ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿಯಮ್ಮನಹಳ್ಳಿ: 60 ಮೀ. ಉದ್ದ ಹೊಸದಾಗಿ ಹಳಿ ಜೋಡಣೆ

ಹಳಿ ತಪ್ಪಿದ ರೈಲು: 500 ಮಂದಿಯಿಂದ ಸತತ 24 ಗಂಟೆ ಕಾರ್ಯಾಚರಣೆ
Published 18 ನವೆಂಬರ್ 2023, 5:50 IST
Last Updated 18 ನವೆಂಬರ್ 2023, 5:50 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ರೈಲು ಹಳಿ ತಪ್ಪಿದರೆ ಎಂತಹ ಕಷ್ಟ ಎದುರಾಗುತ್ತದೆ, ಅದೆಷ್ಟು ಕಾರ್ಮಿಕರು ಹಗಲಿರುಳು ಶ್ರಮಿಸಬೇಕು, ಇಲಾಖೆಗೆ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ ಎಂಬುದಕ್ಕೆ ಜ್ವಲಂತ ನಿದರ್ಶನವನ್ನು ವ್ಯಾಸನಕೇರಿ–ವ್ಯಾಸ ಕಾಲೋನಿ ನಡುವೆ ಗುರುವಾರ ಸಂಜೆ ಸಂಭವಿಸಿದ ಗೂಡ್ಸ್‌ ರೈಲು ಹಳಿ ತಪ್ಪಿದ ಪ್ರಸಂಗ ಸಾರ್ವಜನಿಕರಿಗೆ ಒದಗಿಸಿತು.

500ಕ್ಕೂ ಅಧಿಕ ಕೆಲಸಗಾರರು ಸತತ 24 ಗಂಟೆ ಕೆಲಸ ಮಾಡಿದ ಬಳಿಕ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹಳಿ ಜೋಡಣೆ ಕಾರ್ಯ ಕೊನೆಗೊಂಡಿದ್ದು, ಪ್ರಾಯೋಗಿಕ ರೈಲು ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಶನಿವಾರ ಈ ಮಾರ್ಗದಲ್ಲಿ ಈ ಹಿಂದಿನ ವೇಳಾಪಟ್ಟಿಯಂತೆ ಹೊಸಪೇಟೆ–ಹರಿಹರ ಪ್ಯಾಸೆಂಜರ್‌ ರೈಲು ಓಡಾಡಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಅವರು ತಿಳಿಸಿದ್ದಾರೆ.

ರೈಲು ಹಳಿ ತಪ್ಪಿದ ಸ್ಥಳ ಗುಡ್ಡ ಪ್ರದೇಶದಲ್ಲಿದೆ. ವ್ಯಾಸನಕೇರಿ ಹೆದ್ದಾರಿಯಿಂದ ಕೆಲವು ಕಿ.ಮೀ.ದೂರದಲ್ಲಿ ಇರುವ ಸ್ಥಳಕ್ಕೆ ಒಂದಷ್ಟು ದೂರ ನಡೆದೇ ಹೋಗಬೇಕು. ಇಂತಹ ಸ್ಥಿತಿಯಲ್ಲಿ ಕ್ರೇನ್‌ಗಳನ್ನು ತಂದು ಕೆಲಸ ಮಾಡಿಸಿದ್ದು ದೊಡ್ಡ ಸಾಹಸವೆಂಬಂತೆ ಕಾಣಿಸಿತು. ಹಳಿ ತಪ್ಪಿ ಆ್ಯಕ್ಸಲ್‌ ತುಂಡಾದ ಎರಡು ವ್ಯಾಗನ್‌ಗಳನ್ನು ಎತ್ತಿ ಬದಿಯಲ್ಲಿ ಇಡಲಾಗಿದ್ದು, ಅದರೊಳಗಿದ್ದ ಕೋಳಿ, ಮೀನು ಗೊಬ್ಬರ ತಯಾರಿಕೆಯ ಕಚ್ಚಾ ವಸ್ತುಗಳ ಮೂಟೆಗಳನ್ನು ಹೊರಗೆ ತೆಗೆದು ಜೋಡಿಸಿ ಇಡಲಾಯಿತು. ಈ ಸರಕು ಮಧ್ಯಪ್ರದೇಶದಿಂದ ಹಾಸನಕ್ಕೆ ಸಾಗುತ್ತಿತ್ತು.

ರೈಲು ಹಳಿ ತಪ್ಪಿದ ವೇಳೆ ಮಗುಚಿ ಬಿದ್ದ ವ್ಯಾಗನ್‌ಗಳನ್ನು ಬದಿಗೆ ಸರಿಸಿ ಇಡುವ ಕಾರ್ಯ ಶುಕ್ರವಾರ ನಡೆಯಿತು –ಪ್ರಜಾವಾಣಿ ಚಿತ್ರ
ರೈಲು ಹಳಿ ತಪ್ಪಿದ ವೇಳೆ ಮಗುಚಿ ಬಿದ್ದ ವ್ಯಾಗನ್‌ಗಳನ್ನು ಬದಿಗೆ ಸರಿಸಿ ಇಡುವ ಕಾರ್ಯ ಶುಕ್ರವಾರ ನಡೆಯಿತು –ಪ್ರಜಾವಾಣಿ ಚಿತ್ರ

ವ್ಯಾಸ ಕಾಲೋನಿ ಮತ್ತು ವ್ಯಾಸನಕೇರಿ ರೈಲು ನಿಲ್ದಾಣದ ಮಧ್ಯೆ, ಸ್ಮೆಯೋರ್ ಕಂಪನಿಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ 54 ವ್ಯಾಗನ್‍ಗಳನ್ನು ಹೊಂದಿದ್ದ ಗೂಡ್ಸ್ ರೈಲು ಹಾಸನದತ್ತ ತೆರಳುತ್ತಿದ್ದಾಗ 12 ವ್ಯಾಗನ್‌ಗಳು ಹಳಿ ತಪ್ಪಿದ್ದವು. ಈ ಪೈಕಿ ಎರಡು ವ್ಯಾಗನ್‌ಗಳು ಉರುಳಿ ಬಿದ್ದಿದ್ದವು. ಹಳಿ ತಪ್ಪಿದ್ದ ಕೆಲವು ವ್ಯಾಗನ್‌ಗಳು ಶುಕ್ರವಾರ ಸಂಜೆಯ ತನಕವೂ ಸ್ಥಳದಲ್ಲೇ ಇದ್ದವು, ಉಳಿದ ವ್ಯಾಗನ್‌ಗಳನ್ನು ಕಳುಹಿಸಿಸಲಾಗಿದೆ.

ಹಲವು ಕೆಲಸ: ಹಳಿ ತಪ್ಪಿದ ಸ್ಥಳದಲ್ಲಿ ಕೇವಲ ಹಳಿಗಳ ಮರುಜೋಡಣೆಯಷ್ಟೇ ಅಲ್ಲ, ವಿದ್ಯುತ್ ತಂತಿಗಳು, ಕಂಬಗಳ ಮರುಜೋಡಣೆಯೂ ಅಗತ್ಯ. ಹೀಗಾಗಿ ವಿವಿಧ ವಿಭಾಗಗಳ ಸಿಬ್ಬಂದಿ ಜತೆ ಜತೆಯಾಗಿ ಕೆಲಸ ಮಾಡುವ ಮತ್ತು ತ್ವರಿತವಾಗಿ ಕಾಮಗಾರಿ ಮುಗಿಸುವ ಹೊಣೆಗಾರಿಕೆ ಇದೆ. ಇದೆಲ್ಲವನ್ನೂ ಅಧಿಕಾರಿಗಳು ಮತ್ತು ಕೆಲಸಗಾರರು ಶ್ರಮಪಟ್ಟು ಮಾಡುತ್ತಿದ್ದುದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಕಾಣಿಸಿತು.

ಹಳಿ ಜೋಡಣೆ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ
ಹಳಿ ಜೋಡಣೆ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ

ನೂರಾರು ಕಾರ್ಮಿಕರಿಗೆ ಹಾಗೂ ಅಧಿಕಾರಿಗಳಿಗೆ ಸ್ಥಳಕ್ಕೇ ಆಹಾರ, ನೀರು ತಂದು ಕೊಡುವ ಕೆಲಸವೂ ಇನ್ನೊಂದು ಕಡೆಯಿಂದ ನಡೆಯಿತು. 

ನಾಲ್ಕು ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳ ಓಡಾಟ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ರೈಲು ಅಪಘಾತ ಸಂಭವಿಸಿದೆ.

ವಿದ್ಯುತ್ ತಂತಿಗಳ ಮರುಜೋಡಣೆ ಕಾರ್ಯ –ಪ್ರಜಾವಾಣಿ ಚಿತ್ರ
ವಿದ್ಯುತ್ ತಂತಿಗಳ ಮರುಜೋಡಣೆ ಕಾರ್ಯ –ಪ್ರಜಾವಾಣಿ ಚಿತ್ರ
ಹಳಿ ಜೋಡಣೆ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ
ಹಳಿ ಜೋಡಣೆ ಕಾಮಗಾರಿಯ ದೃಶ್ಯ –ಪ್ರಜಾವಾಣಿ ಚಿತ್ರ
ದುರಂತಕ್ಕೆ ಕಾರಣ ಏನು?
ಗೂಡ್ಸ್‌ ರೈಲು ಹಳಿ ತಪ್ಪಲು ಕಾರಣ ಏನು ಎಂಬ ಪ್ರಶ್ನೆಗೆ ಒಂದು ದಿನದ ಬಳಿಕವೂ ನಿಖರ ಉತ್ತರ ಸಿಕ್ಕಿಲ್ಲ. ಈ ಸ್ಥಳ ಸ್ವಲ್ಪ ಇಳಿಜಾರಿನಿಂದ ಕೂಡಿದ್ದು ತಿರುವು ಸಹ ಇದೆ. ಇಲ್ಲಿ ಗರಿಷ್ಠ 20 ಕಿ.ಮೀ.ವೇಗದಲ್ಲಿ ಮಾತ್ರ ರೈಲುಗಳು ಸಂಚರಿಸಬೇಕು ಎಂಬ ನಿಯಮ ಇದೆ. ಈ ನಿಯಮ ಉಲ್ಲಂಘಿಸಲಾಗಿತ್ತೇ ಅಥವಾ ಹಳಿಯಲ್ಲೇ ಏನಾದರೂ ತೊಂದರೆ ಇತ್ತೇ ಎಂಬ ವಿಚಾರ ಸಹಿತ ಹಲವು ಆಯಾಮಗಳಲ್ಲಿ ಇಲಾಖೆಯಿಂದ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT