ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ ಇಲ್ಲ; ಪ್ರತಿಭಟನೆಗೆ ಸೀಮಿತ

ರೈತ ಮುಖಂಡರ ವಿರುದ್ಧದ ಪ್ರಕರಣ ಕೈಬಿಡಲು ಆಗ್ರಹ
Last Updated 26 ಮಾರ್ಚ್ 2021, 7:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಶುಕ್ರವಾರ ಕರೆ ನೀಡಲಾಗಿದ್ದ ‘ಭಾರತ ಬಂದ್‌’ ನಗರದಲ್ಲಿ ನಡೆಯಲಿಲ್ಲ.

ಬಂದ್‌ಗೆ ಯಾವುದೇ ಸಂಘಟನೆಗಳು ಬೆಂಬಲ ಸೂಚಿಸಿರಲಿಲ್ಲ. ಆದರೆ, ರೈತರ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ರೈತ–ಕಾರ್ಮಿಕ–ದಲಿತ–ವಿದ್ಯಾರ್ಥಿ ಯುವಜನ–ಮಹಿಳೆ ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಪ್ರಮುಖ ಮಾರ್ಗಗಳ ಮೂಲಕ ತಾಲ್ಲೂಕು ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

‘ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ 123 ದಿನಗಳನ್ನು ಪೂರೈಸಿದೆ. 315 ರೈತರು ಇದುವರೆಗೆ ಸಾವನ್ನಪ್ಪಿದ್ದಾರೆ. ಆದರೆ, ಅದರ ಬಗ್ಗೆ ಇದುವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಕಾರ ಎತ್ತಿಲ್ಲ. ಕೃಷಿ ಕಾಯ್ದೆಗಳಿಂದ ರೈತ ಕುಲ ನಾಶವಾಗಲಿದೆ. ರೈತರನ್ನು ಕೃಷಿಯಿಂದ ವಿಮುಖಗೊಳಿಸುವ ಹುನ್ನಾರವಿದೆ. ಕಾಯ್ದೆಗಳನ್ನು ವಾಪಸ್‌ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದು ತಿಳಿಸಿದರು.

‘ಇತ್ತೀಚೆಗೆ ಶಿವಮೊಗ್ಗ, ಹಾವೇರಿಯಲ್ಲಿ ನಡೆದ ರೈತರ ಮಹಾಪಂಚಾಯತ್‌ಗಳು ಯಶಸ್ಸು ಕಂಡಿವೆ. ಅದರಲ್ಲಿ ಭಾಗವಹಿಸಿದ್ದ ರೈತ ನಾಯಕ ರಾಕೇಶ್‌ ಟಿಕಾಯತ್‌ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನಾರ್ಹ. ಕೂಡಲೇ ಪ್ರಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ಯಾವ ಶಾಸಕರು ಏಕಪತ್ನಿ ವ್ರತಸ್ಥರಲ್ಲ ಎಂಬ ಸಚಿವ ಸುಧಾಕರ್‌ ಅವರ ಹೇಳಿಕೆ ಅಕ್ಷಮ್ಯ. ಮಹಿಳಾ ಶಾಸಕಿಯರಿಗೆ ಅಪಮಾನ ಮಾಡಿದ್ದಾರೆ. ಅವರು ಮಂತ್ರಿಯಾಗಿ ಮುಂದುವರಿಯಲು ಸೂಕ್ತರಲ್ಲ. ಅವರನ್ನು ಸಂಪುಟದಿಂದ ಕೈಬಿಟ್ಟು, ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇಂತಹ ಜ್ವಲಂತ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಚರ್ಚಿಸುವುದು ಬಿಟ್ಟು ರಮೇಶ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾದ ಸಿ.ಡಿ. ಪ್ರಕರಣದ ಕುರಿತು ಚರ್ಚಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ನಗರ ಘಟಕದ ಅಧ್ಯಕ್ಷ ಟಿ. ನಾಗರಾಜ್‌, ಜಿ. ಪರಶುರಾಮ, ಕೆ. ಹುಲುಗಪ್ಪ, ಎಚ್‌.ಎಸ್‌. ರೇವಣಸಿದ್ದೇಶ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಎನ್‌. ಯಲ್ಲಾಲಿಂಗ, ಕೆ. ನಾಗರತ್ನಮ್ಮ, ನಾರಾಯಣ ರೆಡ್ಡಿ, ಆರ್‌. ಭಾಸ್ಕರ್‌ ರೆಡ್ಡಿ, ಜಡಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT