ಶುಕ್ರವಾರ, ಡಿಸೆಂಬರ್ 2, 2022
19 °C

ಡಿಸಿ, ಎಸ್ಪಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ವಿಜಯನಗರ ಜಿಲ್ಲೆಯಿಂದ ಬೇರೆಡೆ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳವರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ನಗರದ ಡಾ.ಅಂಬೇಡ್ಕರ್‌ ವೃತ್ತದ ಬಳಿ ಸೇರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನಿರುದ್ಧ್‌ ಶ್ರವಣ್‌, ಡಾ. ಅರುಣ್‌ ಅವರ ಭಾವಚಿತ್ರಗಳ ಜೊತೆಗೆ ವರ್ಗಾವಣೆ ರದ್ದುಪಡಿಸಿ ಎಂಬ ಬರಹವುಳ್ಳ ಫಲಕಗಳನ್ನು ಪ್ರದರ್ಶಿಸಿದರು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿರುದ್ಧ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ಅಂಬೇಡ್ಕರ್‌ ಸಂಘದ ವಿಜಯನಗರ ಜಿಲ್ಲಾ ಅಧ್ಯಕ್ಷ ಸೋಮಶೇಖರ್‌ ಬಣ್ಣದಮನೆ ಮಾತನಾಡಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಬಹಳ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸುತ್ತಿದ್ದರು. ಯಾರ ಒತ್ತಡಕ್ಕೂ ಒಳಗಾಗದೆ ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ಶಾಸಕರೂ ಆದ ಸಚಿವ ಆನಂದ್‌ ಸಿಂಗ್ ಅವರ ಅಕ್ರಮ ಬಯಲಿಗೆಳೆಯುವ ಕೆಲಸ ಮಾಡುತ್ತಿದ್ದರು. ಇದೇ ಅಧಿಕಾರಿಗಳಿದ್ದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಕಷ್ಟವಾಗಬಹುದು ಎಂದು ಸರ್ಕಾರದ ಮೇಲೆ ಒತ್ತಡ ತಂದು ಇಬ್ಬರನ್ನೂ ವರ್ಗಾವಣೆಗೊಳಿಸಿದ್ದಾರೆ ಎಂದು ಆರೋಪಿಸಿದರು.

ನಿಷ್ಠುರ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡಿರುವುದು ಜನವಿರೋಧಿ ಕೆಲಸ. ಸಚಿವರು ತಮ್ಮ ಅಕ್ರಮ ಮುಚ್ಚಿಕೊಳ್ಳಲು ಅಧಿಕಾರಿಗಳ ವರ್ಗಾವಣೆ ಮಾಡಿಸಿದ್ದಾರೆ. ಹೊಸದಾಗಿ ಬರುವ ಅಧಿಕಾರಿಗಳು ಸಚಿವರ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಬಾರದು ಎಂದು ಹಕ್ಕೊತ್ತಾಯ ಮಾಡಿದರು.

ಕಾಂಗ್ರೆಸ್‌ ಮುಖಂಡ ರಾಜಶೇಖರ್‌ ಹಿಟ್ನಾಳ್‌ ಮಾತನಾಡಿ, ಡಿಸಿ, ಎಸ್ಪಿಯವರು ಹೊಸ ಜಿಲ್ಲೆಯಲ್ಲಿ ಒಂದು ವರ್ಷದೊಳಗೆ ಸಾಕಷ್ಟು ಸುಧಾರಣೆ ತಂದಿದ್ದರು. ಅಭಿವೃದ್ಧಿ ಕೆಲಸಗಳೆಲ್ಲ ವೇಗವಾಗಿ ನಡೆಯುತ್ತಿದ್ದವು. ಟೆಂಡರ್‌ ಇಲ್ಲದೆ ಬಹಳ ಕಾಮಗಾರಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದಾಗ ಆ ನಿಟ್ಟಿನಲ್ಲಿ ತಕ್ಷಣವೇ ಅವರು ಕ್ರಮ ಕೈಗೊಂಡಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅಂಥವರ ವರ್ಗಾವಣೆ ಸರಿಯಲ್ಲ ಎಂದರು.

ಒಬ್ಬ ಸಾಮಾನ್ಯ ವ್ಯಕ್ತಿಗೆ ಸಚಿವ ಆನಂದ್‌ ಸಿಂಗ್‌ ತೊಂದರೆ ಕೊಟ್ಟಾಗ ತಕ್ಷಣವೇ ಅವರ ವಿರುದ್ಧ ಎಸ್ಪಿ ಕೇಸ್‌ ಹಾಕಿದ್ದರು. ಈ ಮೂಲಕ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ತೋರಿಸಿಕೊಟ್ಟಿದ್ದರು. ಅದು ಇಡೀ ದೇಶದಲ್ಲೇ ಮಾದರಿ. ಈಗ ಅವರಿಗೆ ಸ್ಥಳ ತೋರಿಸದೆ ವರ್ಗಾವಣೆಗೊಳಿಸಲಾಗಿದೆ ಎಂದು ಹೇಳಿದರು.

ಮುಖಂಡರಾದ ಎಂ.ಸಿ. ವೀರಸ್ವಾಮಿ, ನಿಂಬಗಲ್‌ ರಾಮಕೃಷ್ಣ, ವೀರಭದ್ರ ನಾಯಕ, ದುರುಗಪ್ಪ ಪೂಜಾರಿ, ಮರಡಿ ಜಂಬಯ್ಯ ನಾಯಕ, ಆರ್‌. ಭಾಸ್ಕರ್‌ ರೆಡ್ಡಿ, ಸಿ.ಆರ್‌. ಭರತ್‌ ಕುಮಾರ್‌, ಯೋಗಲಕ್ಷ್ಮಿ, ಜೆ. ಶಿವುಕುಮಾರ, ಮಾರೆಣ್ಣ, ನಾಗರತ್ನಮ್ಮ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು