ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯೆಂದು ಲಘುವಾಗಿ ನೋಡಬೇಡಿ: ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ

Last Updated 2 ಫೆಬ್ರುವರಿ 2022, 12:07 IST
ಅಕ್ಷರ ಗಾತ್ರ

ಹೊಸಪೇಟೆ: ‘ಮಹಿಳೆಯೆಂದು ಲಘುವಾಗಿ ನೋಡಬೇಡಿ ನನ್ನ..’ ಹೀಗೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದವರು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ. ನಗರದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ನಮ್ಮ ಸಚಿವರು ಮಹಿಳೆ ಎಂದು ಪರಿಗಣಿಸದಿರಿ. ‘ಒಲಿದರೆ ನಾರಿ..’ ಅದರ ಮುಂದಿನ ಸಾಲು ಏನೆಂಬುದು ನಿಮಗೆ ಗೊತ್ತು. ಕೆಲಸದಲ್ಲಿ ಯಾರೂ ನಿರ್ಲಕ್ಷ್ಯ ತೋರುವಂತಿಲ್ಲ. ಶ್ರದ್ಧೆಯಿಂದ ಕೆಲಸ ಮಾಡಬೇಕು. ಒಳ್ಳೆಯ ಯೋಚನೆ ಮಾಡಬೇಕು. ಇದು ನನ್ನ ಮೊದಲ ಸಭೆ. ಇನ್ಮುಂದೆ ಮೇಲಿಂದ ಮೇಲಿಂದ ಜಿಲ್ಲೆಗೆ ಬಂದು ಸಭೆ ನಡೆಸುವೆ ಎಂದು ಹೇಳಿದರು.

ನಮಗೆ ಅವಕಾಶ ಸಿಕ್ಕಾಗ ಉತ್ತಮ ಕೆಲಸ ಮಾಡಬೇಕು. ನಿವೃತ್ತಿ ನಂತರ ಸಮಾಧಾನ ಇರುತ್ತದೆ. ಜನರ ಅಭಿಪ್ರಾಯ ಆಧರಿಸಿ ಜನಪ್ರತಿನಿಧಿಗಳು, ಅಧಿಕಾರಿಗಳು ಕೆಲಸ ಮಾಡಬೇಕು. ರಾಜ್ಯದಲ್ಲಿ ವಿಜಯನಗರ ಜಿಲ್ಲೆ ಆದರ್ಶ, ಮಾದರಿ ಜಿಲ್ಲೆ ಆಗಬೇಕು ಎಂದರು.

ಹೆಚ್ಚಿನ ಇಲಾಖೆಯ ಅಧಿಕಾರಿಗಳು ಬಳ್ಳಾರಿಯಿಂದ ಕೆಲಸ ನಿರ್ವಹಿಸುತ್ತಿದ್ದೀರಿ. ವಿಜಯನಗರಕ್ಕೂ ಪ್ರಾಮುಖ್ಯತೆ ಕೊಡಬೇಕು. ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವೆ. ಜಿಲ್ಲಾ ಆಸ್ಪತ್ರೆ, ಅಧಿಕಾರಿಗಳ ಕಚೇರಿ ಇನ್ನಷ್ಟೇ ಆರಂಭಗೊಳ್ಳಬೇಕು. ಜನರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ವಿಜಯನಗರ ಐತಿಹಾಸಿಕ ಜಿಲ್ಲೆ. ಹೊಸ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿ ಕೆಲಸಗಳು ಆಗಬೇಕು ಎನ್ನುವುದು ಮುಖ್ಯಮಂತ್ರಿಯವರ ಕನಸು. ಅದಕ್ಕೆ ಅನುಗುಣವಾಗಿ ಎಲ್ಲರೂ ಕೆಲಸ ಮಾಡೋಣ. ಜನಪ್ರತಿನಿಧಿಗಳು, ಅಧಿಕಾರಿಗಳ ನಡುವೆ ಹೊಂದಾಣಿಕೆಯಿದ್ದರೆ ಕೆಲಸಗಳಾಗುತ್ತವೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಲು ಸಾಧ್ಯ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್‌ ಹರ್ಷಲ್‌ ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶಬಾಬು, ಸಚಿವರ ಆಪ್ತ ಕಾರ್ಯದರ್ಶಿ ಚಿದಂಬರ ಇದ್ದರು.‌

‘ಆರ್‌ಟಿಪಿಸಿಆರ್‌ ಲ್ಯಾಬ್‌ ಸ್ಥಾಪನೆ’
‘ವಿಜಯನಗರ ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆ ನಡೆಸುವ ಆರ್‌ಟಿಪಿಸಿಆರ್ ಲ್ಯಾಬ್‌ ಇಲ್ಲ. ಅದನ್ನು ಸ್ಥಾಪಿಸಲಾಗುವುದು’ ಎಂದು ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ತಿಳಿಸಿದರು.

ಹೊಸ ಜಿಲ್ಲೆಯಲ್ಲಿ ಲ್ಯಾಬ್‌ ಇಲ್ಲದಿರುವ ವಿಷಯವನ್ನು ಡಿಎಚ್‌ಒ ಡಾ. ಜನಾರ್ದನ್‌ ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಲ್ಯಾಬ್‌ ಸ್ಥಾಪಿಸಲಾಗುವುದು ಎಂದರು.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯಲ್ಲಿ 1336 ಜನ ಮೃತಪಟ್ಟಿದ್ದಾರೆ. ಅದರಲ್ಲಿ 496 ಜನರಿಗೆ ಪರಿಹಾರ ನೀಡಲಾಗಿದೆ. ಉಳಿದವರಿಗೂ ಸರ್ಕಾರದ ನಿಯಮದಂತೆ ನೀಡಲಾಗುವುದು ಎಂದು ಡಾ. ಜನಾರ್ದನ್‌ ತಿಳಿಸಿದರು.
ಜನವರಿಯೊಂದರಲ್ಲೇ ಜಿಲ್ಲೆಯಲ್ಲಿ 2400 ಮಕ್ಕಳಲ್ಲಿ ಕೋವಿಡ್ ದೃಢಪಟ್ಟಿತ್ತು. ಎಲ್ಲರೂ ಚೇತರಿಸಿಕೊಂಡಿದ್ದಾರೆ. ಬೆಡ್‍ಗಳ ಸಾಮರ್ಥ್ಯ, ಆಕ್ಸಿಜನ್ ಕೊರತೆ ಇಲ್ಲ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಮಾಣ ಶೇ 10.28ರಷ್ಟಿದೆ ಎಂದರು.

‘ರಾಗಿ ಖರೀದಿ ಕೇಂದ್ರ ಆರಂಭ’
‘ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಜರುಗಿಸಲಾಗುವುದು. ಈ ಕುರಿತು ಅನೇಕ ಜನ ರೈತರು ಕರೆ ಮಾಡಿ ತಿಳಿಸಿದ್ದಾರೆ’ ಎಂದು ಸಚಿವೆ ಶಶಿಕಲಾ ತಿಳಿಸಿದರು.

ಬೆಳೆಹಾನಿ ಸಮೀಕ್ಷೆ ಸಂದರ್ಭದಲ್ಲಿ ರೈತರಿಂದ ಯಾವುದೇ ದೂರುಗಳಿದ್ದಲ್ಲಿ ಅದಕ್ಕೆ ಸ್ಪಂದಿಸಬೇಕು. ದೂರು ಬರದಂತೆ ನೋಡಿಕೊಳ್ಳಬೇಕು. ನಗರೋತ್ಥಾನ ಯೋಜನೆಯ ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಮಾತನಾಡಿ, ಯೋಜನೆಯಿಂದ ಕೊಟ್ಟೂರಿನಲ್ಲಿ ರಸ್ತೆಗಳು ಸಾಕಷ್ಟು ಹಾಳಾಗಿವೆ. ಅಪಘಾತ ಸಂಭವಿಸಿದರೆ ಅಧಿಕಾರಿಗಳನ್ನು ಹೊಣೆಯಾಗಿಸಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೂತನ ಡಿ.ಸಿ ಕಚೇರಿಗೆ ಭೇಟಿ
ನಗರದ ಟಿಎಸ್‍ಪಿ ಆವರಣದಲ್ಲಿ ನವೀಕರಣಗೊಂಡ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಸೇರಿದಂತೆ ಇತರೆ ಕೆಲ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಪಿ. ಸಚಿವರಿಗೆ ವಿವರಿಸಿದರು.

‘ಸರ್ಕಾರಿ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಳ’
‘ಜಿಲ್ಲೆಯಲ್ಲಿ ಪ್ರತಿ ವರ್ಷ 4ರಿಂದ 5 ಸಾವಿರ ಮಕ್ಕಳು ಸರ್ಕಾರಿ ಶಾಲೆ ಸೇರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವರ್ಷ 7 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ‘ ಎಂದು ಡಿಡಿಪಿಐ ರಾಮಪ್ಪ ಸಭೆಗೆ ತಿಳಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರಾಥಮಿಕ ಶಾಲೆಗೆ 923, ಪ್ರೌಢಶಾಲೆಗೆ 795 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT