ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಅಖಿಲ ಭಾರತ ಪ್ರತಿರೋಧ ದಿನ ನಾಳೆ

ರೈತ ವಿರೋಧಿ ಕಾಯ್ದೆಗಳ ವಿರುದ್ಧ ಆರ್‌ಕೆಎಸ್‌ ಹೋರಾಟ
Last Updated 12 ಅಕ್ಟೋಬರ್ 2020, 14:00 IST
ಅಕ್ಷರ ಗಾತ್ರ

ವಿಜಯಪುರ: ರೈತ ವಿರೋಧಿ ಕಾಯ್ದೆಗಳ ವಿರುದ್ಧ ಅ.14ರಂದು ನಡೆಯಲಿರುವ ಅಖಿಲ ಭಾರತ ಪ್ರತಿರೋಧ ದಿನವನ್ನು ಯಶಸ್ವಿಗೊಳಿಸುವಂತೆ ಜಿಲ್ಲೆಯ ಎಲ್ಲ ರೈತರಿಗೆ ಹಾಗೂ ಕೃಷಿಕಾರ್ಮಿಕರಿಗೆ ರೈತ-ಕೃಷಿಕಾರ್ಮಿಕರ ಸಂಘಟನೆ(ಆರ್‌ಕೆಎಸ್)‌ ರಾಜ್ಯ ಉಪಾಧ್ಯಕ್ಷ ಬಿ.ಭಗವಾನ್ ರೆಡ್ಡಿ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ರೈತರ ವಿರುದ್ಧವಾಗಿ ಮೂರು ಕರಾಳ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯು ರೈತ ವಿರೋಧಿಯಾಗಿದೆ. ವ್ಯಾಪಾರ ಕಂಪನಿಗಳು ಈ ಅಗತ್ಯ ವಸ್ತುಗಳನ್ನು ರೈತರಿಂದ ಅಗ್ಗದ ಬೆಲೆಗೆ ಖರೀದಿಸಿ, ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಕೃತಕ ಅಭಾವವನ್ನು ಸೃಷ್ಠಿಸುವ ಮೂಲಕ ಅತಿ ದುಬಾರಿ ಬೆಲೆಗೆ ಮಾರಿ ಹೆಚ್ಚು ಲಾಭವನ್ನು ಗಳಿಸುತ್ತಾರೆ. ಇದರಿಂದಾಗಿ ರೈತರೊಂದಿಗೆ ಗ್ರಾಹಕರು ಗರಿಷ್ಠ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯು ಸರ್ಕಾರಿ ಕೃಷಿ ಮಾರುಕಟ್ಟೆ ಸಮಿತಿಗಳನ್ನು(ಎಪಿಎಂಸಿ) ನಾಶ ಮಾಡುತ್ತದೆ. ಉದ್ಯಮಿಗಳಿಗೆ ಖಾಸಗಿ ಕೃಷಿ ಮಾರುಕಟ್ಟೆ ಸಮಿತಿಗಳನ್ನು ತೆರೆಯಲು ಅವಕಾಶ ನೀಡುತ್ತದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯವು ಇಲ್ಲದಂತಾಗುತ್ತದೆ ಎಂದು ಹೇಳಿದರು.

ಗುತ್ತಿಗೆ ಕೃಷಿಯ ಹೆಸರಿನಲ್ಲಿ ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ಬಾಳು ಜೇವೂರ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ರೈತ ವಿರೋಧಿ ಎಪಿಎಂಸಿ ಕಾಯ್ದೆ ಅನುರ್ಜಿತಗೊಳಿಸಲು ಕಾನೂನು ಮಾಡುತ್ತಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ, ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದೆ ಮತ್ತು ಬೀಜ ಕಾಯ್ದೆಯನ್ನು ತರುತ್ತಿದೆ ಎಂದು ಹೇಳಿದರು.

ಈ ಎಲ್ಲ ಕಾಯ್ದೆಗಳ ಜಾರಿಯಿಂದ ರೈತರು ಸಂಪೂರ್ಣವಾಗಿ ದಿವಾಳಿಯಾಗುತ್ತಾರೆ. ತಮ್ಮ ಮನೆ, ಮಠ, ಸಾಗುವಳಿ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಹೊಲ ಗದ್ದೆಗಳನ್ನು ಕಳೆದುಕೊಂಡು ತಮ್ಮ ಹೊಲಗದ್ದೆಗಳಲ್ಲಿ ತಾವೇ ಕೂಲಿಯವರಾಗಿ ಬದುಕಬೇಕಾಗುತ್ತದೆ ಎಂದು ಹೇಳಿದರು.

ರೈತ ವಿರೋಧಿ, ಜನದ್ರೋಹಿ ಕಾನೂನುಗಳನ್ನು ಕೈಬಿಡುವಂತೆ ಆಗ್ರಹಿಸಿ ಎಐಕೆಎಸ್‍ಸಿಸಿಯು ನವೆಂಬರ್ 26ರಂದು ದೆಹಲಿಯ ಜಂತರ್‌–ಮಂತರ್‌ ಮುತ್ತಿಗೆ ಹಾಕಲು ದೇಶದ ಎಲ್ಲ ರೈತರಿಗೆ, ಕೃಷಿಕಾರ್ಮಿಕರಿಗೆ ಕರೆ ನೀಡಿದೆ. ಜಿಲ್ಲೆಯ ರೈತರು, ಕೃಷಿಕಾರ್ಮಿಕರು ದೆಹಲಿಗೆ ಹೊರಡಲು ಸಜ್ಜಾಗಬೇಕು ಎಂದು ಹೇಳಿದರು.

ಸದಸ್ಯರಾದ ತಿಪರಾಯ ಹತ್ತರಕಿ, ಪ್ರಕಾಶ್ ಕಿಲಾರೆ, ವಿಶ್ವನಾಥ ನರಳೆ, ಮಾದಪ್ಪ ಕಠಾರೆ, ಬೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT