ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲೆ ದೌರ್ಜನ್ಯ; ರಾಜಿ ಸಂಧಾನ ಬೇಡ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸೂಚನೆ
Last Updated 22 ಡಿಸೆಂಬರ್ 2021, 15:58 IST
ಅಕ್ಷರ ಗಾತ್ರ

ವಿಜಯಪುರ: ಹೆಣ್ಣು ಮಕ್ಕಳ ಬಾಲ್ಯವಿವಾಹ, ವರದಕ್ಷಿಣೆ, ಲೈಂಗಿಕ ಕಿರುಕುಳ ಸೇರಿದಂತೆ ಮಹಿಳೆಯರ ಮೇಲಿನ ಯಾವುದೇ ರೀತಿಯ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅದಕ್ಕೆ ಕಾನೂನು ರೀತ್ಯ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ, ನೊಂದ ಮಹಿಳೆಯರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಕೇವಲ ರಾಜಿ ಸಂಧಾನ ಮಾಡಿ ಬಗೆಹರಿಸುವ ಕಾರ್ಯಕ್ಕೆ ಮುಂದಾಗದೇ, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪೊಕ್ಸೊ, ಅತ್ಯಾಚಾರದಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ನೆರವು, ಕೌನ್ಸೆಲಿಂಗ್ ಹಾಗೂ ಕಾನೂನಿನ ನೆರವು ನೀಡಿ, ಅವರಲ್ಲಿ ಧೈರ್ಯ, ಸ್ಥೈರ್ಯ ತುಂಬಿ, ಅವರು ಖಿನ್ನತೆಗೊಳಗಾದಂತೆ ಹಾಗೂ ಆತ್ಮಹತ್ಯೆಯಂತಹ ಕೆಲಸಗಳಿಗೆ ಮುಂದಾಗದಂತೆ ನೋಡಿಕೊಳ್ಳುವುದರಲ್ಲಿಯೂ ಇಲಾಖೆಯ ಪಾತ್ರ ಬಹಳ ಮಹತ್ವದಾಗಿದೆ ಎಂದರು.

ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳಿಗೆ ಕೇವಲ ಧನ ಸಹಾಯ ಮಾಡಿ ಬಿಟ್ಟುಬಿಡುವುದರಿಂದ ಪ್ರಯೋಜನವಿಲ್ಲ. ಅವರು ಭವಿಷ್ಯದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವರಿಗೆ ಕೌಶಲಾಭಿವೃದ್ಧಿ ತರಬೇತಿಗಳನ್ನು ನೀಡಿ, ಸರ್ಕಾರದ ವಿವಿಧ ಯೋಜನೆಗಳಡಿ ಸಾಲಸೌಲಭ್ಯ ಹಾಗೂ ಉದ್ಯೋಗ ನೀಡಿ ಅವರು ಸ್ವಾವಲಂಬಿಗಳಾಗುವಂತೆ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ಕ್ಕೆ ಸರ್ಕಾರ ಏರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಇದರಿಂದ ಹೆಣ್ಣು ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿ ಇನ್ನಷ್ಟು ಹೆಚ್ಚಾಗುತ್ತದೆ. ಈ ಬಗ್ಗೆ ಹೆಣ್ಣು ಮಕ್ಕಳ ತಂದೆ ತಾಯಿಗಳಲ್ಲಿಯೂ ಜಾಗೃತಿ, ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.

ಇಲಾಖೆಗಳ ಅಧಿಕಾರಿಗಳು ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆ, ಓಬವ್ವ ಪಡೆಗಳಂತಹ ನೆರವಿನೊಂದಿಗೆ ಶಾಲಾ-ಕಾಲೇಜುಗಳ ಹಾಗೂ ಯುವತಿಯರ ದೌರ್ಜನ್ಯ ಹಾಗೂ ಕಿರುಕುಳ ನಿಯಂತ್ರಣಕ್ಕೆ ಮುಂದಾಗಬೇಕು. ವಿವಿಧ ಇಲಾಖೆಗಳ ಕಚೇರಿಗಳ ವ್ಯಾಪ್ತಿಯಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕೆ.ಕೆ ಚವ್ಹಾಣ್ ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಾಂತ್ವನ ಹಾಗೂ ಸಖಿ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.

ಕೌಟುಂಬಿಕ ಹಿಂಸೆ; 149 ಪ್ರಕರಣ

ವಿಜಯಪುರ: ಕೌಟುಂಬಿಕ ಹಿಂಸೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 149 ಪ್ರಕರಣಗಳು ಬಾಕಿಯಿದ್ದು, ನ್ಯಾಯಾಲಯದಲ್ಲಿವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಕಲ್ಯಾಣ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿರುವ ‘ಸಖಿ’ ಒನ್ ಸ್ಟಾಪ್ ಸೆಂಟರ್‌ನಲ್ಲಿ 2021-22 ನೇ ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ ದಾಖಲಾದ ಪ್ರಕರಣಗಳಲ್ಲಿ 7 ಕೌಟುಂಬಿಕ ದೌರ್ಜನ್ಯ ಪ್ರಕರಣ, 40 ಅತ್ಯಾಚಾರ ಪ್ರಕರಣ, 9 ಅಪಹರಣ ಪ್ರಕರಣ ಸೇರಿದಂತೆ ಒಟ್ಟು 63 ಪ್ರಕರಣ ದಾಖಲಾಗಿದ್ದು, ಈ ಪೈಕಿ 19 ಇತ್ಯರ್ಥಗೊಂಡಿದ್ದು, 44 ಬಾಕಿ ಇವೆ ಎಂದು ಅವರು ತಿಳಿಸಿದರು.

‘ಸ್ನೇಹಾ’ ಮಹಿಳಾ ಪುನಶ್ಚೇತನಕ್ಕೆ ಕೇಂದ್ರದಿಂದ 2021-22 ನೇ ಸಾಲಿನಲ್ಲಿ ಸ್ವಧಾರ ಗೃಹಕ್ಕೆ ದಾಖಲಾದ ಮಹಿಳೆಯರ ಪ್ರಕರಣಗಳ ಪೈಕಿ 19 ಕೌಟುಂಬಿಕ ಕಲಹ, 6 ಕಾಣೆ ಪ್ರಕರಣ, 2 ಮಾನಸಿಕ ಖಿನ್ನತೆ, 7 ಪ್ರೇಮ ಪ್ರಕರಣ ಸೇರಿದಂತೆ ಒಟ್ಟು 52 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 45 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 7 ಪ್ರಕರಣಗಳು ಬಾಕಿ ಇವೆ ಎಂದರು.

ಸಾಂತ್ವನ ಯೋಜನೆಯಡಿ ವಿವಿಧ ಸೌಲಭ್ಯ, ಪರಿಹಾರದಡಿ ಒಟ್ಟು 393 ಇತ್ಯರ್ಥಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ ಚವ್ಹಾಣ್ ಇದ್ದರು.

* ಹೆಣ್ಣು ಮಕ್ಕಳು ಕಾಣೆಯಾಗುವ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಮಾನವ ಕಳ್ಳಸಾಗಾಣಿಕೆಯಂತಹ ದೊಡ್ಡ ಸಮಸ್ಯೆಗೂ ಇದು ದಾರಿ ಮಾಡಿಕೊಡುತ್ತದೆ.ಕೂಡಲೇ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಬೇಕು.

–ಪ್ರಮೀಳಾ ನಾಯ್ಡು, ಅಧ್ಯಕ್ಷೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT