ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮೇಲ | ಯುಕೆಪಿ ವಸಾಹತು: ಅಕ್ರಮ ಚಟುವಟಿಕೆಗಳ ತಾಣ

ರಮೇಶ್ ಕತ್ತಿ
Published 27 ಮೇ 2024, 4:55 IST
Last Updated 27 ಮೇ 2024, 4:55 IST
ಅಕ್ಷರ ಗಾತ್ರ

ಆಲಮೇಲ: ಪಟ್ಟಣದ ಸಿಂದಗಿ ರಸ್ತೆಯಲ್ಲಿ ಹಾಗೂ ಇಂಡಿ ರಸ್ತೆಯಲ್ಲಿ ಯುಕೆಪಿ(ಕೃಷ್ಣಾ ಮೇಲ್ದಂಡೆ ಯೋಜನೆ)ಗೆ ಸೇರಿದ ಎರಡು ವಸಾಹತುಗಳಿಗೆ ಸೇರಿದ ನೂರಾರು ಕಟ್ಟಡಗಳು ಈಗ ಪಾಳುಬಿದ್ದುಅನೈತಿಕ ಚಟುವಟಿಕೆಗಳ ತಾಣವಾಗಿ ಬಳಕೆಯಾಗುತ್ತಿದೆ.

ಐದು ವರ್ಷಗಳ ಹಿಂದೆ ಬಾಡಿಗೆ ಕಟ್ಟಿ ಇಲ್ಲಿಯ ಮನೆಗಳಲ್ಲಿ ವಾಸಿಸುತ್ತಿದ್ದ ನೂರಾರು ಕುಟುಂಬಗಳನ್ನು ಅಕ್ರಮವಾಗಿ ವಾಸವಾಗಿದ್ದಾರೆ ಎಂಬ ಕಾರಣ ನೀಡಿ ಯುಕೆಪಿಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಖಾಲಿ ಮಾಡಿಸಿದ್ದರು. ಈಗ ಅವುಗಳ ಸ್ಥಿತಿ ಅಯೋಮಯವಾಗಿದೆ.

ಬಹುತೇಕ ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರು ಇಲ್ಲಿಯ ಕಟ್ಟಡಗಳಲ್ಲಿ ವಾಸವಾಗಿದ್ದು ಪ್ರತಿ ತಿಂಗಳು ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದರು. ಅವರಿಂದಾಗಿ ವಿಶಾಲ ವ್ಯಾಪ್ತಿಯ ಈ ಪ್ರದೇಶ ಸದಾ ಚಟುವಟಿಕೆಗಳಿಂದ ಇರುತ್ತಿತ್ತು. ಕೇವಲ ಹತ್ತಾರು ಸಂಖ್ಯೆಯಲ್ಲಿರುವ ಯುಕೆಪಿ ನೌಕರರು ಬಾಡಿಗೆ ಪಾವತಿಸುತ್ತಿದ್ದು ಬೇರೆ ಇಲಾಖೆಯ ಜನರೊಂದಿಗೆ ಆತ್ಮೀಯವಾಗಿದ್ದುಕೊಂಡು ಹಬ್ಬ ಉತ್ಸವಗಳನ್ನು ಮಾಡುತ್ತ ಯುಕೆಪಿ ಕ್ಯಾಂಪ್‌ ಹೆಸರುವಾಸಿಯಾಗಿತ್ತು. ಈಗ ಬಣಬಣವಾಗಿ ಇಲ್ಲಿ ಜನರ ಸುಳಿವಿಲ್ಲ. ರಾತ್ರಿಯಾದರೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತದೆ.

ಬಾಡಿಗೆದಾರರನ್ನು ಒಕ್ಕಲೆಬ್ಬಿಸಿದ ಬಳಿಕ ದುರ್ಗಮ ಕಾಡಿನಂತೆ ಭಾಸವಾಗುತ್ತಿರುವ ಈ ವಸಾಹತು ಅನೈತಿಕ ಚಟುವಟಿಕೆಗಳ ತಾಣವಾಗಲು ಆಸ್ಪದ ನೀಡಿದಂತಾಗಿದೆ. ರಸ್ತೆಯು ಮುಳ್ಳಿಕಂಟಿಗಳಿಂದ ಆವೃತವಾಗಿದೆ. ಬಾಡಿಗೆದಾರರು ನಿತ್ಯ ಸ್ವಚ್ಛವಾಗಿಡುತ್ತಿದ್ದ ಇಲ್ಲಿಯ ರಸ್ತೆಗಳು ದುರ್ಗಮ ಕಾಡಿನ ಹಾದಿಯಂತಾಗಿವೆ. ರಾತ್ರೋರಾತ್ರಿ ಇಲ್ಲಿಯ ಖಾಲಿ ಮನೆಗಳ ಬಾಗಿಲು–ಕಿಟಕಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕೆಲವು ಮನೆಗಳ ಪರ್ಸಿಗಳನ್ನು, ತಾರಸಿಯ ಹಂಚುಗಳನ್ನು ಕಿತ್ತಿದ್ದಾರೆ. ಸುಸ್ಥಿತಿಯಲ್ಲಿದ್ದ ಈ ಮನೆಗಳು ಇಂದು ಸ್ಮಶಾನಮೌನದಿಂದ ತುಂಬಿವೆ ಎಂದು ಸಾಹಿತಿ ಸಿದ್ಧರಾಮ ಉಪ್ಪಿನ ಬೇಸರ ವ್ಯಕ್ತ ಪಡಿಸಿದರು.

ಈ ಹಾಳು ಕೊಂಪೆಯನ್ನು ಸರ್ಕಾರ ಒಳ್ಳೆಯ ಉದ್ದೇಶಕ್ಕೆ ಬಳಿಸಿಕೊಂಡು ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಿದೆ.

ತಾಲ್ಲೂಕು ಸೌಧ ನಿರ್ಮಾಣಕ್ಕೆ: ಸಿಂದಗಿ ರಸ್ತೆಯಲ್ಲಿನ ಯುಕೆಪಿ ಕ್ಯಾಂಪ್‌ನ ಖಾಲಿ ಜಾಗವನ್ನು (ಈಗಿರುವ ಕಟ್ಟಡಗಳ ಹಿಂದಿನ ಜಾಗ) ಆಲಮೇಲ ತಾಲ್ಲೂಕು ಆಡಳಿತದ ಮುಖ್ಯ ಕಚೇರಿಯನ್ನಾಗಿ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡ ಆರಂಭವಾದರೆ ಮುಂದಿನ ಎಲ್ಲ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಕೆಡವಿ ಭವ್ಯವಾದ ತಹಶೀಲ್ದಾರ್‌ ಕಚೇರಿ ಇಲ್ಲಿ ಮೇಲೇಳಲಿದೆ. ಇದಕ್ಕೆ ಹೊಂದಿಕೊಂಡಂತೆ ತಾಲ್ಲೂಕು ಕ್ರೀಡಾಂಗಣ ಮತ್ತು ಇನ್ನಿತರ ತಾಲ್ಲೂಕು ಕಚೇರಿಗಳಿಗೆ ಕಟ್ಟಡ ನಿರ್ಮಸಿಕೊಡಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಯುಕೆಪಿಯ ಈ ನಿವೇಶವನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ಪಡೆದುಕೊಳ್ಳಲಿದೆ.

ಮತ್ತೆ ಬಾಡಿಗೆಗೆ ಕೊಡಲಿ: ಖಾಲಿಯಿರುವ ನೂರಕ್ಕೂ ಹೆಚ್ಚು ಕಟ್ಟಡಗಳು ಈಗ ದುಸ್ಥಿತಿಯಲ್ಲಿದ್ದು, ಅವುಗಳನ್ನು ಸರಿಮಾಡಿಸಿ ಬಾಡಿಗೆ ರೂಪದಲ್ಲಿ ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರಿಗೆ ನೀಡಿದರೆ ಆ ಕಟ್ಟಡಗಳು ಸುಸ್ಥಿರವಾಗಿ ಇರಲಿವೆ ಎಂಬುದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.

ಖಾಲಿಬಿದ್ದು ದೂಳು ಹಿಡಿಯುತ್ತಿರುವ ಯುಕೆಪಿ ಮನೆಗಳನ್ನು ಬಾಡಿಗೆರೂಪದಲ್ಲಿ ನೀಡುವುದರಿಂದ ನಿಗಮಕ್ಕೂ ಆದಾಯವಾಗುತ್ತಿತ್ತು. ಪ್ರದೇಶವೂ ಸ್ವಚ್ಛವಾಗಿರುತ್ತಿತ್ತು
ಸಿದ್ಧರಾಮ ಉಪ್ಪಿನ ಸಾಹಿತಿ
ಏಕಾಏಕಿ ಮನೆ ಖಾಲಿ ಮಾಡಿಸಿದ್ದರಿಂದ ನಮಗೆ ಬಹಳ ತೊಂದರೆಯಾಯಿತು. ಸಣ್ಣ ಪಟ್ಟಣದಲ್ಲಿ ನೂರಾರು ಬಾಡಿಗೆ ಮನೆಗಳು ಸಿಗುವುದು ಕಷ್ಟವಾಗಿ ಬಹಳ ಅನನುಕೂಲವಾಯಿತು. ಮತ್ತೆ ಬಾಡಿಗೆ ಕೊಡುವುದಾದರೆ ಒಳ್ಳೆಯದು
ಭಾಗಣ್ಣ ಗುರುಕಾರ ಕಾರ್ಯದರ್ಶಿ ಕೃಷಿ ಪತ್ತಿನ ಸಹಕಾರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT