ಬುಧವಾರ, ಆಗಸ್ಟ್ 10, 2022
25 °C
ಎಐಡಿವೈಒ ಸಂಸ್ಥಾಪನಾ ದಿನ: ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿಕೆ

ಕೇಂದ್ರದಿಂದ ಯುವಜನ ವಿರೋಧಿ ನೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ:  ಬಂಡವಾಳಶಾಹಿಗಳ ಲಾಭಕ್ಕಾಗಿ ರೈಲ್ವೆ, ಮಿಲಿಟರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯುವಜನ ವಿರೋಧಿ ನೀತಿಗಳ ವಿರುದ್ಧ ಹಾಗೂ ಕಾಯಂ ನೇಮಕಾತಿಗಾಗಿ ಯುವಜನರು ಒಗ್ಗಟ್ಟಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.

ಎಐಡಿವೈಒ 56ನೇ ಸಂಸ್ಥಾಪನಾ ದಿನದ ಅಂಗವಾಗಿ ಭ್ರಷ್ಟಾಚಾರ ರಹಿತ, ಪಾರದರ್ಶಕ ನೇಮಕಾತಿಗಾಗಿ ಹಾಗೂ ಎಲ್ಲಾ ಖಾಲಿ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಜನಸಾಮಾನ್ಯರು ಪ್ರತಿದಿನವೂ ಬೆಲೆಯೇರಿಕೆ ಬಿಸಿಯನ್ನು ಅನುಭವಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಮುಂತಾದ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ, ಅವರ ಆದಾಯ ಪಾತಾಳ ಮುಟ್ಟಿದೆ. ನಿರುದ್ಯೋಗಿ ಯುವಕರ ಪಾಡು ಅಯೋಮಯವಾಗಿದೆ ಎಂದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ ಎನ್ನುವುದು ಕೇವಲ ಉಳ್ಳವರ ಸಂಭ್ರಮವಾಗಿದೆ ಎಂದು ಹೇಳಿದರು.

ದೇಶದಲ್ಲಿ 45 ವರ್ಷಗಳಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗದ ಪ್ರಮಾಣ ದಾಖಲಾಗಿದೆ. 2022 ಮಾರ್ಚ್‍ನಲ್ಲಿ ನಿರುದ್ಯೋಗದ ಪ್ರಮಾಣ ಶೇ 7.60 ಇದ್ದರೆ, ಏಪ್ರಿಲ್‌ನಲ್ಲಿ ಅದು ಶೇ 7.83ಕ್ಕೆ ಏರಿಕೆಯಾಗಿದೆ. ಈ ಅಂಕಿ ಅಂಶಗಳು ನಿರುದ್ಯೋಗವು ರಾಕೆಟ್ ವೇಗದಲ್ಲಿ ಬೆಳೆಯುತ್ತಲೇ ಸಾಗಿರುವುದನ್ನು ತೋರಿಸುತ್ತವೆ ಎಂದರು.

ಎಐಡಿವೈಓನ ಸೆಕ್ರೆಟರಿಯಟ್ ಸದಸ್ಯ ಶರಣು ಗಡ್ಡಿ ಮಾತನಾಡಿ,  ಜನರ ನಡುವೆ ಜಾತಿ, ಧರ್ಮದ ಹೆಸರಿನಲ್ಲಿ ವಿವಿಧ ಕೋಮುಗಳ ನಡುವೆ ಉದ್ವಿಗ್ನತೆ ಹುಟ್ಟುಹಾಕಲಾಗುತ್ತಿದೆ. ಶಾಲಾ-ಕಾಲೇಜಿನ ಮಕ್ಕಳ ನಡುವೆ ವಿಷಬೀಜ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಎಐಡಿವೈಓ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ ಮಾತನಾಡಿ, ಸರ್ಕಾರವು ತನ್ನ ದುರಾಡಳಿತವನ್ನು ಪ್ರಶ್ನಿಸುವವರನ್ನು, ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸುವ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಗುಜರಾತ್ ಸರ್ಕಾರವು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಸದಸ್ಯರಾದ ಅನುರಾಗ ಸಾಳುಂಕೆ, ಸೋಮು ಮಡ್ಡಿ, ಸಯ್ಯದ್, ಕಲ್ಮೇಶ, ಪ್ರದೀಪ್, ದೇವರಾಜ ಕೊಪ್ಪಳ, ಸಂದೀಪ ಜಾಧವ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು