ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆ: ಕಾಳಘಟ್ಟದಲ್ಲಿ ಪರಿಶೀಲನೆ

28 ಎಕರೆ ಸರ್ಕಾರಿ ಜಮೀನು ಲಭ್ಯ * ಇನ್ನಷ್ಟು ಜಾಗ ಬೇಕಿದ್ದರೆ ಖಾಸಗಿಯವರಿಂದ ಖರೀದಿಸಲು ಅವಕಾಶ
Published 12 ಸೆಪ್ಟೆಂಬರ್ 2023, 5:02 IST
Last Updated 12 ಸೆಪ್ಟೆಂಬರ್ 2023, 5:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸಕ್ಕರೆ ಕಾರ್ಖಾನೆಗೆ ಸ್ಥಳ ಹುಡುಕುವ ಪ್ರಯತ್ನ ಸೋಮವಾರ ಆರಂಭವಾಗಿದ್ದು, ಶಾಸಕ ಎಚ್‌.ಆರ್‌.ಗವಿಯಪ್ಪ ಹಾಗೂ ರೈತ ಮುಖಂಡರು ತಾಲ್ಲೂಕಿನ ನಾಗೇನಹಳ್ಳಿ ಸಮೀಪದ ಕಾಳಘಟ್ಟಕ್ಕೆ ತೆರಳಿ ಲಭ್ಯ ಇರುವ ಸರ್ಕಾರಿ ಜಮೀನು ಪರಿಶೀಲಿಸಿದರು.

‘ಕಾಳಘಟ್ಟದಲ್ಲಿ ಒಂದು ಕಡೆ 17 ಎಕರೆ, ಇನ್ನೊಂದು ಕಡೆ 9 ಎಕರೆ ಹಾಗೂ ಮತ್ತೊಂದು ಕಡೆ 2 ಎಕರೆ ಸರ್ಕಾರಿ ಭೂಮಿ ಇದೆ. ಇಷ್ಟೇ ಜಾಗದಲ್ಲಿ ಆಧುನಿಕ ರೀತಿಯ ಸಕ್ಕರೆ ಕಾರ್ಖಾನೆ, ವಸತಿ ಸಮುಚ್ಛಯ, ಇತರ ಸೌಲಭ್ಯ ಕಲ್ಪಿಸಲು ಅವಕಾಶ  ಇದೆ. ಇನ್ನೂ ಅಗತ್ಯ ಇದ್ದರೆ ಖಾಸಗಿ ಜಮೀನು ಸಹ ಖರೀದಿಗೆ ಅವಕಾಶ ಇದೆ. ಹೀಗಾಗಿ ಇಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪಿಸಬಹುದು’ ಎಂದು ಶಾಸಕರ ಜತೆಗಿದ್ದ ಹಲವು ರೈತ ಮುಖಂಡರು ತಿಳಿಸಿದರು.

‘ಈ ಪ್ರದೇಶದ ಸುತ್ತಮುತ್ತ ಕಬ್ಬು ಬೆಳೆಯಲಾಗುತ್ತಿದ್ದು, ಕಾರ್ಖಾನೆಗೆ ಎತ್ತಿನ ಗಾಡಿ ಮೂಲಕ ಕಬ್ಬು ಸಾಗಣೆಗೂ ಅವಕಾಶ ಇದೆ. ಹೀಗಾಗಿ ಇದೇ ಸ್ಥಳವನ್ನು ಮಾನ್ಯ ಮಾಡಬಹುದು’ ಎಂದು ಸಿಪಿಎಂ ಮುಖಂಡ ಭಾಸ್ಕರ ರೆಡ್ಡಿ ಸಲಹೆ ನೀಡಿದರು.

ರೈತ ಭವನಕ್ಕೆ ಭೂಮಿಪೂಜೆ: ಇದಕ್ಕೆ ಮೊದಲು ನಗರದಲ್ಲಿ ಐದು ಕೋಟಿ ರೂಪಾಯಿ ‌ವೆಚ್ಚದಲ್ಲಿ ನಿರ್ಮಾಣವಾಗಲಿರುವ ರೈತ ಭವನಕ್ಕೆ ಶಾಸಕ ಗವಿಯಪ್ಪ ಅವರು ಭೂಮಿ ಪೂಜೆ ನೆರವೇರಿಸಿದರು. 

‘ಜಂಬುನಾಥ ಹಳ್ಳಿಯಲ್ಲಿರುವ ಸರ್ಕಾರಿ ಜಾಗದಲ್ಲಿ ಬಡವರಿಗೆ ನಿವೇಶನ ಕಲ್ಪಿಸಬೇಕಿದೆ. ಹೀಗಾಗಿ ಹಂಪಿ ಶುಗರ್ಸ್‌ಗೆ ಅಲ್ಲಿನ  84 ಎಕರೆ ಸರ್ಕಾರಿ ಜಮೀನು ಕೊಡಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

ಹೊಸಪೇಟೆ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂಬ ಮನವಿಗೆ ಮುಖ್ಯಮಂತ್ರಿ ಸಿದ್ದರಮಯ್ಯ ಅವರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೊಸಪೇಟೆಯಲ್ಲೇ ಅನೇಕ ಧನವಂತರು  ಇದ್ದು, ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಬೇಕು ಎಂದರು.

ರೈತ ಸಂಘದ ಮಾಜಿ ಅಧ್ಯಕ್ಷ ಕಿಚಡಿ ಲಕ್ಷ್ಮಣ, ಅಧ್ಯಕ್ಷ ಎಂ.ಜೆ.ಜೋಗಯ್ಯ, ಪ್ರಮುಖರಾದ ಉತ್ತಂಗಿ ಕೊಟ್ರೇಶ್, ಪರಸಪ್ಪ, ಡಿ.ಹನುಮಂತಪ್ಪ, ಜಿ.ಅಶೋಕ್, ಗೌಡರ ರಾಮಚಂದ್ರ, ಗುಂಡಿ ರಾಘವೇಂದ್ರ, ಗುಜ್ಜಲ ನಾಗರಾಜ, ಪ್ರಾಂತ ರೈರ ಸಂಘದ ಮುಖಂಡರಾದ ಜಂಬಯ್ಯ ನಾಯಕ, ಆರ್.ಭಾಸ್ಕರರೆಡ್ಡಿ. ಯಲ್ಲಾಲಿಂಗ, ಡಿ.ಜಂಬಣ್ಣ, ವೀರಭದ್ರಾ ನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT