯಾಲಹುಣ್ಸಿ, ಅಂಗೂರು ಗ್ರಾಮಗಳ ನದಿ ತೀರದ ಹೊಲ ಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ನೂರಾರು ಎಕರೆ ಭತ್ತ, ಕಬ್ಬು, ಮೆಕ್ಕೆಜೋಳ, ಅಡಿಕೆ ಬೆಳೆಗಳು ಜಲಾವೃತವಾಗಿವೆ. ಪ್ರಸಿದ್ಧ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನಕ್ಕೆ ನದಿ ನೀರು ಸುತ್ತುವರಿದಿದೆ. ಹರಪನಹಳ್ಳಿ ತಾಲ್ಲೂಕಿನ ತಾವರಗುಂದಿ, ನಿಟ್ಟೂರು ಸಮೀಪ ಭತ್ತದ ಗದ್ದೆ, ತೆಂಗಿನ ತೋಟ ಜಲಾವೃತವಾಗಿದೆ.

1 ಕ್ರಸ್ಟ್‌ಗೇಟ್‌ ದುರಸ್ತಿ: ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 31ರಿಂದ ನದಿಗೆ ನೀರು ಹರಿಸಲಾಗುತ್ತಿದೆ. 20 ಕ್ರಸ್ಟ್‌ಗೇಟ್‌ಗಳನ್ನು ನಾಲ್ಕು ಅಡಿ, 11 ಕ್ರಸ್ಟ್‌ಗೇಟ್‌ಗಳನ್ನು ಎರಡೂವರೆ ಅಡಿ ಮೇಲಕ್ಕೆತ್ತಿ ನದಿಗೆ 1.49 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಮೂರು ಕ್ರಸ್ಟ್‌ಗೇಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಒಂದು ಕ್ರಸ್ಟ್‌ಗೇಟ್‌ ದುರಸ್ತಿ ಕಾರ್ಯ ಪೂರ್ಣಗೊಂಡಿರುವುದರಿಂದ ಅದರಿಂದ ನೀರು ಹರಿಸಲಾಗುತ್ತಿದೆ. ಇನ್ನೆರಡರ ದುರಸ್ತಿ ಕೆಲಸ ಮುಂದುವರೆದಿದ್ದು, ಅವುಗಳಿಂದಲೂ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಹಂಪಿಯ ಸ್ನಾನಘಟ್ಟ, ಚಕ್ರತೀರ್ಥ, ರಾಮ–ಲಕ್ಷ್ಮಣ ದೇವಸ್ಥಾನ, ಕರ್ಮ ಮಂಟಪ, ಪುರಂದರದಾಸರ ಮಂಟಪ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿವೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಅವುಗಳು ಎಷ್ಟೂ ಗೋಚರಿಸುತ್ತಿಲ್ಲ. ನದಿ ತೀರದಲ್ಲಿ ಪೊಲೀಸರು, ಪ್ರವಾಸಿ ಮಿತ್ರರು ಹಾಗೂ ಗೃಹರಕ್ಷಕ ದಳದವರನ್ನು ನಿಯೋಜಿಸಲಾಗಿದ್ದು, ಪ್ರವಾಸಿಗರನ್ನು ಹೋಗಲು ಬಿಡುತ್ತಿಲ್ಲ. ದೂರದಲ್ಲೇ ನಿಂತು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 96.191 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ನಿತ್ಯ ಸರಾಸರಿ 12 ಟಿಎಂಸಿ ಅಡಿ ನೀರು ಹರಿದು ಬರುತ್ತಿರುವುದರಿಂದ ಹೆಚ್ಚುವರಿ ನೀರನ್ನು ನೇರ ನದಿಗೆ ಹರಿಸಲಾಗುತ್ತಿದೆ. ಶನಿವಾರ 95.086 ಟಿಎಂಸಿ ಅಡಿ, ಶುಕ್ರವಾರ 94.857 ಟಿಎಂಸಿ ಅಡಿ, ಗುರುವಾರ 97.677 ಟಿಎಂಸಿ ಅಡಿ, ಬುಧವಾರ 99.898 ಟಿಎಂಸಿ ಅಡಿ, ಮಂಗಳವಾರ 97.906 ಟಿಎಂಸಿ ಅಡಿ, ಸೋಮವಾರ 91.014 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.

ಬಿಡುವು ಕೊಟ್ಟ ಮಳೆ:ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಬಿಡುವು ಕೊಟ್ಟಿದೆ. ಬಿಟ್ಟು ಬಿಟ್ಟು ತುಂತುರು ಮಳೆಯಷ್ಟೇ ಸುರಿಯುತ್ತಿದೆ. ಕಾರ್ಮೋಡ ಆವರಿಸಿಕೊಂಡಿದೆ.

ಅಂಕಿ ಅಂಶ
105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ
96.191 ಟಿಎಂಸಿ ಅಡಿ ಈಗ ಸಂಗ್ರಹಗೊಂಡ ನೀರು
1.65 ಲಕ್ಷ ಕ್ಯುಸೆಕ್‌ ಒಳಹರಿವು
1.53 ಲಕ್ಷ ಕ್ಯುಸೆಕ್‌ ಹೊರಹರಿವು
1.49 ಲಕ್ಷ ಕ್ಯುಸೆಕ್‌ ನದಿಗೆ
5073 ಕ್ಯುಸೆಕ್‌ ಕಾಲುವೆಗಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT