ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂತೋಷ್‌ ಲಾಡ್ ಜನ್ಮದಿನ: ಹೊಸಪೇಟೆಯ ‘ಸಂತೋಷ’ಕ್ಕೆ ಅಡಿಪಾಯ

ಜನ್ಮದಿನದ ಖುಷಿ–ಬಸವ, ಅಂಬೇಡ್ಕರ್ ಹಾಡುಗಳಲ್ಲಿ ಮನಸ್ಸು ಲೀನ
Published 28 ಫೆಬ್ರುವರಿ 2024, 4:51 IST
Last Updated 28 ಫೆಬ್ರುವರಿ 2024, 4:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಾಯಕಯೋಗಿ ‘ಬಸವಣ್ಣ’ ಮತ್ತು ಸಂವಿಧಾನ ಶಿಲ್ಪಿ ‘ಅಂಬೇಡ್ಕರ್‌’ ಕುರಿತ ಗೀತೆಗಳನ್ನು ಬಿಡುಗಡೆ ಮಾಡುವ ಮೂಲಕ ಹಾಗೂ ಸಂತೋಷ್‌ ಲಾಡ್ ಫೌಂಡೇಶನ್‌ ಕಳೆದ 14 ವರ್ಷಗಳಿಂದ ನಡೆಸುತ್ತ ಬಂದಿರುವ ಸಮಾಜಮುಖಿ ಕೆಲಸಗಳನ್ನು ಪರಿಚಯಿಸುವ ಮೂಲಕ ಸಚಿವ ಲಾಡ್‌ ಅವರ 49ನೇ ಜನ್ಮದಿನವನ್ನು ಮಂಗಳವಾರ ಇಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.

ಕಲಘಟಗಿ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ನೆರವಾಗಿರುವ ಸಚಿವರು, ಹೊಸಪೇಟೆಯಲ್ಲೂ ತಮ್ಮ ಸಮಾಜ ಸೇವೆಯ ಕಿರು ಪರಿಚಯವನ್ನು ಸುಮಾರು 10 ನಿಮಿಷಗಳ ವಿಡಿಯೊಗಳ ಮೂಲಕ ತೋರಿಸಿದಾಗ ಜನ ಬೆರಗಾಗಿ ನೋಡಿದರು.

ಇದು ಉಸ್ತುವಾರಿ ಸಚಿವರಾಗಿ ಲಾಡ್‌ ಅವರು ಜಿಲ್ಲೆಗೆ ಪದಾರ್ಪಣೆ ಮಾಡಲಿರುವ ಮುನ್ನುಡಿಯೋ ಅಥವಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಸಂಕೇತವೋ ಎಂಬ ನಾನಾ ಆಲೋಚನೆಗಳು ನೆರೆದಿದ್ದವರ ಮನದಲ್ಲಿ ಮೂಡಿದವು.

ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್‌ ಬರೆದಿರುವ ಹಾಡುಗಳನ್ನು ಕಲಾವಿದರು ವೇದಿಕೆಯ ಮೇಲೆ ಹಾಡಿದಾಗ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣ ಪುಳಕಿತಗೊಂಡಿತು. ಅಂಬೇಡ್ಕರ್ ತತ್ವಗಳು, ಬಸವಣ್ಣನವರ ವಚನಾಮೃತಗಳು ಲಹರಿ ಲಹರಿಯಾಗಿ ಕಿವಿಗೆ ಬಂದು ತಲುಪಿದವು.

ಸಂವಿಧಾನದಿಂದಲೇ ಧ್ವನಿ: ಸಂತೋಷ್ ಲಾಡ್‌ ಜನ್ಮದಿನಕ್ಕೆ ಮುಖ್ಯ ಆಕರ್ಷಣೆಯಾಗಿದ್ದು ಸಾಮಾಜಿಕ ಕಾರ್ಯಕರ್ತ ಕನ್ಹಯ್ಯಾ ಕುಮಾರ್ ಮತ್ತು ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ಸಂಚಾಲಕ ಜಿಗ್ನೇಶ್ ಮೇವಾನಿ. ಸಂವಿಧಾನದಿಂದಾಗಿಯೇ ಧ್ವನಿ ಇಲ್ಲದವರಿಗೆ ಧ್ವನಿ ಬಂದಿದ್ದನ್ನು ಕನ್ಹಯ್ಯಾ ಕುಮಾರ್ ಹೇಳಿದರೆ, ದಲಿತರು, ಹಿಂದುಳಿದವರಿಗೆ ಕೇಕ್‌ನ ಚೆರ್ರಿ ಹಣ್ಣು ಮಾತ್ರ ಇದುವರೆಗೆ ಸಿಕ್ಕಿದೆ, ಇಡೀ ಕೇಕ್‌ ಅವರಿಗೆ ಸಿಗುವಂತಾಗಬೇಕು ಎಂದು ಜಿಗ್ನೇಶ್‌ ಮೇವಾನಿ ಹೇಳಿದರು.

ಎಐಸಿಸಿ ಸದಸ್ಯ ಕೆ.ರಾಜು ಅವರು ಸಂತೋಷ್ ಲಾಡ್ ಅವರ ಸಮಾಜಮುಖಿ ಕೆಲಸಗಳನ್ನು ಕೊಂಡಾಡಿದರು.

ವೇದಿಕೆ ತುಂಬೆಲ್ಲಾ ಕಾಂಗ್ರೆಸ್ ನಾಯಕರು: ಇದೊಂದು ಪಕ್ಷಾತೀತ ಕಾರ್ಯಕ್ರಮ ಎಂದು ಸಂಘಟಕರು ಹೇಳಿದ್ದರೂ, ವೇದಿಕೆಯ ತುಂಬೆಲ್ಲಾ ಕಾಂಗ್ರೆಸ್ ನಾಯಕರಷ್ಟೇ ಇದ್ದರು. ಹೀಗಾಗಿ ಇದೊಂದು ಲೋಕಸಭಾ ಚುನಾವಣೆಯ ತಾಲೀಮು ಕಾರ್ಯಕ್ರಮವೇನೋ ಎಂದು ಜನರು ಭಾವಿಸುವಂತಾಯಿತು. ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಇದ್ದರು. ಬಳ್ಳಾರಿ–ವಿಜಯನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ನಾಗೇಂದ್ರ ಅವರಿಗೆ ವಹಿಸಲಾಗಿದೆ ಎಂದು ಹೇಳಲಾಗಿದ್ದು, ಅದಕ್ಕಾಗಿ ಸಚಿವ ಜಮೀರ್ ಅಹ್ಮದ್‌ ಅವರ ಅನುಪಸ್ಥಿತಿಯಲ್ಲಿ ನಾಗೇಂದ್ರ ಮಿಂಚಿದರು.

ಶಾಸಕರಾದ ಇ.ತುಕಾರಾಂ, ಜೆ.ಎನ್‌.ಗಣೇಶ್‌, ಡಾ. ಎನ್‌.ಟಿ.ಶ್ರೀನಿವಾಸ್‌, ಬಿ.ಎಂ.ನಾಗರಾಜ್‌, ಎಂ.ಪಿ.ಲತಾ ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್‌ ಶೇಖ್‌, ಬಳ್ಳಾರಿ ಬನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ರಫೀಕ್‌, ಗ್ರಾಮಾಂತರದ ಅಧ್ಯಕ್ಷ ಬಿ.ವಿ.ಶಿವಯೋಗಿ ಇತರರು ಇದ್ದರು.

ಸುಮಾರು 30 ಸಾವಿರದಷ್ಟು ಖುರ್ಚಿಗಳನ್ನು ಹಾಕಲಾಗಿತ್ತು. ಆದರೆ ಅರ್ಧಕ್ಕರ್ಧ ಕುರ್ಚಿಗಳು ಖಾಲಿಯಾಗಿದ್ದವು.

ಬಸವಣ್ಣ ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಸೇರಿದ್ದ ಅಭಿಮಾನಿಗಳು  –ಪ್ರಜಾವಾಣಿ ಚಿತ್ರ
ಬಸವಣ್ಣ ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಸೇರಿದ್ದ ಅಭಿಮಾನಿಗಳು  –ಪ್ರಜಾವಾಣಿ ಚಿತ್ರ
ದೇಶದಲ್ಲಿ ಮತ್ತೆ ಬ್ರಿಟಿಷ್ ಮಾದರಿಯ ಆಡಳಿತ ಮರಳುತ್ತಿದೆ. ಸಂವಿಧಾನ ಬದಲಾವಣೆಯ ಮಾತುಗಳೊಂದಿಗೆ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ.
–ಕನ್ಹಯ್ಯಾ ಕುಮಾರ್‌, ಸಾಮಾಜಿಕ ಕಾರ್ಯಕರ್ತ
ದಲಿತ ಯುವಕರ ಕೈಗೆ ತ್ರಿಶೂಲ ಕಠಾರಿ ಖಡ್ಗ ನೀಡಿ ಜಾತಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು.
–ಜಿಗ್ನೇಶ್‌ ಮೇವಾನಿ, ಸಂಚಾಲಕ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌

ಶಾಸಕ ಗವಿಯಪ್ಪ ಗೈರು

ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಬೇಕಿತ್ತು. ಆದರೆ ಅವರ ಗೈರು ಎದ್ದು ಕಾಣಿಸುತ್ತಿತ್ತು. ಉಳಿದ ಹಲವು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬೆಂಗಳೂರಿನಿಂದ ಬಂದಿದ್ದರು. ಗವಿಯಪ್ಪ ಅವರು ಸಹ ಬೆಂಗಳೂರಿನಿಂದ ಬರಬಹುದಿತ್ತಲ್ಲ ಎಂದು ಹಲವರು ಪ್ರಶ್ನಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಬೇಕು ಎಂಬ ನಿಟ್ಟಿನಲ್ಲಿ ವೇದಿಕೆಯಲ್ಲಿ ಒಗ್ಗಟು ಪ್ರದರ್ಶನಗೊಂಡಂತೆ ಶಾಸಕರ ಗೈರು ಹಲವು ಅನುಮಾನಗಳಿಗೆ ಎಡೆಮಾಡಿತು.

ಸ್ವಾಗತ ಹಾರ ತುರಾಯಿ ಇಲ್ಲ

ಹಾರ ತುರಾಯಿ ಬೇಡ ಎಂದು ಸಂತೋಷ್‌ ಲಾಡ್ ಅವರು ಜಾಹೀರಾತು ನೀಡಿದ್ದರು. ಅದರಂತೆ ಸ್ವಾಗತ ಕಾರ್ಯಕ್ರಮವೇ ಇರಲಿಲ್ಲ. ಹಾರ ತುರಾಯಿಗಳು ಇರಲಿಲ್ಲ. ಹುಟ್ಟುಹಬ್ಬದ ಕೇಕ್‌ ಕತ್ತರಿಸುವಂತಹ ಯಾವ ಆಧುನಿಕ ಭರಾಟೆಯೂ ಕಾಣಲಿಲ್ಲ. ಜನಸಾಮಾನ್ಯರಲ್ಲಿ ತಾವೂ ಒಬ್ಬ ಜನರಿಗೆ ಬಸವ ಅಂಬೇಡ್ಕರ್‌ ತತ್ವ ಸಂದೇಶ ಸಾರುವ ಕೆಲಸ ಮಾಡಿದ್ದು ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಮೂಲಕ ಜನ್ಮದಿನವನ್ನು ಸಚಿವರು ಸಾರ್ಥಕವಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT