ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ದಿನ ಗಣೇಶೋತ್ಸವ ಆಚರಣೆ

ವಿಜಯಪುರ ಗಣೇಶ ಉತ್ಸವ ಮಹಾಮಂಡಳದ ಅಧ್ಯಕ್ಷ ಅಪ್ಪು ಪಟ್ಟಣ ಶೆಟ್ಟಿ ಹೇಳಿಕೆ
Last Updated 11 ಸೆಪ್ಟೆಂಬರ್ 2021, 13:08 IST
ಅಕ್ಷರ ಗಾತ್ರ

ವಿಜಯಪುರ:ಸಾರ್ವಜನಿಕ ಗಣೇಶೋತ್ಸವವನ್ನು ಒಂಬತ್ತು ದಿನ ಆಚರಿಸಲಾಗುವುದು ಎಂದುಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಐದು ದಿನ ಮಾತ್ರ ಅವಕಾಶ ಕಲ್ಪಿಸಿದೆ. ಆದರೆ, ಇದು ಸರಿಯಲ್ಲ. ನಗರದಲ್ಲಿ ನಾವು ಮೊದಲಿನಿಂದಲೂ ಏಳು, ಒಂಬತ್ತು ದಿನಗಳ ಕಾಲ ಗಣೇಶೋತ್ಸವ ಆಚರಿಸುತ್ತೇವೆ. ಸರ್ಕಾರ ಈ ಬಾರಿಯೂ ಅವಕಾಶ ಕಲ್ಪಿಸಬೇಕು ಎಂದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳುಈಗಾಗಲೇ ಏಳು ಮತ್ತು ಒಂಬತ್ತು ದಿನದ ವಿದ್ಯುತ್ ಶುಲ್ಕ ತುಂಬಿದ್ದೇವೆ. ಒಂಬತ್ತು ದಿನಗಳ ಆಚರಣೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಷಯದಲ್ಲಿ ಸರ್ಕಾರದ ನಿರ್ಬಂಧ, ನಿಯಮ ಉಲ್ಲಂಘನೆಯಾದಂತಾಗದು ಎಂದು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ನಿರ್ಬಂಧಕ್ಕೆ ಅನುಗುಣವಾಗಿ ಮೆರವಣಿಗೆ, ಡಿಜೆ, ಮನೋರಂಜನಾ ಕಾರ್ಯ ಕ್ರಮಗಳನ್ನು ಈ ಬಾರಿ ಆಯೋಜಿಸಿಲ್ಲ. ಬದಲು ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲಾಗಿದೆ. ವಿಶೇಷವಾಗಿ ಯುವಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

ಕೋವಿಡ್‌ ಕಾರಣಕ್ಕೆ ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದ ದಿನದಿಂದಲೇ ವಿಜಯಪುರದಲ್ಲಿ ಗಣೇಶ ಉತ್ಸವ ಮಹಾಮಂಡಳ ವಿರೋಧ ವ್ಯಕ್ತಪಡಿಸಿ, ಅವಕಾಶ ಕಲ್ಪಿಸಬೇಕೆಂದು ಹೋರಾಟ ನಡೆಸಿತು. ಸ್ವತಃ ನಾನೇ ಖುದ್ದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಪರಿಣಾಮ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ನಮ್ಮ ಸಂಘಟನೆ ಹೋರಾಟ ಕೈಗೆತ್ತಿಕೊಳ್ಳುತ್ತಿರುವಂತೆ ಕಾಂಗ್ರೆಸ್‌ ಪಕ್ಷವೂ ಸೇರಿದಂತೆ ವಿವಿಧ ಸಂಘಟನೆಗಳು, ಮುಖಂಡರು ಇದೇ ವಿಷಯವಾಗಿ ಧ್ವನಿ ಎತ್ತಿದರು. ಆದರೆ, ಕೆಲವರು ಇದರ ರಾಜಕೀಯ ಲಾಭ ಪಡೆಯಲು ಹವಣಿಸಿದರು ಎಂದು ಆರೋಪಿಸಿದರು.

ವಿಜಯಪುರ ಗಜಾನನ ಉತ್ಸವ ಮಹಾಮಂಡಳವು ಗಣೇಶೋತ್ಸವದ ಅಂಗವಾಗಿ ಪ್ರತಿ ವರ್ಷದಿಂತೆ ಈ ವರ್ಷವೂ'ನಮ್ಮ ಉತ್ಸವ ನಮ್ಮ ಗಣಪ' ಅಭಿಯಾನ ಹಮ್ಮಿಕೊಂಡಿದ್ದು, ಗಿಡ, ಮರಗಳನ್ನು ಬೆಳೆಸಲು ಆದ್ಯತೆ ನೀಡಿದೆ ಎಂದರು.

ಈಗಾಗಲೇ10 ಸಾವಿರ ಸಸಿಗಳನ್ನು ಜನರಿಗೆ ವಿತರಿಸಲಾಗಿದೆ. ಸಾವಯವ ಕೃಷಿಕರಿಗೆ ಪ್ರೋತ್ಸಾಹ, ಪೌರಕಾರ್ಮಿಕರಿಗೆ ಗೌರವ ಸಲ್ಲಿಸಲು ಆದ್ಯತೆ ನೀಡಲಾಗಿದೆ ಎಂದರು.

ಸಮಾಜಮುಖಿ ಕೆಲಸ ಮಾಡುವವರಿಗೆ ಈ ಬಾರಿ ಡಾ.ಮಹೇಂದ್ರಕರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುವುದು ಎಂದರು.

ಖಂಡನೆ:

ವಿಜಯಪುರ ಗಜಾನನ ಉತ್ಸವ ಮಹಾಮಂಡಳದ ಸದಸ್ಯ ಸತೀಶ ಪಾಟೀಲ ಮಾತನಾಡಿ, ಗಜಾನನ ಉತ್ಸವ
ಮಹಾಮಂಡಳದಿಂದ ದುಡ್ಡು ಸಂಗ್ರಹ ಮಾಡಲಾಗುತ್ತಿದೆ ಎಂಬ ಶಾಸಕ ಯತ್ನಾಳ ಆರೋಪ ಖಂಡನೀಯ ಅವರಹೇಳಿಕೆಯಿಂದ ನೋವಾಗಿದೆ ಎಂದರು.

ಮುಖಂಡರಾದ ಶಿವಾನಂದ ಮಾನಕರ, ಪ್ರಭಾಕರ ಬೋಸ್ಲೆ, ಭರತ್ ಕೋಳಿ, ವಿಜಯ ಜೋಷಿ ಇದ್ದರು.

***

ಐದನೇ ದಿನ ಮಂಗಳವಾರ ಆಗಿರುವುದರಿಂದ ಧಾರ್ಮಿಕ ವಿಧಿ,ವಿಧಾನಗಳ ಪ್ರಕಾರ ಅಂದು ವಿಸರ್ಜನೆ ಮಾಡಲಾಗುದು. ಹೀಗಾಗಿ ಒಂಬತ್ತು ದಿನ ಆಚರಿಸಲಾಗುವುದು

–ಅಪ್ಪು ಪಟ್ಟಣಶೆಟ್ಟಿ, ಅಧ್ಯಕ್ಷ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT