ಹೊಸಪೇಟೆ (ವಿಜಯನಗರ): 2022–23ನೇ ಸಾಲಿನಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ ತೋರಿದ ವಿಜಯನಗರ ಜಿಲ್ಲಾ ಪಂಚಾಯಿತಿ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಅತ್ಯುತ್ತಮ ಒಗ್ಗೂಡಿಸುವಿಕೆ, ಶಿಕ್ಷಣ ಸ್ನೇಹಿ ಪಂಚಾಯಿತಿ, ರೈತಬಂಧು ಪಂಚಾಯಿತಿ, ಜಲಸಂಜೀವಿನಿ ಪಂಚಾಯಿತಿ ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಾ. 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಗಾಂಧಿ ಗ್ರಾಮ’ ಪುರಸ್ಕಾರ ಹಾಗೂ ‘ನರೇಗಾ ಹಬ್ಬ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿಗದಿಪಡಿಸಿದ ಮಾನದಂಡಗಳ ಅನ್ವಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಾವ ಪಂಚಾಯಿತಿಗೆ ಪ್ರಶಸ್ತಿ
1. ಹೊಸಪೇಟೆ ತಾಲ್ಲೂಕಿನ ಡಣಾಪುರ ಗ್ರಾಮ ಪಂಚಾಯಿತಿಯಲ್ಲಿ ಎನ್‌ಆರ್‌ಎಲ್‌ಎಂ ಮೂಲಕ ನಿಗದಿಗೊಳಿಸಿದ್ದ 325 ಮಾನವ ದಿನಗಳ ಗುರಿಗೆ 2463 ಮಾನವ ದಿನಗಳನ್ನು ಸೃಜಿಸಿ ಶೇ 757.85 ರಷ್ಟು ಸಾಧನೆ ಮಾಡಿ ‘ಅತ್ಯುತ್ತಮ ಒಗ್ಗೂಡಿಸುವಿಕೆ’ ವಿಭಾಗದಲ್ಲಿ ಜಿಲ್ಲಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
2. ಹೂವಿನಹಡಗಲಿ ತಾಲ್ಲೂಕಿನಲ್ಲಿ ಒಟ್ಟು 141 ಸರ್ಕಾರಿ ಶಾಲೆಗಳಿಗೆ ತಡೆಗೋಡೆ, 11 ಶಾಲೆಗಳಿಗೆ ಅಡುಗೆ ಕೋಣೆ, 137 ಶಾಲೆಗಳಿಗೆ ಶೌಚಾಲಯಗಳು, 106 ಶಾಲೆಗಳಿಗೆ ಪೌಷ್ಟಿಕ ತೋಟ, 127 ಶಾಲೆಗಳಿಗೆ ಆಟದ ಮೈದಾನ, 141 ಶಾಲೆಗಳಿಗೆ ಮಳೆನೀರು ಕೊಯ್ಲು ಘಟಕಗಳನ್ನು ನಿರ್ಮಿಸಿದ ಕಾರಣ ‘ಶಿಕ್ಷಣ ಸ್ನೇಹಿ’ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.
3. ಹರಪನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 534 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಹೊಸದಾಗಿ 321 ಹೆಕ್ಟೇರ್ ಹೊಸ ಪ್ರದೇಶ ವಿಸ್ತರಿಸಿ, ನರೇಗಾ ಯೋಜನೆಯಡಿ 243 ಹೆಕ್ಟೇರ್ ಪ್ರದೇಶದಲ್ಲಿ 21 ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಸಿದಕ್ಕಾಗಿ ‘ರೈತಬಂಧು’ ಪಂಚಾಯಿತಿ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.
4. ಜಲಸಂವೀನಿ ಯೋಜನೆಯಡಿ ಗ್ರಾಮದ ಸಾಮಾನ್ಯ ಮಾಹಿತಿಯನ್ನು ಕ್ರೊಢೀಕರಿಸಿಕೊಂಡು ಗ್ರಾಮಕ್ಕೆ ಬೇಕಾಗುವ ನೀರಿನ ಲಭ್ಯತೆಗೆ ತಕ್ಕಂತೆ ನೀರಿನ ಆಯವ್ಯಯವನ್ನು ಸಿದ್ಧಪಡಿಸಿ, ಮುಂದಿನ ಮೂರು ವರ್ಷಗಳಿಗೆ ದಿಬ್ಬದಿಂದ ಕಣಿವೆ ಮಾದರಿಯಲ್ಲಿ ಕ್ರಿಯಾಯೋಜನೆಯನ್ನು ವೈಜ್ಞಾನಿಕವಾಗಿ ಸಿದ್ದಪಡಿಸಿದಕ್ಕಾಗಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಆಲಬೂರು ಗ್ರಾಮ ಪಂಚಾಯಿತಿ ‘ಜಲಸಂಜೀವಿನಿ’ ಪಂಚಾಯಿತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.