ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ತಾಜಾ ತರಕಾರಿ

ಸೊಪ್ಪು, ತರಕಾರಿ ದರ ಸ್ಥಿರ; ಹಣ್ಣುಗಳ ದರ ಏರಿಕೆ
Last Updated 2 ಏಪ್ರಿಲ್ 2020, 13:26 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಸೋಂಕು ವ್ಯಾಪಿಸದಂತೆ ತಡೆಯಲು ಸಂತೆಯನ್ನು ರದ್ದುಗೊಳಿಸಿದ ಬಳಿಕ ನಗರದಲ್ಲಿ ವ್ಯಾಪಾರಿಗಳು ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಹಣ್ಣು, ತರಕಾರಿ ಮಾರಾಟದಲ್ಲಿ ನಿರತರಾಗಿದ್ದಾರೆ.

ಮಹಾನಗರ ಪಾಲಿಕೆಯಿಂದ ತರಕಾರಿ ವ್ಯಾಪಾರಸ್ಥರಿಗೆ ಪಾಸ್‌ಗಳನ್ನು ನೀಡಲಾಗಿದೆ. ಜೊತೆಗೆ ವ್ಯಾಪಾರಿಗಳಿಗೆ ಮಾರಾಟ ಪ್ರದೇಶವನ್ನು ನಿಗದಿಪಡಿಸಲಾಗಿದೆ.

ನೆತ್ತಿ ಸುಡುವ ಬಿಸಿಲಿನಲ್ಲಿ ಕೈಗಾಡಿ, ವಾಹನಗಳಲ್ಲಿ ತರಕಾರಿ ತುಂಬಿಕೊಂಡು ಬೀದಿ, ಬೀದಿಗಳನ್ನು ಸುತ್ತುತ್ತಿರುವ ವ್ಯಾಪಾರಿಗಳು ಬಿಸಿಲಿನ ತಾಪಕ್ಕೆ ಹೈರಾಣರಾಗಿದ್ದಾರೆ.

ತುಂಬಾ ಅನುಕೂಲವಾಗಿದೆ: ‘ಮೊದಲು ಸಂತೆಗೆ ಹೋಗಿ ಒಂದು ವಾರಕ್ಕೆ ಬೇಕಾಗುವಷ್ಟು ತರಕಾರಿ ಹೊತ್ತು ತರಬೇಕಾಗಿತ್ತು. ಆದರೆ, ಈಗ ಪ್ರತಿದಿನ ಮನೆಬಾಗಿಲಿಗೆ ತಾಜಾ ತರಕಾರಿ ಬರುತ್ತಿರುವುದರಿಂದ ಒಂದೆರಡು ದಿನಕ್ಕೆ ಬೇಕಾಗುವಷ್ಟು ಮಾತ್ರ ಕೊಳ್ಳಲು ಅನುಕೂಲವಾಗಿದೆ. ಬಿಸಿಲಿನಲ್ಲಿ ಸಂತೆಗೆ ಅಡ್ಡಾಡುವುದು ತಪ್ಪಿದೆ’ ಎಂದು ಜಲನಗರದ ನಿವಾಸಿ ನಿವೇದಿತಾ ದೇಸಾಯಿ ಹೇಳಿದರು.

ಕೂಲಿ ಸಿಗುತ್ತಿಲ್ಲ: ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ನವಭಾಗ್‌ನ ತರಕಾರಿ ವ್ಯಾಪಾರಿ ಅಬ್ದುಲ್‌ ಗಾಫರ್‌ ಚೌಧರಿ, ‘ಈ ಮೊದಲು ಸಂತೆಯಲ್ಲಿ ಒಂದು ಕಡೆ ಕೂತು ವ್ಯಾಪಾರ ಮಾಡುತ್ತಿದ್ದೆವು. ಗ್ರಾಹಕರು ನಮ್ಮ ಬಳಿ ಬಂದು ಕೊಳ್ಳುತ್ತಿದ್ದರು. ಆದರೆ, ಈಗ ನಾವೇ ಜನರ ಮನೆ ಬಾಗಿಲಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಡಿಮೆ ದರಕ್ಕೆ ತರಕಾರಿ ಕೇಳುತ್ತಾರೆ. ಇದರಿಂದ ನಮಗೆ ದಿನದ ಕೂಲಿಯೂ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂತೆ ರದ್ದುಗೊಳಿಸುವ ಮೊದಲು ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳಿಗೆ ಉತ್ತಮ ಬೆಲೆ ಇತ್ತು. ಆದರೆ, ರದ್ದುಗೊಳಿಸಿದ ಮೇಲೆ ಆರಂಭದಲ್ಲಿ ಸ್ವಲ್ಪ ದರ ಏರಿಕೆಯಾಯಿತು. ಈ ವಾರದಲ್ಲಿ ಬಹುತೇಕ ತರಕಾರಿಗಳ ಬೆಲೆ ಕುಸಿತವಾಗಿದೆ’ ಎಂದು ತಿಳಿಸಿದರು.

‘ಎಲ್ಲರ ಮನೆ ಬಾಗಿಲಿಗೆ ತರಕಾರಿ ತೆಗೆದುಕೊಂಡು ಹೋಗುತ್ತೇವೆ. ಯಾರಿಗೆ ಕೊರೊನಾ ಸೋಂಕು ಇದೆ ಎಂಬುದು ತಿಳಿಯುವುದಿಲ್ಲ. ಅಪಾಯಕಾರಿ ಪರಿಸ್ಥಿತಿ ನಡುವೆ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡಬೇಕಾಗಿದೆ’ ಎಂದು ಹೇಳಿದರು.

ತಾಜಾ ಹಣ್ಣು ಬರುತ್ತಿಲ್ಲ: ‘ಸೇಬು, ಚಿಕ್ಕು ಮತ್ತಿತರ ತಾಜಾ ಹಣ್ಣುಗಳು ಸದ್ಯ ಮಾರುಕಟ್ಟೆಗೆ ಬರುತ್ತಿಲ್ಲ. ಈಗಾಗಲೇ ಸಂಗ್ರಹಿಸಿಟ್ಟಿರುವ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ. ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ನಮ್ಮಲ್ಲಿರುವ ಸಂಗ್ರಹ ಖಾಲಿಯಾದರೆ ಮುಂದೆ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುವ ಸಾಧ್ಯತೆ ಇದೆ’ ಎಂದು ಹಣ್ಣಿನ ವ್ಯಾಪಾರಿ ಪರಮೇಶ ಯಾದವ ತಿಳಿಸಿದರು.

ಮಾಂಸ, ಮೀನು ದರ ಕುಸಿತ: ನಗರದಲ್ಲಿ ಮೀನು, ಕೋಳಿ, ಕುರಿ ಮಾಂಸ ಮಾರಾಟಕ್ಕೆ ಅವಕಾಶ ಇದ್ದರೂ ಕೊಳ್ಳಲು ಗ್ರಾಹಕರು ಮುಂದೆಬರುತ್ತಿಲ್ಲ. ಹೀಗಾಗಿ ದರದಲ್ಲೂ ಕುಸಿತವಾಗಿದೆ. ಅಂಗಡಿಗಳಲ್ಲಿ ಕೋಳಿ ಮೊಟ್ಟೆಗಳು ಸಿಗುತ್ತಿದ್ದು, ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.

ತರಕಾರಿ ಮತ್ತುದರ

ಈರುಳ್ಳಿ;30

ಟೊಮೆಟೊ;15

ಕ್ಯಾರೆಟ್‌;30

ಬದನೆ;20

ಹಸಿಮೆಣಸಿನಕಾಯಿ;30

ಅವರೆ ಕಾಯಿ;40

ಗಜ್ಜರಿ;50

ಸೌತೆಕಾಯಿ;50

ಹೂಕೋಸು(ಒಂದಕ್ಕೆ);30ರಿಂದ 40

ಕೋಸು(ಒಂದಕ್ಕೆ);20ರಿಂದ30

ಮೂಲಂಗಿ(ಒಂದಕ್ಕೆ);10

ಸೊರೆಕಾಯಿ(ಒಂದಕ್ಕೆ);10

ಪಾಲಕ್‌ ಸೊಪ್ಪು (1ಕಟ್ಟಿಗೆ);5

ಲಿಂಬೆಹಣ್ಣು(12ಕ್ಕೆ);10

ಮೆಂತೆಸೊಪ್ಪು(ಮೂರು ಕಟ್ಟಿಗೆ);20

ಕೊತ್ತಂಬರಿ(ಮೂರು ಕಟ್ಟಿಗೆ);20

ಸೇಬು;100

ದ್ರಾಕ್ಷಿ;60

ದಾಳಿಂಬೆ;60

ಚಿಕ್ಕು;30ರಿಂದ40

ಕಿತ್ತಲೆ(ಏಳಕ್ಕೆ) 100

ಬಾಳೆಹಣ್ಣು(ಡಜನ್‌);40ರಿಂದ 50

ಕಲ್ಲಂಗಡಿ(ಒಂದಕ್ಕೆ);40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT