ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಗೇಟ್‌ ಕುಸಿತ: ಟಿಎಸ್‌ಪಿ ಕಂಪನಿ ಮುಚ್ಚಿದ್ದಕ್ಕೆ ಈಗ ಪಶ್ಚಾತ್ತಾಪ

ತುಂಗಭದ್ರಾ ಅಣೆಕಟ್ಟೆಯ ಗೇಟ್ ಕೊಚ್ಚಿ ಹೋಗಿದ್ದಕ್ಕೆ ಆಘಾತ
Published 12 ಆಗಸ್ಟ್ 2024, 0:19 IST
Last Updated 12 ಆಗಸ್ಟ್ 2024, 0:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ ಸಮೀಪದಲ್ಲೇ ಈಗಿನ ಜಿಲ್ಲಾಧಿಕಾರಿ ಕಚೇರಿ ಇದ್ದ ಸ್ಥಳದಲ್ಲಿ ಎಂಟು ವರ್ಷಗಳ ಹಿಂದೆ ಇದ್ದ ಸರ್ಕಾರಿ ಸ್ವಾಮ್ಯದ ತುಂಗಭದ್ರಾ ಸ್ಟೀಲ್‌ ಪ್ರೊಡಕ್ಟ್‌ (ಟಿಎಸ್‌ಪಿ) ಮುಚ್ಚದೆ ಹೋಗಿದ್ದರೆ ಕ್ರಸ್ಟ್‌ಗೇಟ್ ದುರಂತ ಸಂಭವಿಸುತ್ತಿರಲಿಲ್ಲವೇ?’ 

ಇಂಥದ್ದೊಂದು ಅನುಮಾನ ಈಗ ಹೊಸಪೇಟೆಯಾದ್ಯಂತ ಹರಡಿದೆ.

‘ ಟಿಎಸ್‌ಪಿ 75 ವರ್ಷಗಳ ಕಾಲ ಹೊಸಪೇಟೆಯ ಹೆಸರನ್ನು ದೇಶ, ವಿದೇಶಗಳಲ್ಲಿ ಮೆರೆಸಿತ್ತು. ದಕ್ಷಿಣ ಭಾರತದ ಬಹುತೇಕ ಅಣೆಕಟ್ಟೆಗಳಿಗೆ ಕ್ರಸ್ಟ್‌ಗೇಟ್‌ಗಳು ಪೂರೈಕೆಯಾಗುತ್ತಿದ್ದುದು ಇಲ್ಲಿಂದಲೇ. ಕಂಪನಿ ಈಗಲೂ ಇದ್ದಿದ್ದರೆ ತುಂಗಭದ್ರಾ ಅಣೆಕಟ್ಟೆಯ ಎಲ್ಲ ಕ್ರಸ್ಟ್‌ಗೇಟ್‌ಗಳ ಮೇಲ್ವಿಚಾರಣೆಯನ್ನು ಕಂಪನಿಯೇ ನೋಡಿಕೊಳ್ಳುತ್ತಿತ್ತು’ ಎಂದು ಕಂಪನಿಯ ಮಾಜಿ ನೌಕರ ವೀರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಿಎಸ್‌ಪಿ ಕಂಪನಿಯುಲ್ಲಿ ಅತ್ಯಂತ ನುರಿತ ಕ್ರಸ್ಟ್‌ಗೇಟ್ ತಜ್ಞರಿದ್ದರು. ನಿರ್ವಹಣೆ ವಿಚಾರದಲ್ಲೂ ಎತ್ತಿದ ಕೈ ಆಗಿದ್ದರು. ವಿದೇಶಗಳಿಗೂ ಹೋಗಿ ಸೇವೆ ಸಲ್ಲಿಸಿ ಬಂದಿದ್ದ ಉದಾಹರಣೆ ಇದೆ. ಇಂತಹ ಕಂಪನಿ ತುಂಗಭದ್ರಾ ಅಣೆಕಟ್ಟೆಯ ಸೆರಗಲ್ಲೇ ಇದ್ದುದು ಬಹಳಷ್ಟು ಪ್ರಯೋಜನಕಾರಿಯಾಗಿತ್ತು’ ಎಂದು ಅವರು ನೆನಪು ಮಾಡಿಕೊಂಡರು.

ಗೇಟ್ ಮುರಿಯಲು ಕಾರಣ ಏನು?

‘ಸರಿಯಾಗಿ ಗೇಟ್‌ಗಳ ನಿರ್ವಹಣೆ ಮಾಡಿಲ್ಲದಿರುವುದರಿಂದಲೇ ಈ ದುರಂತ ಸಂಭವಿಸಿದೆ. ಅಧಿಕಾರಿಗಳು ಏನೇ ಸಬೂಬು ಹೇಳಿದರೂ ಸದ್ಯ ಅವರ ಹೇಳಿದ್ದನ್ನು ಕೇಳಬೇಕಷ್ಟೆ. ಕ್ರಸ್ಟ್‌ಗೇಟ್‌ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡಿದ ನಮಗೆ ಅದರ ಹುಳುಕು ಖಂಡಿತ ಅರ್ಥವಾಗುತ್ತದೆ. ಟಿಎಸ್‌ಪಿ ಕಂಪನಿಯ ನಿರ್ವಹಣೆಯಲ್ಲಿದ್ದ ಅಣೆಕಟ್ಟೆಗಳ ಗೇಟ್‌ಗಳಿಗೆ ಏನೂ ಅಪಾಯ ಆಗಿರಲಿಲ್ಲ ಎಂಬುದನ್ನು ಮರೆಯಬಾರದು’ ಎಂದು ವೀರಸ್ವಾಮಿ ಹೇಳಿದರು.

ತುಂಗಭದ್ರಾ ಕೃಷಿ ಉಪಕರಣ ಸಹಕಾರ ಸಂಘ (ಟಾಯ್ಸ್‌) ಈಗಲೂ ಹೊಸಪೇಟೆಯಲ್ಲಿ ಚಾಲ್ತಿಯಲ್ಲಿದ್ದು, ಕ್ರೇನ್‌, ಗೇಟ್‌ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ ತುಂಗಭದ್ರಾ ಮಂಡಳಿ ಈ ಸಂಘವನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

‘ತುಂಗಭದ್ರಾ ಮಂಡಳಿಗೆ ನಿಕಟವಾದ ಕೆಲವು ಕಂಪನಿಗಳು ಒಳಗಿಂದೊಳಗೆ ಪಿತೂರಿ ಮಾಡಿಕೊಂಡು ಕೆಲಸವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದರಿಂದ ಉತ್ತಮ ಕಂಪನಿಗಳು ಮುಚ್ಚಿದವು. ಕೆಟ್ಟ ಕಂಪನಿಗಳ ನಿರ್ವಹಣೆಯಿಂದ ದುರಂತ ಸಂಭವಿಸುವಂತಾಯಿತು’ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಏನು ನಡೆಯುತ್ತಿದೆ ಗೊತ್ತಿಲ್ಲ:

‘ರೈತರ ಹಿತ ಕಾಯುವುದೇ ತುಂಗಭದ್ರಾ ಮಂಡಳಿ, ಅಲ್ಲಿನ ಎಂಜಿನಿಯರ್‌ಗಳು, ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳ ಕೆಲಸವಾಗಬೇಕು. ಅಣೆಕಟ್ಟೆಯ ವಿಚಾರದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಬರಗಾಲ ಬಂದರೆ ನೀರಿಗೆ ಗೋಗರೆಯುವ ಪರಿಪಾಟಲು ನಮ್ಮದು, ಈ ಬಾರಿ ಸಮೃದ್ಧ ಮಳೆಯಾದಾಗ ಹೀಗೆ ನೀರು ಪೋಲಾಗುವುದನ್ನು ನೊಡುವ ದುರ್ಗತಿಯೂ ನಮ್ಮದೇ’ ಎಂದು ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ ಬೇಸರಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT