ಶುಕ್ರವಾರ, ಸೆಪ್ಟೆಂಬರ್ 17, 2021
26 °C

ವಿಜಯಪುರ: ಈರುಳ್ಳಿ- ಮೆಣಸಿನಕಾಯಿ ದರ ಇಳಿಕೆ, ಗ್ರಾಹಕರಿಗೆ ಖುಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಾರದ ಹಿಂದೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ, ಮೆಣಸಿನಕಾಯಿ ಬೆಲೆ ಇದೀಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಗ್ರಾಹಕರು ಖುಷಿ ಪಡುತ್ತಿದ್ದರೆ, ವ್ಯಾಪಾರಸ್ಥರಿಗೆ ಹೊರೆಯಾಗಿದೆ.

ಕಳೆದ ವಾರ ₹50ರಿಂದ ₹60ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಸದ್ಯ ₹20ರಿಂದ ₹25 ಹಾಗೂ ಮೆಣಸಿನಕಾಯಿ ₹50ರಿಂದ ₹20ಕ್ಕೆ ಇಳಿಕೆಯಾಗಿದೆ. ಇತರೆ ತರಕಾರಿ, ಸೊಪ್ಪು ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆವಕ ಹೆಚ್ಚಳದಿಂದ ಈರುಳ್ಳಿ, ಮೆಣಸಿನಕಾಯಿ ಧಾರಣೆ ಇಳಿಕೆ ಆಗಿದೆ ಎನ್ನಲಾಗುತ್ತಿದೆ.

‘ತರಕಾರಿ, ಸೊಪ್ಪು ಬೆಲೆ ಇಷ್ಟೇ ಇರುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಪ್ರತಿ ದಿನ ಧಾರಣೆ ಬದಲಾಗುತ್ತದೆ. ಮಾರುಕಟ್ಟೆಗೆ ಆವಕ ಹೆಚ್ಚಾದರೆ, ದಿಢೀರ್ ಬೆಲೆ ಇಳಿಕೆ ಆಗುತ್ತದೆ. ಕಳೆದ ವಾರ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ ವ್ಯಾಪಾರಸ್ಥರಿಗೆ ಹೊರೆ ಆಗಿದೆ’ ಎಂದು ಭೂತನಾಳದ ತರಕಾರಿ ವ್ಯಾಪಾರಿ ಜಯ ರಾಠೋಡ ಹೇಳಿದರು.

‘ಉದ್ದ ಮೆಣಸಿನಕಾಯಿ ಕೆ.ಜಿ.ಗೆ ₹20 ಕೆ.ಜಿ, ಡಬ್ಬು ಮೆಣಸಿನಕಾಯಿ ₹30ರಿಂದ ₹40, ಸೌತೆಕಾಯಿ ₹35ರಿಂದ ₹40, ಬೆಂಡಿಕಾಯಿ ₹40, ಟೊಮೆಟೊ ₹15ರಿಂದ ₹20, ಹೀರೇಕಾಯಿ ₹40, ಹಾಗಲಕಾಯಿ ₹40, ಬದನೆಕಾಯಿ ₹30, ಸೋರೇಕಾಯಿ ಒಂದಕ್ಕೆ ₹10, ಗೋಬಿ ಒಂದಕ್ಕೆ ₹10, ಪಾಲಕ್ ಒಂದು ಸೂಡಿಗೆ ₹10, ಇತರೆ ಸೊಪ್ಪು ಎರಡು ಸೂಡಿಗೆ ₹10 ಮಾರಾಟವಾಗುತ್ತಿದೆ’ ಅವರು ಹೇಳಿದರು.

‘ಈ ವಾರ ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಈರುಳ್ಳಿ ಕ್ವಿಂಟಲ್‌ಗೆ ₹300ರಿಂದ ₹2,500, ಮೆಣಸಿನಕಾಯಿ ₹500ರಿಂದ ₹12,00, ಟೊಮೆಟೊ ಟ್ರೇ (10 ಕೆ.ಜಿ) ಒಂದಕ್ಕೆ ₹100ರಿಂದ ₹350, ಬದನೇಕಾಯಿ ಟ್ರೇ (10 ಕೆ.ಜಿ) ₹100ರಿಂದ ₹120ಕ್ಕೆ ಮಾರಾಟ ಆಗಿದೆ. ಆವಕ ಹೆಚ್ಚಾಗಿದ್ದರಿಂದ ಖರೀದಿಸುವರ ಪ್ರಮಾಣ ಕಡಿಮೆ ಇತ್ತು. ಹೀಗಾಗಿ ಧಾರಣೆ ಕಡಿಮೆ ಆಗಿದೆ’ ಎಂದು ಎಪಿಎಂಸಿ ಹಣ್ಣು ಮತ್ತು ತರಕಾರಿ ಪೇಟೆಯ ಮೇಲ್ವಿಚಾರಕ ಸುರೇಶ ಮೊಹಿತೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

*
ಆವಕ ಹೆಚ್ಚಳವಾಗಿರುವುದರಿಂದ ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಬೆಲೆ ಕುಸಿಸಿದೆ. ಗುರುವಾರದ ನಿರೀಕ್ಷೆ ಪ್ರಮಾಣದಲ್ಲಿ ಖರೀದಿ ಸಹ ಆಗಲಿಲ್ಲ.
-ಸುರೇಶ ಮೊಹಿತೆ, ಎಪಿಎಂಸಿ ಹಣ್ಣು ಮತ್ತು ತರಕಾರಿ ಪೇಟೆ ಮೇಲ್ವಿಚಾರಕ

*
ಪ್ರಸ್ತುತ ಇರುವ ತರಕಾರಿ ಬೆಲೆ ಬಡವರು, ಮಧ್ಯಮ ವರ್ಗದ ಜನರಿಗೆ ಹೊರೆ ಆಗುವುದಿಲ್ಲ. ವ್ಯಾಪಾರಸ್ಥರಿಗೆ ರೈತರಿಗೆ ಹಾಗೂ ಗ್ರಾಹಕರಿಗೆ ತೊಂದರೆ ಆಗದಂತೆ ಧಾರಣೆ ಇದ್ದರೆ ಒಳ್ಳೆಯದು.
-ಸಂತೋಷ ಪೂಜಾರಿ, ಗ್ರಾಹಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು