ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ಪಶುಪಾಲನಾ ಇಲಾಖೆಯ ಕಾರ್ಯವೈಖರಿ... ಸಿಗದ ಸ್ಪಂದನೆ; ಪಶುಪಾಲಕರ ಆಕ್ರೋಶ

ಜಿ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾದರೂ ಬದಲಾಗಲಿಲ್ಲ
Last Updated 9 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ವಿಜಯಪುರ:ಹೈನೋದ್ಯಮ ಜಿಲ್ಲೆಯಲ್ಲಿ ವಿಫುಲ ಬೆಳವಣಿಗೆ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ಡೇರಿ ಉದ್ಯಮವೂ ಪ್ರಗತಿ ಪಥದಲ್ಲಿದೆ. ಗ್ರಾಮೀಣರ ಆರ್ಥಿಕ ಸ್ವಾವಲಂಬನೆ, ಪ್ರಗತಿಯೂ ಆಶಾದಾಯಕವಾಗಿದೆ.

ಮಳೆಯ ಅಭಾವ, ಬರದ ತೀವ್ರತೆಯಲ್ಲೂ ಹೈನುಗಾರಿಕೆಗೆ ಮುಂದಾಗುತ್ತಿರುವ ಯುವಕರು, ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಜಯಪುರ–ಬಾಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವೂ ಈ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತು ಅಗತ್ಯ ಸಹಕಾರ ಒದಗಿಸುತ್ತಿದೆ.

ಆದರೆ ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಜವಾಬ್ದಾರಿ ನಿಭಾಯಿಸುವ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಜಿಲ್ಲೆಯ ಬಹುತೇಕ ಕಡೆ ಪಶುಪಾಲಕರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ.

‘ಪಶುಪಾಲನಾ ಇಲಾಖೆಯ ಸರಣಿ ವೈಫಲ್ಯ, ಪಶುಪಾಲಕರಿಗೆ ಸ್ಪಂದಿಸದಿರುವುದು, ಪಶುಚಿಕಿತ್ಸಾಲಯಗಳಲ್ಲಿ ಔಷಧಿಯನ್ನೇ ನೀಡದಿರುವುದು. ಅಗತ್ಯ ಮೂಲ ಸೌಕರ್ಯಗಳ ಕೊರತೆ, ಸಿಬ್ಬಂದಿ ಕೊರತೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತಂತೆ ಸೆ.19ರಂದು ನಡೆದ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದರೂ; ಇಲಾಖೆಯ ಕಾರ್ಯವೈಖರಿ ಕಿಂಚಿತ್‌ ಬದಲಾಗಿಲ್ಲ’ ಎಂಬ ದೂರು ಪಶುಪಾಲಕರದ್ದಾಗಿದೆ.

‘ಜಿ.ಪಂ. ಸಾಮಾನ್ಯ ಸಭೆಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಮಹತ್ತರ ವಿಷಯಗಳನ್ನು ಚರ್ಚಿಸಿದರೂ; ಇದೂವರೆಗೂ ಯಾವೊಂದು ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ನಮ್ಮೂರ ಪಶು ಚಿಕಿತ್ಸಾಲಯಗಳಲ್ಲಿ ಸಕಾಲಕ್ಕೆ ವೈದ್ಯರು ಲಭ್ಯವಿಲ್ಲದೆ ಸಹಸ್ರ, ಸಹಸ್ರ ಮೌಲ್ಯದ ಜಾನುವಾರು ಮೃತಪಡುತ್ತಿರುವುದು ನಿಂತಿಲ್ಲ. ನಮ್‌ ಸಮಸ್ಯೆ ಯಾರಿಗೆ ಹೇಳಿಕೊಳ್ಳಬೇಕು ಎಂಬುದೇ ಅರಿಯದಾಗಿದೆ’ ಎಂದು ಸಿಂದಗಿ ತಾಲ್ಲೂಕಿನ ಬಮ್ಮನಜೋಗಿಯ ಪಶುಪಾಲಕ ವಿಠ್ಠಲ ರೇ.ಯಂಕಂಚಿ ‘ಪ್ರಜಾವಾಣಿ’ಗೆ ದೂರಿದರು.

ಚಿಕಿತ್ಸೆಯೇ ಸಿಗ್ತಿಲ್ಲ

‘ನಮ್ಮೂರಿನಿಂದ 3 ಕಿ.ಮೀ. ದೂರವಿರುವ ಕನ್ನೊಳ್ಳಿಯಲ್ಲಿ ಪಶುಚಿಕಿತ್ಸಾಲಯವಿದೆ. ಜಾನುವಾರುಗಳಲ್ಲಿ ಅನಾರೋಗ್ಯ ಉಲ್ಭಣಿಸಿದಾಗ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೊಡೆದುಕೊಂಡು ಹೋಗ್ತೀವಿ. ಆದ್ರೆ ಅಲ್ಲಿ ವೈದ್ಯರೇ ಇರಲ್ಲ. ಅಪರೂಪಕ್ಕೊಮ್ಮೆ ಇದ್ದರೂ ಹೊರಗಿನಿಂದ ಔಷಧಿ ತಂದು ಕೊಡಿ ಎಂದು ಚೀಟಿ ಬರೆದುಕೊಡ್ತಾರೆ’ ಎಂದು ಬಮ್ಮನಜೋಗಿಯ ವಿಠ್ಠಲ ಅಸಮಾಧಾನ ವ್ಯಕ್ತಪಡಿಸಿದರು.

‘ಕನ್ನೊಳ್ಳಿಯ ಚನ್ನಮಲ್ಲಪ್ಪ ಶಿವಣಗಿ ಎಂಬುವರು ಸೆಪ್ಟೆಂಬರ್ ಅಂತ್ಯದಲ್ಲಿ ₹ 50000 ಕೊಟ್ಟು ಎಮ್ಮೆಯೊಂದನ್ನು ಖರೀದಿಸಿದ್ದರು. ಅ.4ರಂದು ಈ ಎಮ್ಮೆ ಅನಾರೋಗ್ಯಕ್ಕೀಡಾಯಿತು. ಸಕಾಲಕ್ಕೆ ಊರಲ್ಲಿನ ಪಶು ಆಸ್ಪತ್ರೆಯಲ್ಲೇ ಚಿಕಿತ್ಸೆ ಸಿಗದಿದ್ದರಿಂದ ಮೃತಪಟ್ಟಿತು. ಈ ಹಿಂದೆ ಬಮ್ಮನಜೋಗಿಯ ಶರಣಗೌಡ ಬಸವಂತಪ್ಪ ಬಿರಾದಾರ ಎಂಬುವವರ ಎಮ್ಮೆ ಸಹ ಸಕಾಲಕ್ಕೆ ಚಿಕಿತ್ಸೆ ದೊರಕದೆ ಅನಾರೋಗ್ಯದಿಂದ ಮೃತಪಟ್ಟಿತ್ತು.

ಆಗಿನಿಂದ ನಾವು ಪಶುಚಿಕಿತ್ಸಾಲಯದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡಿದ್ದೇವೆ. ಖಾಸಗಿ ಪಶುವೈದ್ಯರ ಮೊರೆ ಹೊಕ್ಕಿದ್ದೇವೆ. ಅವರು ಒಮ್ಮೆ ತಪಾಸಣೆ ನಡೆಸಿದರೆ ₹ 200, ₹ 300 ಶುಲ್ಕ ಪಡೆಯುತ್ತಾರೆ. ಹೊರೆಯಾದರೂ ಚಿಂತೆಯಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗಲಿದೆ ಎಂಬ ಕಾರಣಕ್ಕೆ ಅವರನ್ನೇ ಕರೆಸಿ ಚಿಕಿತ್ಸೆ ಕೊಡಿಸುತ್ತಿರುವೆ’ ಎಂದು 10 ಎಮ್ಮೆ, ಎರಡು ಎತ್ತು, ಒಂದು ಆಕಳು, ಒಂದು ಕರು, ನಾಲ್ಕೈದು ಕುರಿ ಸಾಕುತ್ತಿರುವ ವಿಠ್ಠಲ ತಿಳಿಸಿದರು.

ಸಿಬ್ಬಂದಿ ಕೊರತೆ

ಜಿಲ್ಲೆಗೆ ಒಟ್ಟು 573 ಹುದ್ದೆಗಳು ಮಂಜೂರಾಗಿದ್ದು, 377 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 196 ಹುದ್ದೆಗಳು ಖಾಲಿಯಿವೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಗೂಳಪ್ಪಗೋಳ ತಿಳಿಸಿದರು.

ಒಬ್ಬ ಉಪ ನಿರ್ದೇಶಕರ ಹುದ್ದೆ, ನಾಲ್ವರು ಸಹಾಯಕ ನಿರ್ದೇಶಕರು, 20 ಪಶು ವೈದ್ಯಾಧಿಕಾರಿಗಳು, ಏಳು ಜಾನುವಾರು ಅಭಿವೃದ್ಧಿ ಅಧಿಕಾರಿ, ಪ್ರಯೋಗಾಲಯ ತಂತ್ರಜ್ಞ–1, ಏಳು ಪಶು ವೈದ್ಯಕೀಯ ಪರಿವೀಕ್ಷಕರು, ನಾಲ್ವರು ಪಶು ವೈದ್ಯಕೀಯ ಪರಿವೀಕ್ಷಕರು, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ತಲಾ ಒಬ್ಬರು, ಐವರು ವಾಹನ ಚಾಲಕರು ಸೇರಿದಂತೆ 145 ಅಟೆಂಡರ್ ಹುದ್ದೆಗಳು ಖಾಲಿಯಿವೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಿಜಯಪುರ ಜಿಲ್ಲೆಯ ಪಶುಪಾಲನೆ ಚಿತ್ರಣ (2012ರ ಜಾನುವಾರು ಗಣತಿಯಂತೆ)

2,53,025 ದನಕರುಗಳು

1,56,860 ಎಮ್ಮೆಗಳು

3,09,278 ಕುರಿಗಳು

3,67,563 ಮೇಕೆಗಳು

22,672 ಹಂದಿಗಳು

45305 ನಾಯಿಗಳು

2008 ಇತರೆ ಪ್ರಾಣಿಗಳು

11,56,711 ಒಟ್ಟು ಜಾನುವಾರು

3,00,018 ಕೋಳಿಗಳು

ಪಶುವೈದ್ಯ ಆಸ್ಪತ್ರೆಗಳ ಮಾಹಿತಿ (2017ರ ಮಾಹಿತಿಯಂತೆ)

16 ಪಶು ಆಸ್ಪತ್ರೆಗಳು

66 ಪಶು ಚಿಕಿತ್ಸಾಲಯಗಳು

54 ಪ್ರಾಥಮಿಕ ಪಶು ವೈದ್ಯ ಕೇಂದ್ರಗಳು

5 ಸಂಚಾರಿ ಚಿಕಿತ್ಸಾಲಯಗಳು

141 ಒಟ್ಟು ಚಿಕಿತ್ಸಾ ಕೇಂದ್ರಗಳು

ಆಧಾರ: ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT