ಶನಿವಾರ, ಡಿಸೆಂಬರ್ 3, 2022
21 °C

ಯಾವುದೇ ಲೋಪ ಆಗದಂತೆ ಕೆಲಸ ಮಾಡುವೆ: ನೂತನ ಡಿಸಿ ಟಿ. ವೆಂಕಟೇಶ್‌ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕೆ. ಅವರು ಹೊಸ ಜಿಲ್ಲೆಗೆ ಉತ್ತಮ ಅಡಿಪಾಯ ಹಾಕಿದ್ದಾರೆ. ಅವರ ಕೆಲಸ ಮುಂದುವರೆಸಿಕೊಂಡು ಹೋಗುತ್ತೇನೆ. ಯಾವುದೇ ರೀತಿಯ ಲೋಪ ಆಗದಂತೆ ಕೆಲಸ ಮಾಡುವೆ’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಭರವಸೆ ನೀಡಿದರು.

ನ. 5ರಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬುಧವಾರ ನಗರದಲ್ಲಿ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿರುದ್ಧ್‌, ಅರುಣ್‌ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಅವರ ಜಾಗಕ್ಕೆ ನಾನು ಬಂದಿದ್ದು, ನನ್ನೆದುರು ದೊಡ್ಡ ಸವಾಲು ಇದೆ. ಯಾರಾದರೂ ಅದ್ಭುತವಾಗಿ ಕೆಲಸ ಮಾಡಿ ಹೋದರೆ ನಂತರ ಬಂದವರಿಗೆ ಅದಕ್ಕಿಂತ ಅದ್ಭುತ ಕೆಲಸ ಮಾಡಬೇಕಾದ ಸವಾಲು ಇರುತ್ತದೆ ಎಂದರು.

ನಾನು ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಯಿದ್ದಾಗ ಇಲ್ಲಿ ಕೆಲಸ ಮಾಡಿರುವೆ. ಇಲ್ಲಿನ ಭೌಗೋಳಿಕ ಪ್ರದೇಶದ ಪರಿಚಯವಿದೆ. ಆಡಳಿತದ ಶಕ್ತಿ, ದೌರ್ಬಲ್ಯಗಳೆರಡರ ಮಾಹಿತಿಯೂ ಇದೆ. ಸೂಕ್ಷ್ಮವಾಗಿ ಗಮನಿಸಿ, ಯಾವುದೇ ಲೋಪವಾಗದಂತೆ ಕೆಲಸ ಮಾಡುವೆ ಎಂದು ಹೇಳಿದರು. 

ಈ ಹಿಂದಿನ ಜಿಲ್ಲಾಧಿಕಾರಿ ಏನೇನು ಕೆಲಸ, ಯಾವ ವೇಗದಲ್ಲಿ ಮಾಡಿದ್ದರೋ ಅದಕ್ಕಿಂತಲೂ ವೇಗವಾಗಿ ಮಾಡಲಾಗುವುದು. ಹೆಚ್ಚಿನದಾಗಿ ಏನಾದರೂ ಮೌಲ್ಯವರ್ಧನೆ ಮಾಡಬಹುದಿದ್ದರೆ ಅದನ್ನೂ ಮಾಡುವೆ. ತಾತ್ಕಾಲಿಕ ಜಿಲ್ಲಾಧಿಕಾರಿ ಕಚೇರಿಯಿಂದ ಜನವರಿಯೊಳಗೆ ಕೆಲಸ ಆರಂಭಿಸಲು ಚಿಂತನೆ ನಡೆದಿದೆ. ಅನೇಕ ಇಲಾಖೆಗಳಿಗೆ ಕಚೇರಿ, ವಾಹನ, ಸಿಬ್ಬಂದಿ ಇಲ್ಲ. ಬಳ್ಳಾರಿ, ದಾವಣಗೆರೆ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ಇದೆ. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರೊಂದಿಗೆ ಮಾತನಾಡಿ ಸೌಕರ್ಯ ಕಲ್ಪಿಸಲು ಪ್ರಯತ್ನಿಸುವೆ ಎಂದರು.

ಅಖಂಡ ಬಳ್ಳಾರಿಯಿಂದ ವಿಜಯನಗರ ಜಿಲ್ಲೆ ಬೇರ್ಪಟ್ಟ ನಂತರ ನೀರಾವರಿ ಪ್ರದೇಶ ಬಳ್ಳಾರಿ ಪಾಲಾಗಿದೆ. ವಿಜಯನಗರ ಜಿಲ್ಲೆಯ ತಾಲ್ಲೂಕುಗಳಲ್ಲಿ ನೀರಾವರಿ ವ್ಯವಸ್ಥೆಯೇ ಇಲ್ಲ. ನಮ್ಮ ಜಿಲ್ಲೆಯಲ್ಲೇ ತುಂಗಭದ್ರಾ ಜಲಾಶಯವಿದ್ದರೂ ನೀರಿಲ್ಲ. ಶೋಷಿತರು, ಬಡವರು, ದುರ್ಬಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಇಎಂಆರ್‌ಸಿ, ಕೆಕೆಆರ್‌ಡಿಬಿ ಕರಡು ತಯಾರಿಸುವಾಗ ನಾನು ಅದರ ಭಾಗವಾಗಿ ಕೆಲಸ ಮಾಡಿದ್ದೆ. ಎಲ್ಲವೂ ಗೊತ್ತಿರುವುದರಿಂದ ಈ ಭಾಗದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ ಇದ್ದರು.

‘ಹಂಪಿ ಉತ್ಸವ ದಿನಾಂಕ; ಚರ್ಚಿಸಿ ನಿರ್ಧಾರ’

ಹಂಪಿ ಉತ್ಸವ ಹಾಗೂ ಹಾವೇರಿ ಸಾಹಿತ್ಯ ಸಮ್ಮೇಳನ ಒಂದೇ ದಿನ ಬಂದಿವೆ. ಜನಪ್ರತಿನಿಧಿಗಳ ಜತೆ ಚರ್ಚಿಸಿ ಅದರ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು. ‘ಸ್ವದೇಶ ದರ್ಶನ್‌’ ಯೋಜನೆಯಡಿ ಹಂಪಿ ಸೇರಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಕಳಿಸಲಾಗಿದೆ. ಒಂದುವೇಳೆ ಅದರಲ್ಲಿ ಸೇರಿಸಿದರೆ ₹100 ಕೋಟಿ ಅನುದಾನ ಸಿಗಲಿದೆ. ಮೂಲಸೌಕರ್ಯ ಕಲ್ಪಿಸಲು ನೆರವಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು