ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್

Last Updated 1 ಜುಲೈ 2022, 10:14 IST
ಅಕ್ಷರ ಗಾತ್ರ

ಹೊಸಪೇಟೆ: ‘ಇಷ್ಟು ವಯಸ್ಸಾಗಿದೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರಿ. ಜ್ಞಾನ ಇಲ್ವ ನಿಮಗೆ?ಶುಕ್ರವಾರ ನಗರದ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಏರ್ಪಡಿಸಿದ್ದ ರೌಡಿಶೀಟರ್‌ಗಳ ಪರೇಡ್‌ನಲ್ಲಿ ರೌಡಿಶೀಟರ್‌ನೊಬ್ಬನನ್ನು ಕಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮೇಲಿನಂತೆ ಪ್ರಶ್ನಿಸಿದರು. ರೌಡಿಶೀಟರ್‌ಗಳಲ್ಲಿ ಕೆಲವರು 60 ವರ್ಷಕ್ಕಿಂತ ದೊಡ್ಡವರು ಎಂದು ತಿಳಿದ ನಂತರ, ‘ಸೈಕೋಗಳಾದ ಇವರನ್ನ ಆಗಾಗ ಸ್ಟೇಶನ್ನಿಗೆ ಕರೆಸಿ ವಿಚಾರಿಸುತ್ತಿರಬೇಕು’ ಎಂದು ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದರು.

‘ಕೊಲೆ, ಕೋಮು ಗಲಭೆ, ಕಳ್ಳತನ, ಗಲಾಟೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿಕೊಂಡು ಉತ್ತಮ ಪ್ರಜೆಗಳಾಗಿ ಬದುಕಬೇಕು. ಹಳೆಯ ತಪ್ಪುಗಳು ಮರುಕಳಿಸಿದರೆ ನಾವು ನಮ್ಮ ಕೆಲಸ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕೋಮುಗಲಭೆಗಳಿಗೆ ಕುಮ್ಮಕ್ಕು ಕೊಡುವುದಾಗಲಿ, ಅದನ್ನು ಮಾಡುವುದಾಗಲಿ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರಗಳ್ಳತನ, ಮಟ್ಕಾ, ಜೂಜಾಟ ಪ್ರಕರಣದಲ್ಲಿರುವವರು ಈ ಕೆಲಸ ಬಿಡಬೇಕು. ಇಲ್ಲವಾದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹೊಸಪೇಟೆ ಉಪವಿಭಾಗ ವ್ಯಾಪ್ತಿಯ ಪಟ್ಟಣ ಠಾಣೆ, ಗ್ರಾಮೀಣ ಠಾಣೆ, ಬಡಾವಣೆ ಠಾಣೆ, ಟಿ.ಬಿ ಡ್ಯಾಂ ಮತ್ತು ಕಮಲಾಪುರ ಠಾಣೆ ವ್ಯಾಪ್ತಿಯ ರೌಡಿ ಶೀಟರ್‌ಗಳ ಪರೇಡ್ ನಡೆಸಲಾಯಿತು. ಪ್ರತಿಯೊಬ್ಬರ ಮಾಹಿತಿ ಪ್ರತ್ಯೇಕವಾಗಿ ಪಡೆದರು.

ಡಿವೈಎಸ್ಪಿ ವಿಶ್ವನಾಥರಾವ್‌ ಕುಲಕರ್ಣಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶ್ರೀನಿವಾಸ್‌ ಮೇಟಿ, ಎಂ. ಶ್ರೀನಿವಾಸ್‌ ಮಾನೆ, ಎಸ್‌.ಪಿ. ನಾಯ್ಕ, ಎನ್‌. ಸರೋಜ, ಹುಲುಗಪ್ಪ ಇದ್ದರು.

100 ಜನ ರೌಡಿಶೀಟರ್ ಗೈರು
ಹೊಸಪೇಟೆ ಉಪವಿಭಾಗ ಮಟ್ಟದ 206 ರೌಡಿಶೀಟರ್‌ಗಳಲ್ಲಿ 106 ಜನ ಪರೇಡ್‌ಗೆ ಹಾಜರಾಗಿದ್ದರು. ‘ಗೈರಾಗಿರುವ ರೌಡಿಶೀಟರ್‌ಗಳನ್ನು ಕರೆಸಿ ಕಾರಣ ಕೇಳಿ ಸೂಕ್ತ ಕ್ರಮ ಜರುಗಿಸಲಾಗುವುದು‘ ಎಂದು ಎಸ್ಪಿ ಡಾ. ಅರುಣ್‌ ಕೆ. ತಿಳಿಸಿದರು.

‘ತಲೆ ಇಲ್ವಾ ನಿಂಗೆ?’
ಪರೇಡ್ ಸಂದರ್ಭದಲ್ಲಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಮಾಹಿತಿ ನೀಡಲು ಮುಂದಾದ ರೌಡಿಶೀಟರ್‌ ಗುಜರಿ ಶೇಕ್ಷಾ ಎಂಬುವರನ್ನು ಎಸ್ಪಿ ಡಾ. ಅರುಣ್‌ ಗದರಿಸಿದರು.

‘ತಲೆ ಇಲ್ವಾ ನಿಂಗೆ? ಮಜ ಮಾಡೋಕೆ ಬಂದಿಯಾ ಇಲ್ಲಿಗೆ?’ ಎಂದು ತರಾಟೆಗೆ ತೆಗೆದುಕೊಂಡ ಎಸ್ಪಿ, ಇವನನ್ನು ಠಾಣೆ ಒಳಗೊಯ್ದು ಕೂರಿಸಿ, ಅನಂತರ ನೋಡುವೆ ಎಂದರು. ಅಲ್ಲಿದ್ದ ಸಿಬ್ಬಂದಿ ಕೊರಳಪಟ್ಟಿ ಹಿಡಿದುಕೊಂಡು ಒಳಗೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT