ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ ಆಯ್ತು ‘ಆಫ್ರಿಕನ್‌ ಲೇಡಿ’ ಚಿತ್ತಾರ!

ಅಪರೂಪದ ಚಿತ್ರಕಲಾವಿದ ದೇವೇಂದ್ರ ಡಂಬಳ
Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ನಗರದ ಸೆಟಲೈಟ್‌ ಬಸ್‌ ನಿಲ್ದಾಣದ ಬಳಿ ಇರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ಕಚೇರಿ ಮತ್ತು ಡಿಪೋಗಳ ಆವರಣ (ಕಂಪೌಂಡ್‌) ಗೋಡೆ ಬಳಿ ನೈಸರ್ಗಿಕವಾಗಿ ಬೆಳೆದು ನಿಂತಿರುವ ಮರ, ಗಿಡ, ಹೂವಿನ ಬಳ್ಳಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರಿಸಿರುವ ‘ಆಫ್ರೀಕನ್ ಲೇಡಿ’ ಮತ್ತು ಹುಲಿಯ ಚಿತ್ತಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಾಕಷ್ಟು ವೈರಲ್‌ ಆಗಿವೆ.

ಹೌದು, ವಿಜಯಪುರ ನಗರದ ಕೇಂದ್ರ ಬಸ್‌ ನಿಲ್ದಾಣದ ನಿಲ್ದಾಣಾಧಿಕಾರಿ ದೇವೇಂದ್ರ ಡಂಬಳ ಅವರು ಸಾರಿಗೆ ನಿಗಮದ ಡಿಪೋ ಆವರಣ ಗೋಡೆಯ ಮೇಲೆ ಚಿತ್ರಿಸಿರುವ ಅಪರೂಪದ ಚಿತ್ರಗಳುಇದೀಗ ಗುಮ್ಮಟನಗರಿಯಪ್ರಯಾಣಿಕರನ್ನು, ಸಾರ್ವಜನಿಕರನ್ನು ಆಕರ್ಷಿಸತೊಡಗಿವೆ.

ಈ ಮಾರ್ಗವಾಗಿ ಸಂಚರಿಸುವವರುಚಿತ್ತಾಕರ್ಷಕ ‘ಆಫ್ರಿಕನ್‌ ಲೇಡಿ’ ಮತ್ತು ‘ಹುಲಿ’ಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ತಮ್ಮ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಡುತ್ತಿದ್ದಾರೆ.

ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಕಚೇರಿ ಆವರಣದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಮರ, ಗಿಡಗಳ ನಡುವೆ ಇರುವ ಆವರಣ ಗೋಡೆ ಮೇಲೆ ಚಿತ್ರಿಸಿರುವ ಹುಲಿಗಳ ಚಿತ್ತಾರವೂ ನೈಜ ಕಾಡು ಮತ್ತು ಹುಲಿಯ ದರ್ಶನ ಮಾಡಿಸುವಂತಿವೆ.

ಇಷ್ಟೇ ಅಲ್ಲ,ವಿಜಯಪುರ ಕೇಂದ್ರ ಬಸ್‌ ನಿಲ್ದಾಣದ ಆವರಣಗೋಡೆ ಮೇಲೆ ಕೋವಿಡ್‌ ಜಾಗೃತಿ ಮೂಡಿಸುವ ಚಿತ್ರಗಳು ಹಾಗೂ ಬಸ್‌ ಚಾಲಕರು ಮಧ್ಯಪಾನ ಮಾಡದೇ, ಜಾಗೃತಿಯಿಂದ ಚಾಲನೆ ಮಾಡುವಂತೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಅವರು ಬಿಡಿಸಿದ್ದು, ಸಾಮಾಜಿಕ ಸಂದೇಶ ಸಾರುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ದೇವೇಂದ್ರ ಡಂಬಳ ಅವರು, ಲಾಕ್‌ಡೌನ್‌ ಬಿಡುವಿನ ಅವಧಿಯಲ್ಲಿ ಆವರಣ ಗೋಡೆಗಳ ಮೇಲೆ ಸಾಮಾಜಿಕ ಜಾಗೃತಿ ಮೂಡಿಸುವ ವಿಶೇಷವಾದ ಚಿತ್ರ ಬಿಡಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮತ್ತು ವಿಭಾಗೀಯ ಸಾರಿಗೆ ಅಧಿಕಾರಿ ದೇವಾನಂದ ಬಿರಾದಾರ ಅವರು ನನಗೆ ತಿಳಿಸಿದರು. ಅವರ ಸೂಚನೆ ಮತ್ತು ಸಲಹೆ ಮೇರೆಗೆ ಈ ಚಿತ್ರಗಳನ್ನು ಬಿಡಿಸಿರುವೆ ಎಂದರು.

ಶಾಲಾ, ಕಾಲೇಜು ದಿನಗಳಿಂದಲೇ ನನಗೆ ಚಿತ್ರಕಲೆಯ ಮೇಲೆ ಹೆಚ್ಚು ಆಸಕ್ತಿ ಇತ್ತು. ಬಿಡುವಿನ ವೇಳೆಯಲ್ಲಿ ವಾಟರ್‌ ಪೇಟಿಂಗ್‌, ಪೆನ್ಸಿಲ್‌ ಪೇಟಿಂಗ್‌ ಮಾಡುತ್ತಿದ್ದೆ. ಇದನ್ನು ನಮ್ಮ ಹಿರಿಯ ಅಧಿಕಾರಿಗಳು ಗಮನಿಸಿದ್ದರು. ಹೀಗಾಗಿ ಅವರು ಚಿತ್ರ ಬಿಡಿಸಲು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಬಿಡಿಸಲು ಸಾಧ್ಯವಾಯಿತು ಎಂದು ಹೇಳಿದರು.

ಬಿ.ಎ., ಬಿ.ಇಡಿ ಓದಿರುವ ದೇವೇಂದ್ರ ಡಂಬಳ ಅವರಿಗೆ ಎರಡೂ ಕಿಡ್ನಿಗಳು ನಿಷ್ಕ್ರಿಯವಾಗಿದ್ದು, ಸದ್ಯ ಅವರ ತಾಯಿ ದಾನ ಮಾಡಿರುವ ಕಿಡ್ನಿಗಳನ್ನು ಅಳವಡಿಸಲಾಗಿದೆ. ಅಧಿಕಾರಿಯಾಗಿದ್ದರೂ ಸಹ ತಮ್ಮೊಳಗಿನ ಕಲಾವಿದನನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.

***

ಬಸ್‌ ನಿಲ್ದಾಣ, ಶೌಚಾಲಯ, ಆವರಣಗೋಡೆಗಳ ಮೇಲೆ ಜನರು ಗುಟ್ಕಾ ಉಗುಳಿ, ಮಲಮೂತ್ರ ವಿಸರ್ಜನೆ ಮಾಡಿ ಕೆಡಿಸುತ್ತಾರೆ. ಇಂತಹ ಚಿತ್ರಗಳನ್ನು ನೋಡಿಯಾದರೂ ಸ್ವಚ್ಛವಾಗಿಟ್ಟುಕೊಳ್ಳಲು ಕಲಿಯಬೇಕು

-ದೇವೇಂದ್ರ ಡಂಬಳ, ಚಿತ್ರ ಕಲಾವಿದ

***

ಡಂಬಳ ಅತ್ಯುತ್ತಮ ಚಿತ್ರಕಲಾವಿದರಾಗಿದ್ದು, ಲಾಕ್‌ಡೌನ್‌ ಅವಧಿಯಲ್ಲಿ ಸುಮ್ಮನೇ ಕೂರವ ಬದಲು ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳನ್ನು ಬಿಡಿಸಿದ್ದಾರೆ. ಅವರು ನಮ್ಮ ಸಂಸ್ಥೆಗೆ ಹೆಮ್ಮೆಯಾಗಿದ್ದಾರೆ

–ನಾರಾಯಣಪ್ಪ ಕುರುಬರ, ವಿಜಯಪುರ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT