ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಮಳೆ: ತುಂಗಭದ್ರಾ ಜಲಾಶಯಕ್ಕೆ 4,860 ಕ್ಯೂಸೆಕ್‌ ಒಳಹರಿವು

Published 9 ನವೆಂಬರ್ 2023, 15:25 IST
Last Updated 9 ನವೆಂಬರ್ 2023, 15:25 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ಸಹಿತ ಹಲವೆಡೆ ಬುಧವಾರ ರಾತ್ರಿಯಿಡೀ ಜಿಟಿ ಜಿಟಿ ಮಳೆ ಸುರಿದಿದೆ. ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿದ ಕಾರಣ 20 ದಿನಗಳ ಬಳಿಕ ಜಲಾಶಯಕ್ಕೆ ಮತ್ತೆ ಒಳಹರಿವು ಆರಂಭವಾಗಿದೆ.

‌ತುಂಗಭದ್ರಾ ಜಲಾಶಯಕ್ಕೆ ಗುರುವಾರ 4,860 ಕ್ಯೂಸೆಕ್‌ ಒಳಹರಿವು ಬಂದಿದ್ದು, ಸದ್ಯ ಜಲಾಶಯದಲ್ಲಿ 25.87 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಾಲುವೆಗಳಿಗೆ 9,874 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 102.05 ಟಿಎಂಸಿ ಅಡಿ ನೀರು ಸಂಗ್ರಹ ಇತ್ತು.

ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಹರಿಸುವುದನ್ನು ಶುಕ್ರವಾರದಿಂದ (ನ.10) ಸ್ಥಗಿತಗೊಳಿಸಲು ನೀರಾವರಿ ಸಲಹಾ ಸಮಿತಿ ಈಗಾಗಲೇ ನಿರ್ಧರಿಸಿದೆ. ಆದರೆ ಈ ಪ್ರಸ್ತಾವಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳೆದು ನಿಂತ ಭತ್ತ ಕಟಾವು ಹಂತಕ್ಕೆ ಬರುತ್ತಿದ್ದು, ಈ ಹಂತದಲ್ಲಿ ನೀರು ಹರಿಸುವುದು ಸ್ಥಗಿತಗೊಳಿಸಬಾರದು ಎಂದು ರೈತರು ಒತ್ತಾಯಿಸಿದ್ದಾರೆ.  ಈ ಬಾರಿ ಎರಡನೇ ಬೆಳೆಗೆ ನೀರು ಹರಿಸುವ ಸಾಧ್ಯತೆ ಇಲ್ಲ ಎಂದು ಈಗಾಗಲೇ ತಿಳಿಸಲಾಗಿದ್ದು, ಹಿಂಗಾರು ಮಳೆಯತ್ತ ಎಲ್ಲರ ಗಮನ ನೆಟ್ಟಿದೆ.

‘ಹಿಂಗಾರು ಮಳೆ ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ. ಬರಗಾಲದಿಂದ ಬೆಳೆ ನಷ್ಟವಾಗಿದೆ. ಸದ್ಯ ಸುರಿಯುತ್ತಿರುವ ಮಳೆಯಿಂದ ಮೇವು ಚಿಗುರಲು ಅನುಕೂಲವಾಗಿದೆ. ಜಾನುವಾರುಗಳಿಗೆ ಇನ್ನು ಮೇವಿನ ಕೊರತೆಯಂತೂ ಆಗದು. ಮಳೆ ಅಧಿಕ ಪ್ರಮಾಣದಲ್ಲಿ ಸುರಿದರೆ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರಬಹುದು. ಇದರಿಂದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಕೊರತೆ ನಿವಾರಣೆಗೆ ದಾರಿ ಸುಗಮವಾದೀತು’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT