ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಳಗುಮ್ಮಟ ವ್ಯಾಪ್ತಿ ಸಂಪೂರ್ಣ ಸೀಲ್‍ಡೌನ್

ಒಂದೇ ದಿನ ಆರು ಕೋವಿಡ್‌–19 ಪಾಸಿಟಿವ್ ಪ್ರಕರಣ; ಆತಂಕ ಹೆಚ್ಚಳ
Last Updated 12 ಏಪ್ರಿಲ್ 2020, 14:10 IST
ಅಕ್ಷರ ಗಾತ್ರ

ವಿಜಯಪುರ: ಮೂವರು ಮಕ್ಕಳು ಸೇರಿದಂತೆ ಆರು ಜನರಲ್ಲಿ ಭಾನುವಾರ ಒಂದೇ ದಿನ ಕೋವಿಡ್‌ –19 ದೃಢಪಟ್ಟಿರುವುದು ನಗರ ಸೇರಿದಂತೆ ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಗೆ ಕೊರೊನಾ ಸೋಂಕು ವ್ಯಾಪಿಸದಂತೆ ತಡೆಯಲು ಜಿಲ್ಲಾಡಳಿತ ಒಂದು ತಿಂಗಳಿಂದ ಹಗಲಿರುಳು ಕೈಗೊಂಡಿದ್ದ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ಮಾರಕ ರೋಗ ಜಿಲ್ಲೆಯನ್ನು ಪ್ರವೇಶಿಸಿರುವುದು ಸಹಜವಾಗಿ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.

ಸೀಲ್‌ಡೌನ್‌: ಕೋವಿಡ್‌–19 ದೃಢಪಟ್ಟ ಚಪ್ಪರಬಂದ್‌ ಪ್ರದೇಶ ವ್ಯಾಪ್ತಿಯಲ್ಲಿರುವ ನಗರದ ಹಕೀಮ್ ಚೌಕ್, ಕಾಮತ್ ಹೋಟೆಲ್ ಮುಂಭಾಗದ ಹರಣಶಿಖಾರಿ ಓಣಿ, ಕೊಂಚಿಕೊರವರ ಓಣಿ, ಬಡಿ ಕಮಾನ್‌, ಚಪ್ಪರ್ ಬಂದ್ ಓಣಿ, ಜುಮ್ಮಾ ಮಸೀದಿಯ ಹಿಂದೆ ಇರುವ ಕೆ.ಎಚ್.ಬಿ ಕಾಲೊನಿ, ಪೈಲ್ವಾನ್ ನಗರ, ಮಹೀಬೂಬ್ ನಗರ, ಬೆಂಡಿಗೇರಿ ಓಣಿ, ಸುಭಾಸ್ ಕಾಲೊನಿ, ಶಾಂತಿನಗರ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಗುರುತಿಸಿ, ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ.

ಸೀಲ್‌ಡೌನ್‌ ಮಾಡಲಾಗಿರುವ ಪ್ರದೇಶದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ಬಫರ್ ಜೋನ್ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಘೋಷಿಸಿದ್ದಾರೆ.

ಈ ಪ್ರದೇಶದ ವ್ಯಾಪ್ತಿಯಲ್ಲಿ ಜನರು ಕಾಲ್ನಡಿಗೆ ಅಥವಾ ವಾಹನದ ಮೂಲಕ ಅಥವಾ ಇನ್ನಾವುದೇ ರೀತಿಯಿಂದ ಹೋಗುವುದು, ಬರುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.

ಕರ್ತವ್ಯನಿರತ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ನಿರ್ಬಂಧಿತ ಪ್ರದೇಶಕ್ಕೆ ಬಂದುಹೋಗಲು ಒಂದು ಮಾರ್ಗವನ್ನು ಮಾತ್ರ ನಿಗದಿಪಡಿಸಲಾಗಿದೆ. ಯಾವುದೇ ವಾಹನವು ಈ ಮಾರ್ಗದಲ್ಲಿ ತೆರಳುವ ಮುನ್ನಾ ಕಡ್ಡಾಯವಾಗಿ ಸ್ಯಾನಿಟೈಜೇಶನ್‌ಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ.

ಈ ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳು ಮುಂದಿನ ಆದೇಶದ ವರೆಗೆ ತಮ್ಮ ಮನೆಯಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಂಡಗಳನ್ನು ರಚಿಸಿ, ಈ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಕೈಗೊಂಡು, ತೀವ್ರ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಕೈಗೊಳ್ಳುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಐಇಸಿ, ಬಿಬಿಸಿ ಚಟುವಟಿಕೆ ಕೈಗೊಳ್ಳಬೇಕು. ಕಂಟೇನ್ಮೆಂಟ್ ಮತ್ತು ಬಫರ್ ಜೋನ್‍ಗಳಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡ್‌ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ನಾಲ್ಕಕ್ಕಿಂತ ಹೆಚ್ಚಿನ ಜನರು ಈ ಪ್ರದೇಶ ವ್ಯಾಪ್ತಿಯಲ್ಲಿ ಗುಂಪು ಸೇರುವುದಾಗಲಿ, ಮೆರವಣಿಗೆ, ಸಭೆ, ಧಾರ್ಮಿಕ ಉತ್ಸವ, ಮದುವೆ, ಕ್ರೀಡೆ, ಉರುಸ್‌, ಸಂತೆ, ಜಾತ್ರೆ, ಸಮ್ಮೇಳನಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಈ ಪ್ರದೇಶದ ನಿವಾಸಿಗಳು ಮನೆಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ. ಇತರರ ಮನೆಗಳಿಗೆ ಹೋಗುವಂತಿಲ್ಲ. ಎಲ್ಲ ಮನೆಗಳ ಸದಸ್ಯರು ಹೋಂಕ್ವಾರಂಟೈನ್‍ದಲ್ಲಿರಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಕಾರ್ಯಗತಗೊಳಿಸಲು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಡಿಎಸ್‌ಪಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.

ಸಾರ್ವಜನಿಕರು ಕೂಡ ಸಿಬ್ಬಂದಿಗಳೊಂದಿಗೆ ಸಹಕರಿಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವಶ್ಯಕ ಸಹಕಾರ ನೀಡಬೇಕು. ಯಾವುದೇ ರೀತಿಯ ಅನುಚಿತ ವರ್ತನೆ ಮತ್ತು ಮಾಹಿತಿ ನೀಡದೆ ಇದ್ದ ಪಕ್ಷದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಡಾ.ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ.ಧಾರವಾಡಕರ, ಡಾ. ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಉಪಸ್ಥಿತರಿದ್ದರು.

29 ವರದಿ ಬರುವುದು ಬಾಕಿ

ಜಿಲ್ಲೆಯಿಂದ ಈವರೆಗೆ ಕಳುಹಿಸಲಾದ 110 ಗಂಟಲು ದ್ರವ ಮಾದರಿಗಳ ಪೈಕಿ ಆರು ಪಾಸಿಟಿವ್ ಬಂದಿದೆ. 80 ನೆಗೆಟಿವ್ ಬಂದಿದ್ದು, 24 ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 467 ಜನರ ಮೇಲೆ ತೀವ್ರ ನಿಗಾ ಇಡಲಾಗಿದ್ದು, 258 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 138 ಜನ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 71 ಜನ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಎಂದು ಅವರು ತಿಳಿಸಿದರು.

ಸೀಲ್‌ಡೌನ್‌ ಪ್ರದೇಶದ ಜನರ ಗಮನಕ್ಕೆ

ಕೋವಿಡ್‌–19 ದೃಢಪಟ್ಟಿರುವ ಗೋಳಗುಮ್ಮಟ ಪ್ರದೇಶದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ತೊಂದರೆಯಾಗದಂತೆ ನೋಡಿಕೊಳ್ಳಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದ್ದು, ದಿನಸಿ, ತರಕಾರಿ ಹಾಗೂ ಅರ್ಹ ಬಡ ಕುಟುಂಬಗಳಿಗೆ ಪಡಿತರವನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಜಿಲ್ಲಾಡಳಿತ ಮಾಡಿದೆ.

ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಆ ಪ್ರದೇಶದ ಶುಚಿತ್ವವನ್ನು ಕಾಯ್ದುಕೊಳ್ಳಲು ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷಾ ಶೆಟ್ಟಿ (ಮೊ.ಸಂ: 9886745505) ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

ತಂಡದಲ್ಲಿ ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಎಸ್ ಸುರ್ಕಿ (ಮೊ.ಸಂ:88675 62516), ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಎಂ.ಹುಂಡೇಕಾರ (ಮೊ.ಸಂ:9845768889) ಅವರನ್ನು ನೇಮಿಸಲಾಗಿದೆ.

ಸಾರ್ವಜನಿಕರ ಅಗತ್ಯ ವಸ್ತುಗಳ ಪೂರೈಕೆಯ ಬೇಡಿಕೆ ಪಡೆಯಲು ಸಹಾಯವಾಣಿ ಕೇಂದ್ರವನ್ನು ಸಹ ಆರಂಭಿಸಲಾಗಿದೆ. ಸಹಾಯವಾಣಿ ಸಂಪರ್ಕಕ್ಕಾಗಿ ಮುಜಾವರ್ 8310425195, ಪ್ರೀತಿ ಇವನಿ 8197804052, ಪಲ್ಲವಿ 6363585604 ಅವರಿಗೆ ಅವಶ್ಯಕ ವಸ್ತುಗಳಿಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ 1077ಗೂ ಸಂಪರ್ಕಿಸಬಹುದಾಗಿದೆ.

ಈ ಪ್ರದೇಶಗಳಲ್ಲಿನ ಅಂಗಡಿ, ಮಳಿಗೆ, ದಾಸ್ತಾನು ಕೇಂದ್ರಗಳನ್ನು ಮುಚ್ಚಲು (ದಿನಸಿ, ಹಾಲು, ಹಣ್ಣು, ತರಕಾರಿ, ಔಷಧ ಅಂಗಡಿ ಹೊರತುಪಡಿಸಿ) ಕ್ರಮಕೈಗೊಳ್ಳಲಾಗಿದೆ.

ನಿಷೇಧಿತ ಪ್ರದೇಶದಲ್ಲಿ ಅಗತ್ಯ ವಸ್ತುಗಳಾದ ದಿನಸಿ, ಹಾಲು, ಹಣ್ಣು ಮತ್ತು ತರಕಾರಿಗಳನ್ನು ಪ್ರತಿದಿನ ಬೆಳಿಗ್ಗೆ 8ರಿಂದ 10ರ ವರೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.

ಸಹಾಯವಾಣಿ ಮೂಲಕ ಸಾರ್ವಜನಿಕರು ಕೋರುವ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿಸುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT