ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ: ಅಂತಿಮ ಹಂತಕ್ಕೆ ಟಿಕೆಟ್ ಕುತೂಹಲ

ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ಅಳೆದು ತೂಗಿ ಲೆಕ್ಕಾಚಾರ
Published 10 ಮಾರ್ಚ್ 2024, 5:28 IST
Last Updated 10 ಮಾರ್ಚ್ 2024, 5:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 24 ವರ್ಷದ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರ, ಈ ಬಾರಿ ಸದ್ದಿಲ್ಲದೆ ಚುನಾವಣೆಗೆ ತಯಾರಾಗುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಕುತೂಹಲ ಸೃಷ್ಟಿಸಿದೆ.

ಬಿಜೆಪಿಯಿಂದ ಹಾಲಿ ಸಂಸದ ವೈ.ದೇವೇಂದ್ರಪ್ಪ ಅವರನ್ನು ಮತ್ತೆ ಕಣಕ್ಕೆ ಇಳಿಸಲಾಗುತ್ತದೆಯೋ ಅಥವಾ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗುತ್ತದೆಯೋ ಎಂಬ ಕುತೂಹಲ ಗರಿಗೆದರಿದ್ದರೆ, ಕಾಂಗ್ರೆಸ್ ಟಿಕೆಟ್ ಗೊಂದಲ ತುಸು ಹೆಚ್ಚಿನ ಪ್ರಮಾಣದಲ್ಲೇ ಇರುವುದನ್ನು ಪಕ್ಷದ ಆಂತರಿಕ ವಲಯ ಒಪ್ಪಿಕೊಳ್ಳುತ್ತಿದೆ.

ವಿ.ಎಸ್‌.ಉಗ್ರಪ್ಪ ಮತ್ತು ವೆಂಕಟೇಶ್‌ ಪ್ರಸಾದ್‌ ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಗಬಹುದು ಎಂದು ಒಂದು ಮೂಲ ಹೇಳಿದರೆ, ಸಂಡೂರು ಶಾಸಕ ಈ ತುಕಾರಾಂ ನಿಲ್ಲಲಿ ಎಂಬ ಒತ್ತಡ ಕೇಳಿಬರುತ್ತಿದೆ ಎಂಬ ಮಾತೂ ಇದೆ.  ರೇಸ್‌ನಲ್ಲಿ ತುಕಾರಾಂ ಪುತ್ರಿ ಸೌಪರ್ಣಿಕಾ, ಹೊಸಪೇಟೆಯ ವಕೀಲ ಗುಜ್ಜಲ್‌ ನಾಗರಾಜ್‌ ಸಹ ಇದ್ದಾರೆ. ಬೇರೆ ಬೇರೆ ಕಾರಣಗಳಿಗೆ ಈ ಇಬ್ಬರಿಗೆ ಟಿಕೆಟ್ ಕೈತಪ್ಪಿ ಹೋಗಬಹುದು ಎಂದು ಮೂಲಗಳು ಹೇಳುತ್ತಿವೆ.

ಮಹಿಳೆಯರಿಗೆ ಟಿಕೆಟ್ ಸಿಗಲ್ಲ: ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆ ಬಲ್ಲ ತಜ್ಞರು ಹೇಳುವ ಪ್ರಕಾರ, ರಾಜ್ಯದಲ್ಲಿ ಈಗಾಗಲೇ ಗೀತಾ ಶಿವರಾಜ್‌ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನೂ ಮೂವರಿಗೆ ಅಂದರೆ ಕುಸುಮಾ, ಅಂಜಲಿ ನಿಂಬಾಳ್ಕರ್‌, ವೀಣಾ ಕಾಶಪ್ಪನವರ್‌ ಅವರಿಗೂ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಹೀಗಾಗಿ ಇನ್ನೊಬ್ಬ ಮಹಿಳೆಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲವೇ ಇಲ್ಲ. ಇದರಿಂದಾಗಿ ಬಳ್ಳಾರಿ ಕ್ಷೇತ್ರದಲ್ಲಿ ಸೌಪರ್ಣಿಕಾಗೆ ಟಿಕೆಟ್‌ ಸಿಗಲಾರದು, ಮೇಲಾಗಿ ಅವರು ಸಂಡೂರು ಹೊರತಾಗಿ ಇತರ ಕ್ಷೇತ್ರಗಳಲ್ಲಿ ಪರಿಚಿತರಲ್ಲ, ಶಾಸಕರ ಒಲವೂ ಅಷ್ಟಾಗಿ ಇಲ್ಲ ಎಂದು ಹೇಳಲಾಗುತ್ತಿದೆ. ಗುಜ್ಜಲ್‌ ನಾಗರಾಜ್‌ ಅವರು ವಿವಿಧ ಕಡೆಗಳಿಂದ ತಮಗೆ ಬೆಂಬಲ ಇದೆ ಎಂದು ಹೇಳಿಕೊಂಡರೂ, ಈ ಹಿಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದನ್ನು ಪಕ್ಷದ ವರಿಷ್ಠರು ಮರೆತಿಲ್ಲ. ಇದು ಅವರಿಗೆ ಟಿಕೆಟ್‌ ಸಿಗದಂತೆ ತಡೆಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಚಿವರೇ ಕಣಕ್ಕೆ ಇಳಿದರೆ ಗೆಲುವಿನ ಅವಕಾಶ ಅಧಿಕ ಎಂದು ಹೇಳಿ ಬಿ.ನಾಗೇಂದ್ರ ಅವರನ್ನೇ ಕಣಕ್ಕೆ ಇಳಿಯುವಂತೆ ಪಕ್ಷದ ವರಿಷ್ಠರು ತಾಕೀತು ಮಾಡಿದರೆ ವೆಂಕಟೇಶ್ ಪ್ರಸಾದ್ ಅವರನ್ನು ಗೆಲ್ಲಿಸಿಕೊಡುವ ಭರವಸೆಯನ್ನು ನಾಗೇಂದ್ರ ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ. ನಾಗೇಂದ್ರ ಅವರೇ ಸ್ವತಃ ಕಣಕ್ಕೆ ಇಳಿದಿದ್ದೇ ಆದರೆ ಇಡೀ ಚಿತ್ರಣವೇ ಬದಲಾಗುವುದು ನಿಶ್ಚಿತ ಎಂಬುದು ಕಾಂಗ್ರೆಸ್ ವಲಯದ ಮಾತು. ಮತ್ತೊಂದೆಡೆಯಲ್ಲಿ ವಿ.ಎಸ್.ಉಗ್ರಪ್ಪ ಅವರ ಕಾನೂನು ಜ್ಞಾನ ನೋಡಿದರೆ ರಾಷ್ಟ್ರ ಮಟ್ಟದಲ್ಲಿ ಅದು ಅಗತ್ಯವಾಗುತ್ತದೆ, ಅವರ ಆ ಗುಣಕ್ಕಾದರೂ ಪಕ್ಷ ಟಿಕೆಟ್ ನೀಡಬೇಕು ಎಂದು ಇನ್ನೊಂದು ವಲಯ ಹೇಳುತ್ತದೆ.

ಉಗ್ರಪ್ಪ ಅವರ ಬೆನ್ನಿಗೆ ಶಾಸಕರು, ಕಾರ್ಯಕರ್ತರ ಪಡೆ ಅಷ್ಟಾಗಿ ಇಲ್ಲ, ಅವರು ಯಾರನ್ನೂ ತಮ್ಮ ಹತ್ತಿರಕ್ಕೆ ಸುಲಭಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಆಕ್ಷೇಪ ಕೇಳಿಸಿರುವುದು ಸುಳ್ಳಲ್ಲ. ಪಕ್ಷ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತದೆ ಎಂದು ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.

ಬಿ.ಶ್ರೀರಾಮುಲು
ಬಿ.ಶ್ರೀರಾಮುಲು
ವೈ.ದೇವೇಂದ್ರಪ್ಪ
ವೈ.ದೇವೇಂದ್ರಪ್ಪ
ಈ. ತುಕಾರಾಂ
ಈ. ತುಕಾರಾಂ
ವೆಂಕಟೇಶ್‌ ಪ್ರಸಾದ್
ವೆಂಕಟೇಶ್‌ ಪ್ರಸಾದ್

‘ಮೋದಿಯೇ ಮುಖ’ ಎನ್ನುತ್ತಿದೆ ಬಿಜೆಪಿ ಬಳ್ಳಾರಿ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಅವರು ಗೆಲುವು ಸಾಧಿಸುತ್ತಾರೆ. ಇಲ್ಲಿ ನರೇಂದ್ರ ಮೋದಿ ಅವರೇ ಪಕ್ಷದ ಮುಖ ಅಭ್ಯರ್ಥಿಗಳು ಗೌಣ. ಹೀಗಾಗಿ ಹಾಲಿ ಸಂಸದ ದೇವೇಂದ್ರಪ್ಪ ನಿಂತರೂ ಅಷ್ಟೇ ಶ್ರೀರಾಮುಲು ನಿಂತರೂ ಅಷ್ಟೇ ನರೇಂದ್ರ ಮೋದಿ ಅವರ ವರ್ಚಸ್ಸೇ ಅವರಿಗೆ ರಕ್ಷಾ ಕವಚವಾಗಿರುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ‘ನಮ್ಮಿಂದ ವರದಿ ತರಿಸಿಕೊಂಡಿದ್ದಾರೆ. ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಯಾರಿಗೇ ಟಿಕೆಟ್ ಸಿಕ್ಕರೂ ಅವರನ್ನು ಗೆಲ್ಲಿಸುವುದಕ್ಕೆ ಕಾರ್ಯಕರ್ತರು ಸಜ್ಜಾಗಿದ್ದಾರೆ. ಬೂತ್ ಮಟ್ಟದಲ್ಲಿ ಸಂಘಟನೆ ಬಲವಾಗಿದ್ದು ಎಲ್ಲರೂ ಚುರುಕಿನಿಂದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತುಕಾರಾಂ ಮೇಲೆ ಒತ್ತಡ? ಸಂಡೂರು ಕ್ಷೇತ್ರದ ಶಾಸಕ ಈ.ತುಕಾರಾಂ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಬೇಕು ಎಂಬ ನಿಟ್ಟಿನಲ್ಲಿ ಪಕ್ಷದಿಂದ ಒತ್ತಡ ಬರುತ್ತಿದೆ. ಆದರೆ ರಾಜ್ಯ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರಿಗೆ ಲೋಕಸಭೆಗೆ ಸ್ಪರ್ಧಿಸುವುದಕ್ಕೆ ಮನಸ್ಸಿಲ್ಲ. ಹೀಗಾಗಿ ತಮ್ಮ ಪುತ್ರಿಗೆ ಅವಕಾಶ ಕೊಡಲು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT