ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಜೋಳ ಗ್ರಾಮದ ಕೃಷಿ ಭೂಮಿ ಅಭಿವೃದ್ಧಿಗೆ ಕ್ರಮ: ಗೋವಿಂದ ಕಾರಜೋಳ

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ
Last Updated 23 ನವೆಂಬರ್ 2020, 17:01 IST
ಅಕ್ಷರ ಗಾತ್ರ

ವಿಜಯಪುರ: ಕಾರಜೋಳ ಗ್ರಾಮದ ಹೊಲಕಲ್ಲು, ತಗ್ಗು, ದಿಣ್ಣೆಯಿಂದ ಕೂಡಿರುವುದರಿಂದ ಕೃಷಿಗೆ ತೊಡಕಾಗಿದ್ದು, ಕೇಂದ್ರ ಸರ್ಕಾರದ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ ಬಾಂದಾರ, ಬದು ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಕಾರಜೋಳ ಗ್ರಾಮದಲ್ಲಿ ಸೋಮವಾರ ಬಬಲೇಶ್ವರ, ಕಾಖಂಡಕಿ, ಕಾರಜೋಳ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾರಜೋಳ ಏತನೀರಾವರಿ ವ್ಯಾಪ್ತಿಯ ವಿತರಣಾ ಜಾಲದ ಕಾಮಗಾರಿಗಳಿಗಾಗಿ ₹ 3.80 ಕೋಟಿ ಮಂಜೂರು ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ಕಾರಜೋಳ ವ್ಯಾಪ್ತಿಯ ರೈತರ ಅನುಕೂಲಕ್ಕಾಗಿ ಹೊಲಗಾಲುವೆಗಳಿಗೆ ₹ 7 ಕೋಟಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರಜೋಳ ಅತ್ಯಂತ ಕಡೆಗಣನೆಗೆ ಒಳಗಾಗಿದ್ದ ಗ್ರಾಮವಾಗಿತ್ತು. ಕಡು ಬಡವರಿಂದ ಕೂಡಿದ ಗ್ರಾಮವಾಗಿದೆ. ಈ ಹಿಂದೆ ಈ ಗ್ರಾಮದ ಜನರು ಮುಂಬೈ, ಕರಾಡ, ಸಾಂಗ್ಲಿ ಹಾಗೂ ಗೋವಾಕ್ಕೆ ದುಡಿಯಲು ಗುಳೆ ಹೋಗುವಂತಹ ಪರಿಸ್ಥಿತಿಯಿತ್ತು. ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ ಮೇಲೆ ಕಡಿಮೆಯಾಗಿದೆ ಎಂದರು.

ಬಿ.ಎಸ್‌.ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಸಮೃದ್ಧ ಮಳೆಯಾಗುತ್ತದೆ. ಈ ಬಾರಿ ಪ್ರವಾಹದಿಂದಾಗಿ ₹ 35 ಸಾವಿರ ಕೋಟಿ ನಷ್ಟವಾಗಿದೆ. ಅದರಲ್ಲೂ ರಸ್ತೆ, ಸೇತುವೆ ನೀರಾವರಿ ಕೆರೆಕಟ್ಟೆ ಮತ್ತು ಇತರೆ ಕಟ್ಟಡಗಳ ₹ 10 ಸಾವಿರ ಕೋಟಿ ಹಾನಿಯಾಗಿದೆ ಎಂದರು.

ಪ್ರವಾಹ ಮತ್ತು ಕೋವಿಡ್‌ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರಿ ನೌಕರರ ವೇತನ ಕಡಿತ ಮಾಡಿಲ್ಲ. ರೈತರ ಪ್ರತಿ ಹೆಕ್ಟೇರ್ ಬೆಳೆ ನಾಶಕ್ಕೆ ₹10 ಸಾವಿರ ಪರಿಹಾರ ಒದಗಿಸಲಾಗಿದೆ. ಮನೆ ಹಾನಿಗೆ ₹ 5 ಲಕ್ಷ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೂಡ ಬಡವರಿಗೆ ಜನಧನ ಯೋಜನೆಯಡಿ ಸೌಲಭ್ಯ ಮತ್ತು ಪ್ರತಿ ರೈತರಿಗೆ ₹ 6 ಸಾವಿರ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ₹ 4 ಸಾವಿರ ನೀಡಲಾಗುತ್ತಿದೆ. 12 ಕೋಟಿ ಜನರಿಗೆ ಉಚಿತ ಅಡುಗೆ ಅನಿಲ ನೀಡಲಾಗಿದೆ ಎಂದರು.

ಬಾಗಿನ ಅರ್ಪಣೆ:

ಕಾರಜೋಳ ಕೆರೆಗೆಉಪಮುಖ್ಯಮಂತ್ರಿ ಬಾಗಿನ ಅರ್ಪಿಸಿದರು. ಕಾರಜೋಳ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿ.ಪಂ. ಸದಸ್ಯ ನವೀನ ಅರಕೇರಿ, ಬಸವರಾಜ ದೇಸಾಯಿ, ಯು.ಎಸ್‌.ಪಾಟೀಲ,ಬಾಪುಗೌಡ ಶೇಗುಣಸಿ, ಸಂಗಮೇಶ ತಿಮ್ಮಶೆಟ್ಟಿ, ಸೋಮನಾಥ ಕಳ್ಳಿಮನಿ ಉಪಸ್ಥಿತರಿದ್ದರು.

‘ಭೂಮಿ ಬೆಲೆ ₹ 15 ಲಕ್ಷಕ್ಕೆ ಏರಿಕೆ’

ವಿಜಯಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಬಳಿಕ ಎಕರೆಗೆ ₹ 2 ಲಕ್ಷ ಇದ್ದ ಕೃಷಿ ಭೂಮಿ ಬೆಲೆ ಈಗ ₹ 15 ಲಕ್ಷ ಆಗಿದೆ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿಗೆ ತಂದರು. ಜೊತೆಗೆ ಚುನಾವಣೆಯಲ್ಲಿ ನೀಡಿದ್ದ 164 ಭರವಸೆಗಳನ್ನು ಈಡೇರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡರು ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ವಿದೇಶದಿಂದ ಕಪ್ಪುಹಣ ತಂದು ಪ್ರತಿಯೊಬ್ಬರ ಅಕೌಂಟಿಗೆ ₹ 15 ಲಕ್ಷ ಹಾಕುತ್ತೇನೆ, ಪ್ರತಿ ವರ್ಷ 10 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು. ಆದರೆ, ಉದ್ಯೋಗ ಸೃಷ್ಟಿಸುವುದು ಇರಲಿ, ಎರಡು ಕೋಟಿ ಉದ್ಯೋಗ ಕಳೆದುಹೋಯಿತು ಎಂದು ಆರೋಪಿಸಿದರು.

ಏಕಾಏಕಿ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಬಡವರು, ಕೂಲಿಕಾರ್ಮಿಕರು ಸಮಸ್ಯೆ ಅನುಭವಿಸುವಂತೆ ಮಾಡಿತು ಎಂದು ದೂರಿದರು.

‘ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ‘

ವಿಜಯಪುರ: ರೈತರು ಬೆಳೆದ ಪ್ರತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವಂತೆ ಶಾಸಕ ಶಿವಾನಂದ ಪಾಟೀಲ ಅವರು ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಒದಗಿಸಿದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ರೈತರಿಗೆ ಹೊಸ ಯೋಜನೆಗಳನ್ನು ರೂಪಿಸಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಪ್ರತಿ ಬರಗಾಲ ಸಂದರ್ಭದಲ್ಲಿ ಸಾಲಮನ್ನಾ ಮಾಡುವ ಮೂಲಕ ಹೃದಯ ವೈಶ್ಯಾಲತೆ ಮೆರೆದಿದ್ದಾರೆ ಎಂದರು.

ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT