ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ರೈತ ವಿರೋಧಿ ನೀತಿ: ಗುರುಲಿಂಗಪ್ಪ ಅಂಗಡಿ ಆರೋಪ

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ
Published 7 ಏಪ್ರಿಲ್ 2024, 14:25 IST
Last Updated 7 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ರೈತ ಪರ ಯೋಜನೆಗಳನ್ನ ಜಾರಿಗೆ ತಂದಿತ್ತು. ಅವುಗಳನೆಲ್ಲ ಕಾಂಗ್ರೆಸ್ ಪಕ್ಷ ಹಿಂಪಡೆದು ರೈತ ವಿರೋಧಿ ನೀತಿ ಅನುಸರಿಸುತ್ತಾ ಬಂದಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಕಿಸಾನ್‌ ಸನ್ಮಾನ್‌ ಯೋಜನೆ ಸ್ಥಗಿತಗೊಳಿಸಿದೆ. ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಕೈಬಿಡಲಾಗಿದೆ. ಹಾಲು ಉತ್ಪಾದಕರಿಗೆ ನೀಡುವ ಬೆಂಬಲ ಬೆಲೆ ಕೈಬಿಡಲಾಗಿದೆ ಎಂದು ಆರೋಪಿಸಿದರು. 

ಪಂಪ್‌ಸೆಟ್‌ಗೆ ವಿದ್ಯುತ್‌ ಸಂಪರ್ಕ ಪಡೆಯದ ರೈತರಿಗೆ ಅಕ್ರಮ–ಸಕ್ರಮ ಯೋಜನೆ ಅನುಕೂಲವಾಗಿತ್ತು. ಆದರೆ, ಸರ್ಕಾರ ಅದನ್ನು ಕೈಬಿಟ್ಟಿರುವುದರಿಂದ ರೈತರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಮಾಡಲಾಗಿರುವುದಕ್ಕೆ ವಿರೋಧವಿಲ್ಲ. ಪುರುಷರಿಗೂ ಮಾಡಿದರೂ ಬೇಸರವಿಲ್ಲ. ಆದರೆ, ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸಲು ಕಷ್ಟಪಡುವಂತವಾಗಿದೆ. ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ರೈತರು ಕೆಲಸವಿಲ್ಲದೇ ಗುಳೆ ಹೋಗುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಹೆಚ್ಚಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದ್ದು, ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕು. ರಾಜ್ಯದ ಪಾಲಿನ ನೀರಿನ ಸದುಪಯೋಗಕ್ಕೆ ಯೋಜನೆ ರೂಪಿಸಬೇಕು. ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆಗಳಾದ ಮಲಘಾಣ ಮತ್ತು ಮುಳವಾಡ ಕಾಲುವೆಗೆ ಸ್ವಾಧೀನ ಪಡಿಸಿಕೊಂಡ  ರೈತರ ಭೂಮಿಗೆ ಇನ್ನೂ ಪರಿಹಾರ ನೀಡಿಲ್ಲ. ಆದಷ್ಟು ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ  ಆರ್.ಜಿ. ಡೊಳ್ಳಿ, ಪಾಂಡು ಸಾಹುಕಾರ, ಕಾರ್ಯದರ್ಶಿ ಶಿವಾನಂದ ಅವಟಿ, ಪ್ರಧಾನ ಕಾರ್ಯದರ್ಶಿ ಬಾಲರಾಜ ರೆಡ್ಡಿ, ಡಿ.ಜಿ. ಬಿರಾದಾರ, ರೇಣುಕಾ ಪರಸಪ್ಪಗೊಳ, ಶಿವರಾಜ ಕೆಂಗನಾಳ, ಕಾರ್ಯದರ್ಶಿ ಸಂಪತ್ ಕೊವಳ್ಳಿ ಉಪಸ್ಥಿತರಿದ್ದರು.

ರೈತರ ಬೇಡಿಕೆಗಳಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಸ್ಪಂದಿಸದೇ ಇದ್ದರೆ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು
– ಗುರುಲಿಂಗಪ್ಪ ಅಂಗಡಿಅಧ್ಯಕ್ಷ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT