ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಬಳಸಿ ಬಿಸಾಡುವ ನೀತಿ ಸಂವಿಧಾನ ವಿರೋಧಿ: ಎಸ್‌. ವರಲಕ್ಷ್ಮಿ

Last Updated 6 ಫೆಬ್ರುವರಿ 2022, 8:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅತಿಥಿ ಉಪನ್ಯಾಸಕರನ್ನು ಬಳಸಿ ಬಿಸಾಡುವ ರಾಜ್ಯ ಸರ್ಕಾರದ ನೀತಿ ಸಂವಿಧಾನ ವಿರೋಧಿಯಾಗಿದೆ’ ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಅಸೋಸಿಯೇಷನ್‌ ನಾಯಕಿ ಎಸ್‌. ವರಲಕ್ಷ್ಮಿ ಹೇಳಿದರು.

ಗುತ್ತಿಗೆ ಆಧಾರಿತ ನೌಕರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್‌ ಹೇಳಿದೆ. ಹೀಗಿದ್ದರೂ ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಅವರ ಬದುಕಿನ ಅನಿವಾರ್ಯತೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದು ಸಂವಿಧಾನ ವಿರೋಧಿ ನಡೆ ಎಂದು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ರಾಜ್ಯ ಸರ್ಕಾರ ಈ ಹಿಂದೆ ಹಲವು ಷರತ್ತುಗಳನ್ನು ಹಾಕಿಯೇ ಅತಿಥಿ ಉಪನ್ಯಾಸಕರನ್ನು ಕೆಲಸಕ್ಕೆ ತೆಗೆದುಕೊಂಡಿತ್ತು. ಕಾರ್ಯಾಭಾರ ಹೆಚ್ಚಾದರೆ ಹೊಸಬರನ್ನು ತೆಗೆದುಕೊಳ್ಳಬೇಕು. ಹಳಬರನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು ಎಂದು ಸರ್ಕಾರ 2021ರ ಅಕ್ಟೋಬರ್‌ನಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಿತ್ತು. ಈಗ ಹೊಸ ಸುತ್ತೋಲೆ ಹೊರಡಿಸಿ, ಗುಣಮಟ್ಟದ ಶಿಕ್ಷಣದ ನೆಪವೊಡ್ಡಿ ಹೊಸಬರ ನೇಮಕಕ್ಕೆ ಮುಂದಾಗಿದೆ. ಹಾಗಿದ್ದರೆ ಇದುವರೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರಲಿಲ್ಲವೇ? ಹೊಸ ಸುತ್ತೋಲೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು. ಅದನ್ನು ಬಲವಾಗಿ ಖಂಡಿಸುತ್ತೇನೆ ಎಂದರು.

ಎಲ್ಲ ಅತಿಥಿ ಉಪನ್ಯಾಸಕರ ‘ಸರ್ವೀಸ್‌ ರೆಕಾರ್ಡ್‌’ ಸರ್ಕಾರದ ವೈಬ್‌ಸೆಟಿನಲ್ಲೇ ಲಭ್ಯ ಇದೆ. 14,447 ಉಪನ್ಯಾಸಕರು 31 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಐದು ವರ್ಷ ಸೇವಾ ಅನುಭವ ಹೊಂದಿರುವ 6 ಸಾವಿರ ಉಪನ್ಯಾಸಕರಿದ್ದಾರೆ. ಹೀಗಿರುವಾಗ ಹೊಸಬರ ನೇಮಕಕ್ಕೆ ಮುಂದಾಗಿರುವುದು ಸರಿಯಲ್ಲ. ವೇತನ ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇಬ್ಬರ ಕಾರ್ಯಾಭಾರ ಒಬ್ಬರಿಗೆ ವಹಿಸಿ, ವೇತನ ಹೆಚ್ಚಿಸಿದೆ. ಇದು ಒಡೆದು ಆಳುವ ತಂತ್ರ ಎಂದು ಟೀಕಿಸಿದರು.

17,106 ಅತಿಥಿ ಉಪನ್ಯಾಸಕರನ್ನು ಈ ಹಿಂದಿನಂತೆ ಮುಂದುವರೆಸಬೇಕು. ಪ್ರತಿ ವಾರ 3ರಿಂದ 4 ಗಂಟೆ ಕೆಲಸದ ಅವಧಿ ಕಡಿಮೆಗೊಳಿಸಬೇಕು. ವಿಶ್ವವಿದ್ಯಾಲಯಗಳು, ಅವುಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಯ ಕೊರತೆ ಇದ್ದು, ಅಲ್ಲಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು. ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿ ಫೆ. 14ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ನಿವೃತ್ತಿ ವಯಸ್ಸಿನವರೆಗೆ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ. ಮಾಸಿಕ ₹40,000 ವೇತನ ನೀಡಲಾಗುತ್ತಿದೆ. ಅದೇ ಮಾದರಿ ನಮ್ಮಲ್ಲೂ ಜಾರಿಗೊಳಿಸಬೇಕು. ರಾಜ್ಯದಲ್ಲಿ 7,000ಕ್ಕೂ ಹೆಚ್ಚು ಕಾಯಂ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಆದರೆ, ಸರ್ಕಾರ 1,250 ಹುದ್ದೆಗಳನ್ನಷ್ಟೇ ತುಂಬಲು ಮುಂದಾಗಿದೆ. ಮಂಜೂರಾದ ಹುದ್ದೆಗಳೆಂದು ಎಲ್ಲೂ ತೋರಿಸುತ್ತಿಲ್ಲ ಎಂದರು.

ಸಂಘದ ಹಿರಿಯ ಮುಖಂಡ ಗಾದೆಪ್ಪ ಮಾತನಾಡಿ, ಪಾಠ–ಪ್ರವಚನದ ಜೊತೆಗೆ ಅತಿಥಿ ಉಪನ್ಯಾಸಕರು ನ್ಯಾಕ್‌, ಮೌಲ್ಯಾಂಕನ ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಾರೆ. ಆದರೆ, ಅವರು ಪಾಠಕ್ಕಷ್ಟೇ ಸೀಮಿತರಾಗಿದ್ದಾರೆ ಎಂದು ಸರ್ಕಾರ ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್‌ ರೆಡ್ಡಿ, ಸುಪ್ರಿಯಾ, ಗಿರೀಶಗೌಡ, ಸಂದೀಪ್‌ಹರ್ಷ, ಚೌಡೇಶ್‌, ಸೋಮಶೇಖರ್‌, ಪಾಂಡೇಶ್‌, ಸೌಮ್ಯ, ಸುರೇಶ, ನಿಂಗಣ್ಣ ಇದ್ದರು.

‘ಹಿಜಾಬ್‌ ವಿವಾದ ದುಃಖಕರ’
‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉಂಟಾಗಿರುವ ಹಿಜಾಬ್‌ ವಿವಾದ ಬಹಳ ದುಃಖಕರ’ ಎಂದು ಎಸ್‌. ವರಲಕ್ಷ್ಮಿ ಹೇಳಿದರು.
ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎನ್ನುವುದಕ್ಕೆ ಹೆಸರಾಗಿದೆ. ಅಧಿಕಾರಕ್ಕಾಗಿ ರಾಜ್ಯದ ಹೆಸರು ಕುಲಗೆಡಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಆಯಾ ಕಾಲೇಜು ಆಡಳಿತ ಮಂಡಳಿಗಳು ಬಗೆಹರಿಸಬೇಕು. ಹೆಣ್ಣು ಮಕ್ಕಳು ಮೊದಲಿನಿಂದಲೂ ಹಿಜಾಬ್‌ ಬಳಸುತ್ತಿದ್ದಾರೆ. ಅದು ಎಂದೂ ವಿವಾದವಾಗಿರಲಿಲ್ಲ. ಈಗೇಕೇ ವಿವಾದವಾಗುತ್ತಿದೆ? ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಮಾಡಲಾಗುತ್ತಿದೆ ಎಂದರು.

ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸದೇ ಇರುವುದರಿಂದ ಬಿಲ್ಲವ ಸಮುದಾಯದವರು ಬಿಜೆಪಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ. ಕರಾವಳಿಯಲ್ಲಿ ಬಿಲ್ಲವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಗಮನ ಬೇರೆಡೆ ಸೆಳೆಯಲು ಹಿಜಾಬ್‌ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT