ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ:ಜಿಗಜಿಣಗಿ ಬದಲಿಗೆ ಆಗ್ರಹಿಸಿ ಬಂಜಾರ ಮಹಿಳೆಯರಿಂದ BJP ಕಚೇರಿಗೆ ಮುತ್ತಿಗೆ

Published 27 ಮಾರ್ಚ್ 2024, 13:37 IST
Last Updated 27 ಮಾರ್ಚ್ 2024, 13:37 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಹಾಲಿ ಅಭ್ಯರ್ಥಿ ರಮೇಶ ಜಿಗಜಿಣಗಿ ಬದಲಾವಣೆಗೆ ಆಗ್ರಹಿಸಿ ಬಂಜಾರ ಸಮಾಜದ ಮುಖಂಡರು, ಬಂಜಾರ ಮಹಿಳೆಯರು ಬುಧವಾರ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

‘ಸಂಸದ ರಮೇಶ ಜಿಗಜಿಣಗಿ ಅವರ ಬದಲಿಗೆ ಸಮಾಜದ ಯುವ ಮುಖಂಡರಾದ ವೈದ್ಯ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ಟಿಕೆಟ್‌ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಜಿಗಜಿಣಗಿ ಅವರು ಮೂರು ಬಾರಿ ಸಂಸದ, ಸಚಿವರಾದರೂ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ, ಕ್ಷೇತ್ರದ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಮಾತನಾಡಿಲ್ಲ, ವಯಸ್ಸಾಗಿರುವ ಜೊತೆಗೆ ಅವರಿಗೆ ಆರೋಗ್ಯವೂ ಸರಿಯಿಲ್ಲ, ಪಕ್ಷದ ಕಾರ್ಯಕರ್ತರ ಜೊತೆ ಸಂಸದರಿಗೆ ಸರಿಯಾದ ಸಂಪರ್ಕವಿಲ್ಲ, ಕೇವಲ ಚುನಾವಣೆ ವೇಳೆ ಮಾತ್ರ ಪಕ್ಷದ ಬಗ್ಗೆ ಮಾತನಾಡುತ್ತಾರೆ, ಉಳಿದ ವೇಳೆ ಅನ್ಯ ಪಕ್ಷಗಳ ಮುಖಂಡರೊಂದಿಗೆ ಇರುತ್ತಾರೆ. ಇಂತವರಿಗೆ ಟಿಕೆಟ್‌ ನೀಡಿರುವುದು ಸರಿಯಲ್ಲ’ ಎಂದು ಬಂಜಾರ ಸಮಾಜದ ಮುಖಂಡರು ಆರೋಪಿಸಿದರು.

‘ಎಸ್‌ಸಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಲ್ಲಿ ಬಂಜಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಒಮ್ಮೆಯೂ ಅವಕಾಶ ನೀಡದೇ, ವ್ಯವಸ್ಥಿತವಾಗಿ ಸಮಾಜವನ್ನು ತುಳಿಯುವ ಹುನ್ನಾರ ನಡೆದಿದೆ’ ಎಂದು ದೂರಿದರು.

ಪಕ್ಷದ ಮುಖಂಡರಾದ ಸುರೇಶ ಬಿರಾದಾರ ಮನವಿ ಸ್ವೀಕರಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ದೂರವಾಣಿ ಮೂಲಕ ಬಂಜಾರ ಸಮಾಜದ ಮುಖಂಡರ ಜೊತೆ ಮಾತನಾಡಿ, ಸಮಾಜದ ಬೇಡಿಕೆ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತಂದು, ಸೂಕ್ತ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು. 

ಬಂಜಾರ ಸಮಾಜದ ಮುಖಂಡರಾದ ಮೋಹನ್‌ ಚವ್ಹಾಣ, ಅಪ್ಪು ರಾಠೋಡ, ವಿಜಯಕುಮಾರ ಚವ್ಹಾಣ, ರಾಕೇಶ ರಜಪೂತ, ಸುನೀಲ್ ನಾಯಕ, ಪಿ.ಜಿ.ಚವ್ಹಾಣ, ಶಿವಾನಂದ ಚವ್ಹಾಣ, ಸಾವಕ್ಕ ರಾಠೋಡ, ಸಾವಿತ್ರಿ ಚವ್ಹಾಣ, ಶಂಕ್ರವ್ವ ರಾಠೋಡ, ಕಮಲಾಬಾಯಿ ಲಮಾಣಿ, ಅನಸೂಯ ಜಾಧವ, ಮಾದವಿ ರಾಠೋಡ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT