ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಕರಿಜಾಲಿ ಪ್ರದೇಶವೀಗ ಪ್ರವಾಸಿ ತಾಣ!

Last Updated 2 ಮಾರ್ಚ್ 2021, 6:02 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಕಣ್ಣು ಹಾಯಿಸಿದ ಕಡೆಗೆಲ್ಲ ನೀರೋ ನೀರು. ಅವುಗಳ ಮಧ್ಯೆಯೇ ಬೆಳೆದು ನಿಂತಿರುವ ಕರಿಜಾಲಿ ಮರಗಳನ್ನು ನೋಡುತ್ತಿದ್ದರೆ ಒಂದುಕ್ಷಣ ಕ್ಯಾನ್ವಾಸ್‌ನಂತೆ ಭಾಸವಾಗುತ್ತದೆ.

ಮುಳ್ಳಿನ ಕರಿಜಾಲಿ ಮರಗಳಲ್ಲಿಯೇ ಸಾವಿರಾರು ಹಕ್ಕಿಗಳ ಗೂಡು. ಯಾರೂ ಇಷ್ಟಪಡದ ಕರಿಜಾಲಿ ಮರಗಳೆಂದರೆ ಆ ಪಕ್ಷಿಗಳಿಗೆ ಎಲ್ಲಿಲ್ಲದ ಪ್ರೀತಿ. ಅವುಗಳ ನೆಚ್ಚಿನ ತಾಣ. ಸಾವಿರಾರು ಕಿ.ಮೀ ದೂರದಿಂದ ಬಂದು, ನೆಲೆಸಿ, ಮೊಟ್ಟೆ ಇಟ್ಟು ಮರಿ ಮಾಡುವ ಹಕ್ಕಿಗಳದ್ದೇ ಪ್ರಪಂಚ ಎನ್ನಬಹುದು. ಈ ಹಕ್ಕಿಗಳ ಜಗತ್ತು ಈಗ ಹೊರಜಗತ್ತಿಗೆ ತೆರೆದುಕೊಂಡಿದೆ. ಅದುವೇ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಬಳಿಯಿರುವ ಪಕ್ಷಿಧಾಮ.

ಅಂಕಸಮುದ್ರದಲ್ಲಿ ಪಕ್ಷಿಗಳ ಹಿಂಡು
ಅಂಕಸಮುದ್ರದಲ್ಲಿ ಪಕ್ಷಿಗಳ ಹಿಂಡು

ಹೊಸಪೇಟೆಯಿಂದ ಹಗರಿಬೊಮ್ಮನಹಳ್ಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಉಪನಾಯಕನಹಳ್ಳಿ ಎಂಬ ಪುಟ್ಟ ಗ್ರಾಮ ಬರುತ್ತದೆ. ಅಲ್ಲಿಂದ ಎರಡು ಕಿ.ಮೀ ಕ್ರಮಿಸಿದರೆ ಅಂಕಸಮುದ್ರ ಬರುತ್ತದೆ. ಅಲ್ಲಿಂದ ಮೂರ್ನಾಲ್ಕು ಕಿ.ಮೀ ಗಳವರೆಗೆ ಯಾವುದೇ ಜನವಸತಿ ಪ್ರದೇಶಗಳಿಲ್ಲ. ಅಲ್ಲೇನಿದ್ದರೂ ಬರೀ ಪಕ್ಷಿಗಳ ಪ್ರಪಂಚ, ಅವುಗಳದ್ದೇ ಚಿಲಿಪಿಲಿ ಸದ್ದು, ಕಲರವ.

ಪ್ರವಾಸಿ ತಾಣವಾಗಿ ಬೆಳೆದ ಪರಿ:

2016ರಲ್ಲಿ ರಾಜ್ಯ ಸರ್ಕಾರ ಅಂಕಸಮುದ್ರವನ್ನು ಪಕ್ಷಿಧಾಮ ಎಂದು ಅಧಿಕೃತವಾಗಿ ಘೋಷಿಸಿತು. ಅದಕ್ಕೂ ಮುನ್ನ ಈ ಪ್ರದೇಶದ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲ.

ಸುತ್ತಮುತ್ತಲಿನ ಹಳ್ಳಿಯವರು ಅಲ್ಲಿಗೆ ಬಂದು ಕರಿಜಾಲಿ ಮರಗಳನ್ನು ಕಡಿದುಕೊಂಡು ಹೋಗುತ್ತಿದ್ದರು. ಮತ್ತೆ ಕೆಲವರು ಮೀನುಗಾರಿಕೆ ಮಾಡುತ್ತಿದ್ದರು. ಇನ್ನೊಂದಿಷ್ಟು ಜನ ಹಕ್ಕಿಗಳನ್ನು ಬೇಟೆ ಆಡುತ್ತಿದ್ದರು. ನಿತ್ಯವೂ ಪ್ರಕೃತಿಯ ಮೇಲೆ ದಾಳಿ, ಹಕ್ಕಿಗಳ ಮಾರಣ ಹೋಮ ನಿರಾತಂಕವಾಗಿ ನಡೆಯುತ್ತಿತ್ತು. ಮೀನುಗಾರಿಕೆಗೆ ಅಳವಡಿಸುತ್ತಿದ್ದ ಬಲೆಯಲ್ಲಿ ಅದೆಷ್ಟೊ ಹಕ್ಕಿಗಳು ಸಿಕ್ಕು, ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯವಾಗಿತ್ತು.

ಪಕ್ಷಿಗಳ ಫೋಟೋಗ್ರಫಿ
ಪಕ್ಷಿಗಳ ಫೋಟೋಗ್ರಫಿ

ಪರಿಸರ, ವನ್ಯಜೀವಿಗಳಿಗಾಗಿಯೇ ಹೆಚ್ಚಿನ ಸಮಯ ಮೀಸಲಿಟ್ಟಿರುವ ಸಮದ್‌ ಕೊಟ್ಟೂರು, ವಿಜಯ ಇಟ್ಟಿಗಿ ಅವರು ಈ ಪ್ರದೇಶವನ್ನು ಉಳಿಸಬೇಕೆಂಬ ಸಂಕಲ್ಪ ತೊಟ್ಟರು. 2014ರಿಂದ ಸ್ಥಳೀಯ ಯುವಕರ ಸಹಕಾರದೊಂದಿಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದರು. ದಾಸ ಕೊಕ್ಕರೆ, ಬಾತುಕೋಳಿ, ತೆರೆದ ಬಾಯಿಕಳಕ, ಬಕ ಪಕ್ಷಿಗಳು, ಗುಬ್ಬಚ್ಚಿ, ನೀರು ಕಾಗೆಗಳು ಸೇರಿದಂತೆ 160 ಪ್ರಭೇದದ ಪಕ್ಷಿಗಳು ವಾಸಿಸುವ ಪ್ರದೇಶ ಎನ್ನುವುದರ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಈ ಪ್ರದೇಶವನ್ನು ಪಕ್ಷಿಧಾಮವಾಗಿ ಘೋಷಿಸುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದರು. 2016ರಲ್ಲಿ ಸರ್ಕಾರ ಅದಕ್ಕೆ ಅಂಕಿತ ಹಾಕಿತು.

ಅದರ ನಂತರ ಅರಣ್ಯ ಇಲಾಖೆಯವರು ಅಲ್ಲಿ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿ, ಬೇಟೆ, ಮೀನುಗಾರಿಕೆ ಚಟುವಟಿಕೆಗಳನ್ನು ತಡೆದು, ಹಕ್ಕಿಗಳಿಗೆ ರಕ್ಷಣೆ ಒದಗಿಸಿದರು. ತಾಲ್ಲೂಕು ಆಡಳಿತದ ನೆರವಿನೊಂದಿಗೆ ತುಂಗಭದ್ರಾ ಹಿನ್ನೀರಿನಿಂದ ಕೆರೆಗೆ ನೀರು ತುಂಬಿಸಿ, ಹಕ್ಕಿಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ. ಸಹಜವಾಗಿಯೇ ಹಕ್ಕಿಗಳ ಸಂಖ್ಯೆಯಲ್ಲಿ ಸಾಕಷ್ಟು ವೃದ್ಧಿಯಾಗಿದೆ.

ಈಗ ರಾಜ್ಯ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳ ಜನ ಇಲ್ಲಿಗೆ ಬಂದು ಹೋಗುತ್ತಾರೆ. ಹಕ್ಕಿಗಳ ಅಧ್ಯಯನ, ಫೋಟೋಗ್ರಫಿ ಹವ್ಯಾಸ ಇರುವವರ ನೆಚ್ಚಿನ ತಾಣವಾಗಿದೆ. ಹಂಪಿಗೆ ಬಂದು ಹೋಗುವವರು ಈಗ ಇಲ್ಲಿಗೂ ಬಂದು ಹೋಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT