ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ | ಒಂದೆಡೆ ನೆರೆ, ಮತ್ತೊಂದೆಡೆ ಬರ!

ತೆಕ್ಕಲಕೋಟೆ ಭಾಗದ ರೈತರ ತೀರದ ಬವಣೆ: ನೂರಾರು ಹೆಕ್ಟರ್ ಬೆಳೆ ಹಾನಿ
ಚಾಂದ್ ಬಾಷ
Published 4 ಆಗಸ್ಟ್ 2024, 5:14 IST
Last Updated 4 ಆಗಸ್ಟ್ 2024, 5:14 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಒಂದೆಡೆ ತುಂಗಭದ್ರಾ ಜಲಾಶಯ ತುಂಬಿ ಲಕ್ಷಾಂತರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿ ನಾಟಿ ಮಾಡಿದ ನೂರಾರು ಹೆಕ್ಟರ್ ಭತ್ತದ ಬೆಳೆ ಜಲಾವೃತವಾಗಿದೆ.

ಇನ್ನೊಂದೆಡೆ ವೇದಾವತಿ (ಹಗರಿ) ನದಿ ಪಾತ್ರದಲ್ಲಿ ಮಳೆ ಆಗದ ಹಿನ್ನೆಲೆಯಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಉಪ್ಪಾರ ಹೊಸಳ್ಳಿ, ಬಲಕುಂದಿ, ತೆಕ್ಕಲಕೋಟೆ ವ್ಯಾಪ್ತಿಯಲ್ಲಿ ಬೆಳೆ ಬಾಡುವ ಹಂತಕ್ಕೆ ತಲುಪಿದ್ದು, ರೈತರು ಆತಂಕದಲ್ಲಿದ್ದಾರೆ.

ಮುಂಗಾರು ಆರಂಭದಲ್ಲಿ ಒಂದೆರಡು ಬಾರಿ ಉತ್ತಮವಾಗಿ ಮಳೆ ಬಂದ ಹಿನ್ನೆಲೆಯಲ್ಲಿ ಮುಂದೆಯೂ ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಸಿರುಗುಪ್ಪ ತಾಲ್ಲೂಕಿನ ರೈತರು, ತೊಗರಿ, ಹತ್ತಿ, ಮೆಕ್ಕೆಜೋಳ, ಸೂರ್ಯಕಾಂತಿ, ಸಜ್ಜಿ ಸೇರಿದಂತೆ ಮೊದಲಾದ ಬೆಳೆಗಳನ್ನು ಬಿತ್ತಿದ್ದರು. ಆರಂಭದಲ್ಲಿ ಸುರಿದ ಮಳೆಯು ನಂತರ ಸಂಪೂರ್ಣವಾಗಿ ಮಾಯವಾಗಿದೆ.

ವಾಡಿಕೆಗಿಂತ ಕಡಿಮೆ ಮಳೆ:

ಸಿರುಗುಪ್ಪ ಹೋಬಳಿಯಲ್ಲಿ ಸರಾಸರಿ ಶೇ 30 ಮಿ.ಮೀ ಮಳೆಯ ಕೊರತೆ ಇದೆ. ತೆಕ್ಕಲಕೋಟೆ ಹೋಬಳಿ– ಶೇ 36 ಮಿ.ಮೀ., ಹೆಚ್ಚೊಳ್ಳಿ ಹೋಬಳಿ– ಶೇ 36 ಮಿ.ಮೀ ಹಾಗೂ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಶೇ 6 ಮಿ.ಮೀ ಮಳೆಯ ಕೊರತೆ ಇದೆ. ಒಟ್ಟಾರೆ ತಾಲ್ಲೂಕಿನಾದ್ಯಂತ ವಾಡಿಕೆಯಂತೆ 302 ಮಿ.ಮೀ ಮಳೆ ಆಗಬೇಕಾಗಿತ್ತು. ಆದರೆ 243 ಮಿ.ಮೀ ಮಳೆಯಾಗಿದ್ದು, ಶೇ 19ರಷ್ಟು ಮಳೆ ಕೊರತೆಯಿಂದ ರೈತರು ಬೆಳೆ ನಷ್ಟದ ಆತಂಕದಲ್ಲಿದ್ದಾರೆ.

ಬಿತ್ತನೆ ವಿವರ (ಬೆಳೆ;ಬಿತ್ತನೆ ಗುರಿ;ಬಿತ್ತನೆ (ಹೆಕ್ಟೇರ್‌ಗಳಲ್ಲಿ))

ಭತ್ತ;35,142;5,844

ತೊಗರಿ;1,993;1,075

ಸೂರ್ಯಕಾಂತಿ;1,575;105

ಹತ್ತಿ;17,516;13,880

ಸಜ್ಜೆ;1,389;537

ಜೋಳ;950;80

ತೋಟಗಾರಿಕೆ ಬೆಳೆ;12,335;2,089

ಸಕಾಲದಲ್ಲಿ ಮುಂಗಾರು ಮಳೆಯಾಗದ್ದರಿಂದ ತಾಲ್ಲೂಕಿನ ವೇದಾವತಿ ನದಿಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ತುಂಗಭದ್ರಾ ನದಿಯಿಂದ ವೇದಾವತಿ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.
ವಾ.ಹುಲುಗಪ್ಪ, ಅಧ್ಯಕ್ಷ, ತಾಲ್ಲೂಕು ರೈತ ಸಂಘ ಸಿರುಗುಪ್ಪ
ಮಳೆ ಕೊರತೆಯಿಂದ ವೇದಾವತಿ ಹಗರಿ ಭಾಗದ ರೈತರು ಭತ್ತದ ನಾಟಿಯನ್ನು ಮುಂದೂಡಬೇಕು. ಮುಂದಿನ ನೀರಿನ ಲಭ್ಯತೆ ನೋಡಿ ನಾಟಿ ಕಾರ್ಯ ಮುಂದುವರಿಸಬೇಕು.
ಎಸ್.ಬಿ.ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ
ಸಿರುಗುಪ್ಪ ತಾಲ್ಲೂಕಿನ ವೇದಾವತಿ (ಹಗರಿ) ನದಿ ಸಂಪೂರ್ಣವಾಗಿ ಒತ್ತಿಹೋಗಿ ರೈತರ ಪಂಪ್‌ಸೆಟ್ ಪೈಪ್‌ಲೈನ್‌ಗಳು ಹೊರಬಿದ್ದಿರುವುದು
ಸಿರುಗುಪ್ಪ ತಾಲ್ಲೂಕಿನ ವೇದಾವತಿ (ಹಗರಿ) ನದಿ ಸಂಪೂರ್ಣವಾಗಿ ಒತ್ತಿಹೋಗಿ ರೈತರ ಪಂಪ್‌ಸೆಟ್ ಪೈಪ್‌ಲೈನ್‌ಗಳು ಹೊರಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT