ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಬಳಕೆ; ಕಾಗದದಲ್ಲೇ ಯೋಜನೆ

Last Updated 21 ಜೂನ್ 2021, 9:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಳೆ ನೀರಿನ ಸದ್ಬಳಕೆಗೆ ಆಯಾ ಮಹಾನಗರ ಪಾಲಿಕೆ, ನಗರಸಭೆ ಯೋಜನೆ ಜಾರಿಗೊಳಿಸಿ, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕೆಂದು ಸರ್ಕಾರದ ನಿರ್ದೇಶನ ಇದೆ. ಹೀಗಿದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.

ಬಳ್ಳಾರಿ ಮಹಾನಗರ ಪಾಲಿಕೆಯಾಗಲಿ, ಹೊಸಪೇಟೆ ನಗರಸಭೆಯಾಗಲಿ, ಅವಳಿ ಜಿಲ್ಲೆ ವ್ಯಾಪ್ತಿಯ ತಾಲ್ಲೂಕು ಪುರಸಭೆಗಳಲ್ಲಾಗಲಿ ಮಳೆ ನೀರು ಸಂಗ್ರಹಕ್ಕೆ ಸೂಕ್ತ ಯೋಜನೆಗಳಿಲ್ಲ. ಬೆರಳೆಣಿಕೆಯಷ್ಟು ಸರ್ಕಾರಿ ಕಚೇರಿಗಳಲ್ಲಿ, ಕೆಲ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಮಳೆ ನೀರು ಸಂಗ್ರಹಿಸಿ, ಅದರ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಬಹುತೇಕ ಕಚೇರಿಗಳಲ್ಲಿ ಇದ್ಯಾವುದೂ ಇಲ್ಲ.

ಮನೆ ಕಟ್ಟುವಾಗ ಮಳೆ ನೀರು ಸಂಗ್ರಹಕ್ಕೆ ಜಾಗ ಬಿಡುವುದು ಕಡ್ಡಾಯವಿದೆ. ಆದರೆ, ಅದರ ಪಾಲನೆಯೇ ಆಗುತ್ತಿಲ್ಲ. ಕನಿಷ್ಠ 30X40 ಅಡಿ ಸುತ್ತಳತೆ ವಿಸ್ತೀರ್ಣದ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕಾದರೆ, ಮಳೆ ನೀರು ಸಂಗ್ರಹಕ್ಕಾಗಿ ಜಾಗ ತೋರಿಸುವುದು ಕಡ್ಡಾಯ. ಅದನ್ನು ನಕಾಶೆಯಲ್ಲಿ ತೋರಿಸಿದರಷ್ಟೇ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂಬ ನಿಯಮ ಇದೆ. ಆದರೆ, ಬಹುತೇಕರು ಅದನ್ನು ಪಾಲಿಸುತ್ತಿಲ್ಲ. ಹೀಗಿದ್ದರೂ ಕಟ್ಟಡಗಳ ನಿರ್ಮಾಣ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಎಗ್ಗಿಲ್ಲದೆ ನಡೆಯುತ್ತಿದೆ.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ನಮ್ಮ ವ್ಯಾಪ್ತಿಯ ಹೊಸ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಜಾಗ ತೋರಿಸಿದರಷ್ಟೇ ಅನುಮತಿ ಕೊಡಲಾಗುತ್ತಿದೆ’ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವ ಸ್ಥಿತಿಯೇ ಸಂಪೂರ್ಣ ಭಿನ್ನವಾಗಿದೆ. ಸರ್ಕಾರಿ ಕಚೇರಿಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

‘15ನೇ ಹಣಕಾಸು ಯೋಜನೆ ಅಡಿಯಲ್ಲಿ ನಗರಸಭೆ ವತಿಯಿಂದ ಮಳೆ ನೀರು ಸಂಗ್ರಹ ಘಟಕಗಳ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಲಾಗಿದೆ. ನಗರಸಭೆ ಆವರಣ, ತಾಲ್ಲೂಕು ಕಚೇರಿ ಹಾಗೂ ಮುನ್ಸಿಪಲ್ ಹೈಸ್ಕೂಲ್ ಬಳಿ ನಿರ್ಮಿಸಲಾಗುತ್ತಿದೆ. ₹18 ಲಕ್ಷ ವೆಚ್ಚದಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಇನ್ನೂ 15 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಶುರುವಾಗಿ ಕಾಮಗಾರಿ ಆರಂಭವಾಗಲಿದೆ’ ಎಂದು ಹೊಸಪೇಟೆ ನಗರಸಭೆ ಸಹಾಯಕ ಎಂಜಿನಿಯರ್‌ ಕೆ.ಎಂ. ಖಾಜಿ ಸಾಬ್‌ ತಿಳಿಸಿದ್ದಾರೆ.

ಎರಡೂ ಜಿಲ್ಲೆಗಳಲ್ಲಿ ಇದೇ ರೀತಿ ಕಾಗದದಲ್ಲಷ್ಟೇ ಯೋಜನೆಗಳಿವೆ. ಮಳೆ ನೀರು ಸಂಗ್ರಹಿಸಿ, ಅದರ ಸದ್ಬಳಕೆಯ ವಿಚಾರದಲ್ಲಿ ಅವಳಿ ಜಿಲ್ಲೆಗಳು ಸಾಕಷ್ಟು ಹಿಂದುಳಿದಿವೆ. ಇದರ ಪರಿಣಾಮ ಪ್ರತಿ ವರ್ಷ ಮಳೆ ನೀರು ಚರಂಡಿ ಪಾಲಾಗುತ್ತಿದೆ.

–ಶಶಿಕಾಂತ ಎಸ್‌. ಶೆಂಬೆಳ್ಳಿ, ಕೆ. ಸೋಮಶೇಖರ್‌, ಜಿ. ಕರಿಬಸವರಾಜ, ಸಿ. ಶಿವಾನಂದ, ಕೆ.ಎಂ. ನಾಗಭೂಷಣ, ಎಂ.ಬಸವರಾಜಯ್ಯ, ಕೆ.ಎಂ. ಸೋಮಶೇಖರಯ್ಯ, ರವಿಕುಮಾರ ಗಡ್ಡೇರ್‌, ಬಿ. ಯರ್ರಿಸ್ವಾಮಿ, ಎಚ್‌.ಎಸ್‌. ಶ್ರೀಹರಪ್ರಸಾದ್‌, ಎಚ್.ಎಂ. ಪಂಡಿತಾರಾಧ್ಯ

ಚರಂಡಿ ಸೇರುತ್ತಿದೆ ಮಳೆ ನೀರು
ಹೂವಿನಹಡಗಲಿ: ಪಟ್ಟಣದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿರುವ ಮನೆಗಳು ತೀರಾ ಅಪರೂಪವಾಗಿವೆ. ಮಳೆ ನೀರು ಸಂಗ್ರಹಿಸಿಕೊಂಡು ಬಳಕೆ ಮಾಡುವ, ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಹೆಚ್ಚಿಸುವ ಕಡೆ ಜನರು ಗಮನಹರಿಸದೇ ಇರುವುದರಿಂದ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗುತ್ತಿದೆ.
ಹೊಸ ಮನೆ ನಿರ್ಮಾಣ ವೇಳೆ ಮಳೆ ನೀರು ಸಂಗ್ರಹಣ ತೊಟ್ಟಿ ನಿರ್ಮಿಸಿಕೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪುರಸಭೆಯವರು ಈ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ಜನರು ಈ ಕರೆಗೆ ಸ್ಪಂದಿಸಿಲ್ಲ.

ಮಳೆ ನೀರು ಸಂಗ್ರಹಕ್ಕೆ ನಿರಾಸಕ್ತಿ
ಕೊಟ್ಟೂರು: ಮಳೆ ನೀರು ಸಂಗ್ರಹಕ್ಕೆ ಪಟ್ಟಣದಲ್ಲಿ ಈವರೆಗೂ ಯಾವುದೇ ವ್ಯವಸ್ಥೆ ಇಲ್ಲ. ಬೆರಳೆಣಿಕೆಯ ಜನ ವೈಯಕ್ತಿಕ ಆಸಕ್ತಿಯಿಂದ ಮಾಡಿಕೊಂಡಿದ್ದಾರೆ. ಪಟ್ಟಣದ ತಾಲ್ಲೂಕು ಕಚೇರಿ ಹೊರತುಪಡಿಸಿ ಯಾವುದೇ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಇಲ್ಲ. ಪಟ್ಟಣ ಪಂಚಾಯಿತಿ ನೂತನ ಕಟ್ಟಡದಲ್ಲಿ ಅದಕ್ಕೆ ಸಿದ್ಧತೆ ನಡೆದಿದೆ.

ಕಡ್ಡಾಯ ನಿಯಮ ನಾಮಕಾವಸ್ತೆ
ಹಗರಿಬೊಮ್ಮನಹಳ್ಳಿ: ಮನೆ ನಿರ್ಮಿಸುವಾಗ ಮಳೆ ನೀರು ಸಂಗ್ರಹಕ್ಕೆ ಜಾಗ ಬಿಡಬೇಕೆಂಬ ಕಡ್ಡಾಯ ನಿಯಮವಿದ್ದರೂ ಅದು ನಾಮಕಾವಸ್ತೆ ಎಂಬಂತಾಗಿದೆ. ‘ಪಟ್ಟಣದಲ್ಲಿ ಮಳೆ ಬಂದಾಗ ಚರಂಡಿ ಸೇರುತ್ತದೆ. ಮನೆಗಳ ಮಾಲೀಕರು ಮಳೆ ನೀರು ಸಂಗ್ರಹ ಮಾಡಿದರೆ ಪಟ್ಟಣದಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಇದಕ್ಕೆ ಜನರ ಸಹಭಾಗಿತ್ವ ಅಗತ್ಯ’ ಎನ್ನುತ್ತಾರೆ ಪಿಡಬ್ಲ್ಯೂಡಿ ಎಇಇ ಪ್ರಭಾಕರ ಶೆಟ್ರು.

‘ಬೆರಳೆಣಿಕೆ ಕಡೆ ಅನುಷ್ಠಾನ’
ಸಂಡೂರು: ಪಟ್ಟಣದ ಕೆಲ ಕಾಲೇಜು, ಹೊಸ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಮಾಡಿಕೊಂಡಿರುವುದು ಬಿಟ್ಟರೆ ಬಹುತೇಕ ಕಟ್ಟಡಗಳಲ್ಲಿ ಇಲ್ಲ. ‘ಹೊಸ ಮನೆಗಳನ್ನು ನಿರ್ಮಿಸುವವರು ಮನೆಯ ವಿನ್ಯಾಸದಲ್ಲಿ ಮಳೆ ನೀರು ಸಂಗ್ರಹ ಅಥವಾ ಇಂಗುಗುಂಡಿ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿದರಷ್ಟೇ ಅನುಮತಿ ನೀಡಲಾಗುವುದು’ ಎಂದು ಪುರಸಭೆಯ ಜೆಇ ಅರುಣ್ ಪಾಟೀಲ ತಿಳಿಸಿದರು. ತಾಲ್ಲೂಕಿನ ತೋರಣಗಲ್‌ನಲ್ಲೂ ಇದೇ ಪರಿಸ್ಥಿತಿ ಇದೆ.

‘ಪ್ರಗತಿ ಶೂನ್ಯ’
ಸಿರುಗುಪ್ಪ: ಮಳೆ ನೀರು ಸಂಗ್ರಹದ ವಿಚಾರದಲ್ಲಿ ಪಟ್ಟಣದ ಪ್ರಗತಿ ಶೂನ್ಯವಾಗಿದೆ. ಸಮೀಪದಲ್ಲೇ ತುಂಗಭದ್ರಾ ನದಿ ಇರುವುದರಿಂದ ಯಥೇಚ್ಛವಾಗಿ ನೀರು ಸಿಗುತ್ತದೆ. ಸಹಜವಾಗಿಯೇ ಅವರಿಗೆ ಮಳೆ ನೀರು ಸಂಗ್ರಹಿಸಿ, ಬಳಸುವುದರ ಬಗ್ಗೆ ಆಸಕ್ತಿ ಇಲ್ಲ.

ನಕಾಶೆಗಷ್ಟೇ ಸೀಮಿತ
ಕೂಡ್ಲಿಗಿ: ತಾಲ್ಲೂಕಿನಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ನಕಾಶೆಗಳಿಗಷ್ಟೇ ಸೀಮಿತವಾಗಿದೆ. ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಂದ ಮನೆ ಸೇರಿದಂತೆ ಇತರೆ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ನಕಾಶೆಯಲ್ಲಿ ಮಳೆ ನೀರಿನ ಸಂಗ್ರಹದ ಬಗ್ಗೆ ತೋರಿಸಿರುತ್ತಾರೆ. ಅನುಮತಿ ಪಡೆದ ನಂತರ ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಅಧಿಕಾರಿಗಳು ಅದನ್ನು ಪರಿಶೀಲಿಸುವ ಗೋಜಿಗೂ ಹೋಗುವುದಿಲ್ಲ. ಇದರಿಂದಾಗಿ ಬಹುತೇಕ ಕಟ್ಟಡಗಳಲ್ಲಿ ಈ ವ್ಯವಸ್ಥೆ ಇಲ್ಲದಂತಾಗಿದೆ. ವೇಗವಾಗಿ ಬೆಳೆಯುತ್ತಿರುವ ಕಾನಹೊಸಹಳ್ಳಿ ಪಟ್ಟಣದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

‘ಮಾದರಿ ಮೈರಾಡ’
ಮರಿಯಮ್ಮನಹಳ್ಳಿ: 114-ಡಣಾಪುರ ಗ್ರಾಮದ ಮೈರಾಡ ಸಂಸ್ಥೆಯ ಹೊಂಗಿರಣ ತರಬೇತಿ ಕೇಂದ್ರದಲ್ಲಿ 12 ವರ್ಷಗಳ ಹಿಂದೆಯೇ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡು, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಸಂಸ್ಥೆಯ ಆವರಣದಲ್ಲಿ 65 ಸಾವಿರ, 25 ಸಾವಿರ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಎರಡು ಸಂಪುಗಳನ್ನು ನಿರ್ಮಿಸಿದ್ದಾರೆ. ವರ್ಷವಿಡೀ ಸಂಸ್ಥೆಯ ಕಚೇರಿ ಸೇರಿದಂತೆ ತರಬೇತಿ ಕೇಂದ್ರ, ಅತಿಥಿ ಗೃಹ, ಊಟದ ಹಾಲ್‌, ಆವರಣದಲ್ಲಿ ಬೆಳೆಸಿರುವ ವಿವಿಧ ಜಾತಿಯ ಗಿಡ, ಮರಗಳಿಗೆ ಇದೇ ನೀರು ಉಪಯೋಗಿಸುತ್ತಾರೆ. ‘ಮಳೆ ನೀರು ಸಂಗ್ರಹಿಸಿ ಬಳಸಿಕೊಳ್ಳುತ್ತಿರುವುದರಿಂದ 12 ವರ್ಷಗಳಿಂದ ನಮಗೆ ನೀರಿನ ಸಮಸ್ಯೆಯೇ ಎದುರಾಗಿಲ್ಲ’ ಎಂದು ಸಂಸ್ಥೆ ಯೋಜನಾಧಿಕಾರಿ ಎನ್.ನಟರಾಜ್ ತಿಳಿಸಿದ್ದಾರೆ.

ರೈತನ ಮಾದರಿ ಕೆಲಸ
ಕಂಪ್ಲಿ: ತಾಲ್ಲೂಕಿನ ಮೆಟ್ರಿ ಗ್ರಾಮದ ರೈತ ಗಂಗಾಧರ ಹೊನ್ನಳ್ಳಿ ಅವರು ತಮ್ಮ ಮನೆಗೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. 2008ರಲ್ಲಿ ಮನೆ ನಿರ್ಮಾಣದ ವೇಳೆ ಈ ಪದ್ಧತಿ ಅಳವಡಿಸಿಕೊಂಡಿದ್ದಾರೆ. 15 ಅಡಿ ಉದ್ದ, 12 ಅಡಿ ಅಗಲ, 12 ಅಡಿ ಎತ್ತರದ ಸಂಪು ನಿರ್ಮಿಸಿದ್ದು, 1 ಲಕ್ಷ ಲೀಟರ್ ಮಳೆ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸಂಪು ತುಂಬಿದ ನಂತರ ಹೆಚ್ಚಿನ ನೀರು ಅಲ್ಲಿರುವ ಕೊಳವೆಬಾವಿ ಸುತ್ತಲು ಇಂಗುವಂತೆ ಮಾಡಿದ್ದಾರೆ. ಮಳೆ ನೀರು ಸಂಗ್ರಹವಿಲ್ಲದ ವೇಳೆ ಕೊಳವೆಬಾವಿ ನೀರು ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT