ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಬಾಲಮುನಿಗಳಿಂದ ‘ಬಾಲಶತಾವಧಾನ’ ಪ್ರಯೋಗ ಇಂದು

Last Updated 24 ಸೆಪ್ಟೆಂಬರ್ 2022, 15:30 IST
ಅಕ್ಷರ ಗಾತ್ರ

ವಿಜಯಪುರ: ಜೈನ ಅವಳಿ ಬಾಲಮುನಿಗಳಾದ ನಮಿಚಂದ್ರ ಸಾಗರ ಮತ್ತು ನೇಮಿಚಂದ್ರ ಸಾಗರ ಅವರು ಸೆ.25ರಂದು ಬೆಳಿಗ್ಗೆ 6.30ರಿಂದ 9.30ರ ವರೆಗೆ ನಗರದ ಮಹಾವೀರ ಕಾಲೊನಿಯ ಮಹಾವೀರ ಭವನದಲ್ಲಿ ಪ್ರವಚನ ಹಾಗೂ ‘ಬಾಲಶತಾವಧಾನ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಜೈನ ಗುರು ಅಭಿನಂದನ ಚಂದ್ರ ಸಾಗರ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ ರಾಜ್ಯದ ಸೂರತ್‌ನ ಹೆಮ್ಮಯ ಅವಳಿ ಬಾಲ ಮುನಿಗಳು ಜೈನ ಧರ್ಮದ ಐದು ಆಗಮ ಗ್ರಂಥದ 5 ಸಾವಿರ ಶ್ಲೋಕಗಳ ಜೊತೆ ಬೈಬಲ್‌, ಗುರು ಗ್ರಂಥ ಸಾಹಿಬ್‌, ಕುರಾನ್‌, ಭಗವದ್ಗೀತೆ ಕಂಠಪಾಠ ಮಾಡಿದ್ದು,10 ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದಾರೆ ಎಂದರು.

ಪ್ರೇಕ್ಷರು ಕೇಳಿದ ಅಥವಾ ತೋರಿಸಿದ ವಿವಿಧ 100 ವಿಷಯ ಅಥವಾ ವಸ್ತುಗಳನ್ನು ಒಂದೇ ಬಾರಿಗೆ ಕೇಳಿ ನಂತರ ಅದನ್ನು ಅನುಕ್ರಮವಾಗಿ, ಹಿಂದೆಮುಂದೆ ಅಥವಾ ನಡುನಡುವೆ ನೆನಪಿಟ್ಟುಕೊಳ್ಳುವ ಅದ್ಭುತ, ಅವಿಸ್ಮರಣೀಯ ಶಕ್ತಿ ಹೊಂದಿರುವಜೈನ ಬಾಲ ಶತಾವಧಾನ ಪ್ರಯೋಗವನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ಬಾಲ ಮುನಿಗಳು ವಿಶ್ವದ ಯಾವುದೇ ದೇಶದ ಹೆಸರನ್ನು ಕೇಳಿದಾಗ ಆ ದೇಶದ ಹೆಸರಿನೊಂದಿಗೆ ಅದರ ರಾಜಧಾನಿ ಮತ್ತು ಮಾತೃಭಾಷೆಯನ್ನು ಹೇಳುತ್ತಾರೆ. ಗಣಿತದ ಒಗಟು ತಿಳಿಸುತ್ತಾರೆ. 1ರಿಂದ 10ರ ವರೆಗಿನ ಯಾವುದೇ ಸಂಖ್ಯೆಯನ್ನು ಕೇಳಿದಾಗ ಬಾಲಮುನಿಗಳು ಆ ಅಂಕವನ್ನು ಆ ರಾಜ್ಯದ ಮಾತೃ ಭಾಷೆಯಲ್ಲಿಯೇ ಆ ಸಂಖ್ಯೆ ಏನೆಂದು ಉತ್ತರಿಸುತ್ತಾರೆ ಎಂದರು.

ಈ ಬಾಲ ಶತಾವಧಾನ ಪ್ರಯೋಗವು ಪವಾಡವಲ್ಲ. ಆದರೆ, ಪವಾಡಕ್ಕಿಂತ ಏನೂ ಕಡಿಮೆಯಿಲ್ಲ. ಇದು ವಿಶೇಷ ಮಾಂತ್ರಿಕವಲ್ಲ. ಆದರೆ, ಸಾಧನೆಯಿಂದ ಪಡೆದ ಅರ್ಹತೆಯಾಗಿದೆ ಎಂದು ಹೇಳಿದರು.

ಬಾಲ ಶತಾವಧಾನ ಪ್ರಯೋಗದ ಜೊತೆಯಲ್ಲಿ ಸಂಸ್ಕೃತ, ಪ್ರಾಕೃತ, ಹಿಂದಿ, ಗುಜರಾತಿ, ಮರಾಠಿ, ಮಾರ್ವಾಡಿ, ಇಂಗ್ಲಿಷ್‌, ಪಂಜಾಬಿ, ಕನ್ನಡ, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬಲ್ಲ ಉಪನ್ಯಾಸಗಳನ್ನು ಸಹ ನೀಡುತ್ತಾರೆ ಎಂದರು.

ಬಾಲ ಶತಾವಧಾನಿಗಳು ಈಗಾಗಲೇ ವಿಶ್ವ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾರೂ ಈ ವಿಸ್ಮಯಕಾರಿ ಘಟನೆಯನ್ನು ಕಂಡು, ಕೇಳಿಲ್ಲ ಎಂದು ತಿಳಿಸಿದರು.

ಸೂರತ್‌ನ ಸೋನಲ್‌ಬೆನ್‌ ಮತ್ತು ಪಿಯೂಷ್‌ಭಾಯಿ ದಂಪತಿಯ ಪುತ್ರರಾದ ಈ ಅವಳಿ ಬಾಲ ಮುನಿಗಳು ಪ್ರಾಯೋಗಿಕವಾಗಿ 1ನೇ ತರಗತಿ ಮುಗಿಸಿದ ಬಳಿಕ ಎರಡು ವರ್ಷ ಗುರುಕುಲದಲ್ಲಿ ಸನ್ಯಾಸ ಜೀವನ ತರಬೇತಿ ಪಡೆದಿದ್ದಾರೆ. 9ನೇ ವಯಸ್ಸಿನಲ್ಲಿ ಸೂರತ್‌ನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ನಂತರ ತಪ, ಜಪ, ತ್ಯಾಗ, ಪರಮಾರ್ಥ ಹಾಗೂ ಧ್ಯಾನ ಸಾಧನೆಯ ಮೂಲಕ ಆಧ್ಯಾತ್ಮಿಕ ದಿಶೆಯಲ್ಲಿ ಉತ್ನತಿ ಸಾಧಿಸಿದ್ದಾರೆ. ಇದುವರೆಗೆ 5 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ ಎಂದು ತಿಳಿಸಿದರು.

ವಿಜಯಪುರ ಜೈನ ಸಮಾಜದ ಪ್ರಮುಖರಾದ ಸನ್ನಿ ಪೋರವಾಲ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT