ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಿಗೆ ಐತಿಹಾಸಿಕ ದಿನ: ಗೃಹಲಕ್ಷ್ಮಿ ಯೋಜನೆಗೆ ಸಚಿವ ಎಂ.ಬಿ ಪಾಟೀಲ ಚಾಲನೆ

Published 31 ಆಗಸ್ಟ್ 2023, 5:55 IST
Last Updated 31 ಆಗಸ್ಟ್ 2023, 5:55 IST
ಅಕ್ಷರ ಗಾತ್ರ

ವಿಜಯಪುರ: ಮಹಿಳೆಯರ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ದಿಟ್ಟ ಹೆಜ್ಜೆಯನ್ನಿಟ್ಟು ನುಡಿದಂತೆ ನಡೆಯುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಕಂದಗಲ್ ಹನುಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಕ್ತಿ ಯೋಜನೆಯಡಿ ಇದುವರೆಗೆ 1.17 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಅನ್ನ-ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿ ನೀಡಿದ್ದು, ಉಳಿದ 5 ಕೆ.ಜಿ ಅಕ್ಕಿಯ ಮೊತ್ತ ₹170 ಪ್ರತಿ ಸದಸ್ಯನಿಗೆ ಪಾವತಿ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಯುವನಿಧಿ ಯೋಜನೆಯು ಡಿಸೆಂಬರ್‌ನಲ್ಲಿ ಚಾಲನೆಗೊಳ್ಳಲಿದೆ ಎಂದರು.

ಗೃಹಲಕ್ಷ್ಮಿ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಪ್ರತಿ ಮನೆ ಯಜಮಾನಿ ಫಲಾನುಭವಿ ಖಾತೆಗೆ ₹2 ಸಾವಿರ ಜಮೆ ಆಗಲಿದ್ದು, ಜಿಲ್ಲೆಯಲ್ಲಿ ಫಲಾನುಭವಿ ಗುರಿ 5,20,906 ಇದ್ದು, ಪ್ರತಿ ತಿಂಗಳಿಗೆ ₹103.60 ಕೋಟಿ ಅನುದಾನ ಬೇಕಾಗುತ್ತದೆ. ಜಿಲ್ಲೆಯಲ್ಲಿ ಆಗಸ್ಟ್ 28ರ ವರೆಗೆ 4,29,783 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಶೇ 82.51 ರಷ್ಟು ಸಾಧನೆಯಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 211 ಗ್ರಾಮ ಪಂಚಾಯಿತಿ ಹಾಗೂ 15 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 47 ಸ್ಥಳವೂ ಸೇರಿದಂತೆ 258 ಕಡೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ರಂಗ ಮಂದಿರದ ಸುತ್ತ ಹಬ್ಬದ ವಾತಾವರಣ ಮನೆ ಮಾಡಿತ್ತು. ಪ್ರವೇಶ ದ್ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಚಿಹ್ನೆಯ ಸುತ್ತ ‘ನಾನೇ ಯಜಮಾನಿ-ನಾನೇ ನಾಯಕಿ’ ಎಂದು ರಂಗೋಲಿ ಗಮನ ಸೆಳೆಯಿತು.

ಮೈಸೂರು ಕಾರ್ಯಕ್ರಮದ ನೇರ ಪ್ರಸಾರ, ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. 

ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದಿನ ಸೌದಾಗರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಕೆ. ಚವ್ಹಾಣ ಉಪಸ್ಥಿತರಿದ್ದರು.

Quote - ರಾಜ್ಯ ಕಾಂಗ್ರೆಸ್‌ ಸರ್ಕಾರವು ನೂರು ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳ ಪೈಕಿ 4 ಗ್ಯಾರಂಟಿ ಈಡೇರಿಸಿ ಮಹಿಳಾ ಸಶಕ್ತಿಕರಣಕ್ಕೆ ಒತ್ತು ನೀಡಿದ್ದೇವೆ  -ಎಂ.ಬಿ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT