ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಕುರುಬರ ಸಂಘದ ಕಚೇರಿ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನಗರದ ಹಂಪಿ ರಸ್ತೆಯ ತಾಲ್ಲೂಕು ಕುರುಬರ ಸಂಘದ ಕಟ್ಟಡದಲ್ಲಿ ನಡೆಯಿತು.
ನೂತನ ಜಿಲ್ಲಾ ಸಂಘದ ಕಚೇರಿಯನ್ನು ಕುಲಗುರು ಗುರುವಿನ ಮಲ್ಲಯ್ಯ ಒಡೆಯರ್ ಉದ್ಘಾಟಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಎರೆಗೌಡ ಡೊಳ್ಳು ಬಾರಿಸಿ ಚಾಲನೆ ನೀಡಿದರು.
ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಸಂಘ ಕಟ್ಟಿಕೊಳ್ಳುವ ಕಲ್ಪನೆ ಇರಲಿಲ್ಲ. ಕಾಲ ನಂತರ ಮೇಲ್ವರ್ಗಗಳು ಸಂಘ ಕಟ್ಟಿಕೊಂಡು ಶೈಕ್ಷಣಿಕ ಕೇಂದ್ರಗಳು, ಮಠಗಳು, ವಸತಿ ನಿಲಯಗಳನ್ನು ಕಟ್ಟಿ ಅಭಿವೃದ್ದಿ ಹೊಂದಿದವು. ನಂತರ ತಳ ಸಮುದಾಯಗಳು ನಾವ್ಯಾಕೆ ಸಂಘ, ಮಠ, ಶಾಲೆ, ಸಮುದಾಯ ಭವನ, ವಸತಿ ನಿಲಯ ಮಾಡಬಾರದೆಂದು ಯೋಚಿಸಿ, ಅಲ್ಲಿಂದ ತಳ ಸಮುದಾಯಗಳು ಶುರು ಮಾಡಿದವು ಎಂದರು.
ಬಳ್ಳಾರಿ ಜಿಲ್ಲಾ ಕುರುಬರ ಸಂಘ ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1944ರಲ್ಲಿ ಪ್ರಾರಂಭಗೊಂಡಿತು. ಅದಾದ ನಂತರ ವೀರಶೈವ ವಿದ್ಯಾವರ್ಧಕ ಸಂಘ 1945ರಲ್ಲಿ, 1965ರಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘಕ್ಕೆ ಸರ್ಕಾರದಿಂದ 1 ಎಕರೆ ಭೂಮಿ ದೊರೆಯಿತು. ಈಗ 30 ರಿಂದ 40 ಕಾಂಪ್ಲೆಕ್ಸ್‌ಗಳು, ₹2 ಕೋಟಿ ಅನುದಾನದಿಂದ ಕನಕ ಭವನ ನಿರ್ಮಾಣವಾಗಿದೆ. ಇಲ್ಲಿಯೂ ಸಹ ಶಾಲಾ ಕಾಲೇಜುಗಳು, ವಸತಿ ನಿಲಯಗಳನ್ನು ಮಾಡಿ ಸಮಾಜ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಮಾತನಾಡಿ, ಸಂಘದ ಪದಾಧಿಕಾರಿಗಳು ಜಿಲ್ಲೆಯಲ್ಲಿ ಸುತ್ತಿ ಸದಸ್ಯತ್ವ ಮಾಡಿದರೆ ಸಂಘ ಬಲಿಷ್ಠವಾಗಿ ಬೆಳೆಯುತ್ತದೆ. ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಮಾದರಿಯಲ್ಲಿ ನಾವು ಸಹ ಇಲ್ಲಿ ಜಾಗ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು ಎಂದರು.
ಸಂಘದ ಖಜಾಂಚಿ ಆರ್.ಕೊಟ್ರೇಶ್, ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ, ಬಿಸಿಯೂಟ ಜಿಲ್ಲಾ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಬಿಇಒ ಎಂ.ಚೆನ್ನಬಸಪ್ಪ, ನಗರಸಭೆ ಮಾಜಿ ಸದಸ್ಯ ರಾಮಚಂದ್ರಗೌಡ, ಸಂಘದ ಗೌರವ ಅಧ್ಯಕ್ಷ ಅಯ್ಯಾಳಿ ಮೂರ್ತಿ, ಪದಾಧಿಕಾರಿಗಳಾದ ವೈ.ಕೆ.ಬಿ.ದುರುಗಪ್ಪ, ಎಂ.ಸುಶೀಲಮ್ಮ, ಕೆ.ಕೊಮಾರೆಪ್ಪ, ಎಚ್.ಮಹೇಶ, ತಾಲೂಕು ಕುರುಬರ ಸಂಘದ ಕೊಟ್ಟೂರು ಅಧ್ಯಕ್ಷ ಮೂಗಪ್ಪ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಅಧ್ಯಕ್ಷ ಬುಡ್ಡಿ ಬಸವರಾಜ, ಕೂಡ್ಲಿಗಿ ಅಧ್ಯಕ್ಷ ಬೊಪ್ಪಲಾಪುರ ಬಸವರಾಜ, ಹಡಗಲಿ ಅಧ್ಯಕ್ಷ ಹೊಸಕೇರಿ ಬೀರಪ್ಪ, ಹರಪನಹಳ್ಳಿ ಅಧ್ಯಕ್ಷ ಕೆ.ಗೋಣಿ ಬಸಪ್ಪ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಕೆ.ರವಿಕುಮಾರ್, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಿಕಾರ್ಜುನ, ಕನಕ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ತಿಮ್ಮಪ್ಪ, ಟಿ.ವಿಶ್ವನಾಥ, ಇಂಗಳಿಗಿ ಉದೇದಪ್ಪ, ಹುಲುಗಪ್ಪ ಇತರರಿದ್ದರು. ಕನಕದಾಸರ ಕೀರ್ತನೆಗಳಿಗೆ ಕಾವ್ಯ ಭರತನಾಟ್ಯ ಮಾಡಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.