ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಸಿಂದಗಿ ರಸ್ತೆಗಳು

ಅಪೂರ್ಣಗೊಂಡ ಕಾಮಗಾರಿ; ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ದಾರಿ
Published 8 ಫೆಬ್ರುವರಿ 2024, 5:58 IST
Last Updated 8 ಫೆಬ್ರುವರಿ 2024, 5:58 IST
ಅಕ್ಷರ ಗಾತ್ರ

ಸಿಂದಗಿ: ಇಲ್ಲಿನ ಕನಕದಾಸ ವೃತ್ತದಿಂದ ಗೋಲಗೇರಿ ಮಾರ್ಗದ ಸರ್ಕಾರಿ ಕಾಲೇಜು ಕ್ಯಾಂಪಸ್ ವರೆಗೆ ಅರ್ಧ ಕಿಲೋ ಮೀಟರ್ ರಸ್ತೆ ಹದಗೆಟ್ಟಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. 

ಈ ರಸ್ತೆ ಶಹಾಪೂರ-ಯಾದಗಿರಿ ರಾಜ್ಯ ಹೆದ್ದಾರಿಯಾಗಿದ್ದು, 24 ಗಂಟೆಯೂ ವಾಹನಗಳ ಸಂಚಾರ ಇರುತ್ತದೆ. ಇದೇ ರಸ್ತೆಯಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ಸರ್ಕಾರಿ ವಸತಿ ನಿಲಯಗಳು, ಅಗ್ನಿಶಾಮಕ ದಳದ ಕಾರ್ಯಾಲಯ, ಅರಣ್ಯ ಇಲಾಖೆ ಕಾರ್ಯಾಲಯಗಳಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಇದೆ ದಾರಿಯಲ್ಲಿ ಪ್ರಯಾಣಿಸುತ್ತಾರೆ.

ಅಲ್ಪಸ್ವಲ್ಪ ಸರಿ ಇದ್ದ ರಸ್ತೆಯನ್ನು ಅಗೆದು ಅಂದಾಜು ಒಂಬತ್ತು ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದರು. ಕಲ್ಲಿನ ಕಡಿಗಳನ್ನು ಹಾಕಿ, ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

‘ಈ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಸರ್ಕಾರದಿಂದ ಬಿಲ್ ಪಾವತಿಯಾಗುತ್ತಿಲ್ಲ ಎಂದು ಕೆಲಸ ಸ್ಥಗಿತಗೊಳಿಸಿದ್ದಾರೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ತಾರಾನಾಥ.

ಸ್ವಾಮಿ ವಿವೇಕಾನಂದ ವೃತ್ತದಿಂದ ಬಂದಾಳ ರಿಂಗ್ ರೋಡ್ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ಸಿ.ಸಿ ರಸ್ತೆಯಲ್ಲಿ ತಗ್ಗು, ಗುಂಡಿಗಳಿವೆ. ವಾಹನ ಚಾಲಕರು ಆತಂಕದಲ್ಲೇ ಸಾಗುವ ಸ್ಥಿತಿಯಿದೆ. ರಸ್ತೆಯಲ್ಲಿರುವ ತಗ್ಗಿನಲ್ಲಿ ಕೊಳಚೆ ನೀರು ಸಂಗ್ರಹವಾಗಿ, ಸಂಚಾರಕ್ಕೆ ತೊಂದರೆಯಾಗಿದೆ.

ಇನ್ನು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಂದಾಳ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ಸ್ಥಿತಿಯೂ ಹದಗೆಟ್ಟಿದೆ. ‘ಈ ರಸ್ತೆಯಲ್ಲಿ ಆಗಾಗ್ಗೆ ಚರಂಡಿ ಕೊಳಚೆ ನೀರೆಲ್ಲ ಹರಿಯುತ್ತ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ. ಮಳೆ ಬಂದರಂತೂ ರಸ್ತೆ ಪರಿಸ್ಥಿತಿ ನೋಡಲಾಗದು. ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ ಪುರಸಭೆ ಆಡಳಿತ ವರ್ಗಕ್ಕೆ ಮತ್ತು ಶಾಸಕರಿಗೆ ಸಾರ್ವಜನಿಕರು ಹಿಡಿಶಾಪ ಹಾಕುವುದು ತಪ್ಪಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ಮೋಹನ ರಾಠೋಡ.

‘ಈ ರಸ್ತೆಯನ್ನು ಸಿ.ಸಿ ರಸ್ತೆಯನ್ನಾಗಿಸಲು ₹2 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಈ ಹಿಂದಿನ ಶಾಸಕರು ಹೇಳುತ್ತಲೇ ಬಂದರು. ಸದ್ಯದ ಶಾಸಕರು ಅದೇ ಭರವಸೆ ನೀಡುತ್ತ ಹೊರಟಿದ್ದಾರೆ’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಳೆಯ ಪಟ್ಟಣದಲ್ಲಿನ ಹಳೆಯ ಬಜಾರಕ್ಕೆ ಸಂಪರ್ಕ ಕಲ್ಪಿಸುವ ಶಾಂತೇಶ್ವರ ರಸ್ತೆಯಲ್ಲಿ ಕಬ್ಬಿಣದ ರಾಡ್‌ಗಳು ಮೇಲೆದ್ದು ಅಪಾಯಕ್ಕೆ ಆಹ್ವಾನಿಸುತ್ತಿವೆ. ಇದರಂತೆ ಟಿಪ್ಪು ಸುಲ್ತಾನ ವೃತ್ತದಿಂದ ಪುರಸಭೆ ಕಾರ್ಯಾಲಯದ ಮಾರ್ಗವಾಗಿ ತೋಂಟದ ಸಿದ್ಧಲಿಂಗ ಶ್ರೀಗಳ ಮುಖ್ಯ ರಸ್ತೆಯೂ ಸಂಪೂರ್ಣ ಹದಗೆಟ್ಟು ಹೋಗಿದೆ.

ಹದಗೆಟ್ಟ ರಸ್ತೆಗಳ ಸಮಸ್ಯೆಯನ್ನು ಜನಪ್ರತಿನಿಧಿಗಳ ಎದುರು ಪ್ರಾಸ್ತಾಪಿಸಿದಾಗ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ಹಾಳಾಗಿವೆ ಎಂಬ ಸಬೂಬು ಕೊಡುತ್ತಾರೆ ಎಂದು ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ಒಂಬತ್ತು ತಿಂಗಳಿಂದ ಗೋಲಗೇರಿ ಮಾರ್ಗದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ
– ತಾರಾನಾಥ ಪಿಡಬ್ಲೂಡಿ ಎಇಇ ಸಿಂದಗಿ
ಎದುರಿಗೆ ಬರುವ ವಾಹನ ಕಾಣದಷ್ಟು ಗೋಲಗೇರಿ ರಸ್ತೆ ಧೂಳುಮಯವಾಗಿದೆ. ಅಪಘಾತ ಸಾಮಾನ್ಯವಾಗಿದೆ
–ರಮೇಶ ಚಟ್ಟರಕಿ ಅಧ್ಯಾಪಕ ಸರ್ಕಾರಿ ಆದರ್ಶ ವಿದ್ಯಾಲಯ
ನಾವು ಕಾಲೇಜಿಗೆ ಹೋಗುವ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ
ರವಿ ಹೊಸಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT