ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಮಿಶ್ರ ಕೃಷಿಯಲ್ಲಿ ಹೆಚ್ಚಿನ ಆದಾಯ

ಅಲಿಯಾಬಾದ್‌ ತಾಂಡಾದ ಪ್ರಗತಿಪರ ಕೃಷಿಕ ಬಿ.ಬಿ. ಲಮಾಣಿ ಯಶೋಗಾಥೆ
Published 2 ಫೆಬ್ರುವರಿ 2024, 5:21 IST
Last Updated 2 ಫೆಬ್ರುವರಿ 2024, 5:21 IST
ಅಕ್ಷರ ಗಾತ್ರ

ವಿಜಯಪುರ: ಅಲಿಯಾಬಾದ್‌ ಎಲ್‌.ಟಿ.ನಂ.2ರಲ್ಲಿರುವ ತಮ್ಮ 14 ಎಕರೆ ಕೃಷಿ ಭೂಮಿಯಲ್ಲಿ ದ್ರಾಕ್ಷಿ, ಹಸಿ ಮೆಣಸಿನಕಾಯಿ, ಟೊಮೆಟೊ, ಗೋಧಿ, ಗೋವಿನ ಜೋಳ, ವಿವಿಧ ತರಕಾರಿ ಸೇರಿದಂತೆ ಮಿಶ್ರ ಕೃಷಿ ಚಟುವಟಿಕೆ ಮೂಲಕ ವಾರ್ಷಿಕ ₹50 ಲಕ್ಷಕ್ಕೂ ಅಧಿಕ ಆದಾಯ ಸಂಪಾದಿಸುತ್ತಿದ್ದಾರೆ ಪ್ರಗತಿಪರ ರೈತ ಬಿ.ಬಿ.ಲಮಾಣಿ.

‘2005ಕ್ಕಿಂತ ಮೊದಲು ಅಲಿಯಾಬಾದ್‌ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೂ ಜನ ಸುಳಿಯುತ್ತಿರಲಿಲ್ಲ. ಅಷ್ಟೊಂದು ಪಾಳು ಬಿದ್ದ ಬಂಜರು ಭೂಮಿ. ಜಮೀನು ಕೊಳ್ಳಲು ಯಾರೂ ಬರುತ್ತಿರಲಲ್ಲಿ. ಇಂತಹ ಸಂದರ್ಭದಲ್ಲಿ ನಾನು ಎಕರೆಗೆ ₹1.33 ಲಕ್ಷದಂತೆ ಹಣ ನೀಡಿ 14 ಎಕರೆ ಭೂಮಿ ಖರೀದಿಸಿ, ಹೊಲವನ್ನು ಸ್ವಚ್ಛ ಮಾಡಿ, ನೆಲವನ್ನು ಸಮತಟ್ಟು ಮಾಡಿ ಕೊಳವೆಬಾವಿ ಕೊರೆಯಿಸಿ, ಕೃಷಿ ಹೊಂಡ ಮಾಡಿ ಕೃಷಿಯಲ್ಲಿ ತೊಡಗಿರುವೆ. ಸಮೀಪದಲ್ಲೇ ಕೈಗಾರಿಕಾ ಪ್ರದೇಶ ಇರುವುದರಿಂದ ಇಂದು ಇದೇ ಭೂಮಿಗೆ ಎಕರೆಗೆ ₹70 ರಿಂದ ₹80 ಲಕ್ಷ ಬೆಲೆ ಬಂದಿದೆ’ ಎನ್ನುತ್ತಾರೆ ಬಿ.ಬಿ.ಲಮಾಣಿ.

ಈ ವರ್ಷ ನಾಲ್ಕು ಎಕರೆಯಲ್ಲಿ ಬೆಳೆದಿರುವ ಟೊಮೆಟೊದಿಂದ ₹ 25 ಲಕ್ಷ, ಐದು ಎಕರೆಯಲ್ಲಿ ಬೆಳೆದಿರುವ ದ್ರಾಕ್ಷಿಯಲ್ಲಿ ₹ 25 ಲಕ್ಷ, ಮೂರು ಎಕರೆಯಲ್ಲಿ ಬೆಳೆದಿರುವ ಮೆಣಸಿನಕಾಯಿಯಿಂದ ₹2 ರಿಂದ ₹3 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಅವರು.

ಹೋದ ವರ್ಷ ಮೂರು ಎಕರೆಯಲ್ಲಿ ಟೊಮೆಟೊ ಬೆಳೆದು ₹ 70 ಲಕ್ಷ ಆದಾಯ ಪಡೆದುಕೊಂಡಿದ್ದೇನೆ. ಈ ವರ್ಷವೂ ಅದೇ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಅವರು ಖುಷಿ ವ್ಯಕ್ತಪಡಿಸಿದರು.

ದ್ರಾಕ್ಷಿಯನ್ನು ಒಣಗಿಸಿ ಮನೂಕ ಮಾಡುತ್ತೇನೆ. ಬಹುತೇಕ ಒಣ ದ್ರಾಕ್ಷಿಯನ್ನು ಸಾಂಗ್ಲಿ, ತಾಸ್‌ಗಾಂವ್‌ ಮಾರುಕಟ್ಟೆಗೆ ಕಳುಹಿಸುತ್ತೇನೆ. ವಿಜಯಪುರ ಮಾರುಕಟ್ಟೆಗೂ ಪೂರೈಕೆ ಮಾಡುತ್ತೇನೆ ಎನ್ನುತ್ತಾರೆ ಲಮಾಣಿ.

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಉತ್ತಿ,ಬಿತ್ತುವುದರಿಂದ ಆರಂಭಗೊಂಡು ಫಸಲು ಬರುವವರೆಗೂ ಯಾವಾವ ಔಷಧ, ಗೊಬ್ಬರ ಬಳಸಬೇಕು, ಎಷ್ಟು ಹಾಕಬೇಕು ಎಂಬುದನ್ನು ಚಾಚೂ ತಪ್ಪದೇ ಮಾಡುತ್ತೇನೆ. ಹೀಗಾಗಿ ಇಳುವರಿ ಚನ್ನಾಗಿ ಬರುತ್ತದೆ. ರೋಗ ಬಾಧೆಯೂ ಕಡಿಮೆ ಎಂದು ಬಿ.ಬಿ.ಲಮಾಣಿ ಹೇಳಿದರು.

ಹರಿಯಾಣದಿಂದ ಗೋಧಿ ತಂದು ಬೆಳೆದಿರುವೆ, ಅದೇ ರೀತಿ ಬೇಸಿಗೆಯಲ್ಲಿ ಹೆಸರು ಬೆಳೆದು ಹೆಚ್ಚು ಇಳುವರಿ ತೆಗೆದುಕೊಂಡಿದ್ದೇನೆ. ವರ್ಷ ಪೂರ್ತಿ ಒಂದಲ್ಲ, ಒಂದು ಬೆಳೆ ಕೈಸೇರುವಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೇನೆ. ಹೊಲದಲ್ಲಿ ಎರಡು ಎಮ್ಮೆ, ಏಳೆಂಟು ಆಡು ಸಾಕಿದ್ದೇನೆ ಎಂದು ಹೇಳಿದರು.  

ನನ್ನೊಂದಿಗೆ ಮಕ್ಕಳಾದ ಭರತ್‌ ನಾಯಿಕ, ರಘುವೀರ ನಾಯಿಕ ಕೂಡ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಪತ್ನಿ ಕಮಲಾ ಬಾಯಿಗೂ ಕೃಷಿಯಲ್ಲಿ ಹೆಚ್ಚು ಆಸಕ್ತಿ. ಪ್ರತಿ ನಿತ್ಯ 25 ಮತ್ತು 30 ಕೂಲಿಯಾಳುಗಳಿಗೆ ನಮ್ಮ ಹೊಲದಲ್ಲಿ ಕೆಲಸ ನೀಡುತ್ತೇನೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ಬರದಿಂದ ಬೆಂಗಾಡಾಗಿದ್ದ, ಕುಡಿಯುವ ನೀರಿಗೂ ಪರಿತಪಿಸುತ್ತಿದ್ದ ಅಲಿಯಾಬಾದ್‌ ತಾಂಡಾದಲ್ಲಿ ಮಳೆ ಇಲ್ಲದ ಈ ದಿನಗಳಲ್ಲೂ ನೀರು ಲಭ್ಯ ಇದೆ ಎಂದರೆ ಅದಕ್ಕೆ ಸಚಿವ ಎಂ.ಬಿ.ಪಾಟೀಲ ಅವರ ನೀರಾವರಿ ಯೋಜನೆ ಕಾರಣ. ಅವರು ನಮ್ಮ ಭಾಗಕ್ಕೆ ನೀರು ಕೊಡದಿದ್ದರೇ ಕೃಷಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ನಮ್ಮ ಭೂಮಿಗೆ ಇಂದು ಚಿನ್ನದ ಬೆಲೆ ಬಂದಿದೆ. ಅವರ ಪುಣ್ಯ ದೊಡ್ಡದು ಎಂದು ಶ್ಲಾಘಿಸಿದರು. 

ಭೂಮಿ ತಾಯಿ ಮೇಲೆ ನಂಬಿಕೆ ಇಟ್ಟು ದುಡಿಮೆ ಮಾಡುತ್ತೇನೆ. ಒಮ್ಮೊಮ್ಮೆ ಉತ್ತಮ ಬೆಲೆ ಸಿಗಬಹುದು ಕೆಲವೊಮ್ಮೆ ಸಿಗದಿರಬಹುದು. ಆದರೆ ಕೃಷಿಯಿಂದ ನೆಮ್ಮದಿ ಶಾಂತಿ ಲಭಿಸಿದೆ

-ಬಿ.ಬಿ.ಲಮಾಣಿ ಪ್ರಗತಿಪರ ರೈತ ಅಲಿಯಾಬಾದ್‌ ಎಲ್‌.ಟಿ.ನಂ. 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT