ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರಿಗೆ ಪೀಠತ್ಯಾಗಕ್ಕೆ ನಿರ್ದೇಶನ ನೀಡಲು ಹೈಕೋರ್ಟ್‌ಗೆ ಯತ್ನಾಳ ಮನವಿ

ಚಿತ್ರದುರ್ಗ ಮುರುಘಾಮಠದ ಶರಣರಿಂದ ಲೈಂಗಿಕ ದೌರ್ಜನ ಪ್ರಕರಣ
Last Updated 17 ಸೆಪ್ಟೆಂಬರ್ 2022, 15:48 IST
ಅಕ್ಷರ ಗಾತ್ರ

ವಿಜಯಪುರ: ಲೈಂಗಿಕ ಕಿರುಕುಳ ಆರೋಪದ ಮೇರೆಗೆ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾಮಠದ ಶರಣರು ಪೀಠತ್ಯಾಗ ಮಾಡಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಹಾಗೂ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಸುಪ್ರೀಂ ಅಥವಾ ಹೈ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮಠಕ್ಕೆ ತಾತ್ಕಾಲಿಕ ಮೇಲುಸ್ತುವಾರಿ ಸಮಿತಿ ರಚನೆ ಮಾಡುವ ಮೂಲಕ ಮಠದ ದೈನಂದಿನ ಆಡಳಿತ ಸುಗಮವಾಗಿ ನಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಚಿತ್ರದುರ್ಗದ ಬೃಹನ್ಮಠವು ವಿರಕ್ತ‌ ಪರಂಪರೆಯ ಶೂನ್ಯಪೀಠದ ಅಗ್ರಗಣ್ಯ ಮಠವಾಗಿದೆ. ಮುರುಘಾ ಶ್ರೀಗಳ ಕಾರಣದಿಂದಾಗಿ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನವಾಗಿದೆ. ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ಸ್ವಾಮೀಜಿಗಳು ಸ್ವ ಇಚ್ಛೆಯಿಂದ ಪೀಠ ತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ಮಠದ ಭಕ್ತ ಸಮೂಹ ಕಾನೂನು ಬದ್ಧವಾಗಿ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸಬೇಕು ಎಂದು ಯತ್ನಾಳ ಮನವಿ ಮಾಡಿದ್ದಾರೆ.

ಶರಣರು ಸದ್ಯ ಜೈಲಿನಲ್ಲಿರುವ ಕಾರಣ ಶ್ರೀಮಠದ ಸಮಸ್ತ ಆಡಳಿತ ಚಟುವಟಿಕೆಯು ಅಸ್ತವ್ಯಸ್ತವಾಗಿದೆ. ಈಗಿನ ಸಂದಿಗ್ಧ ಸಮಯದಲ್ಲಿ ಶ್ರೀಮಠದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಉನ್ನತ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ಕೂಡಲೇ ನೇಮಿಸಬೇಕು, ಈ ಸಮಿತಿಯು ಶ್ರೀಮಠದ ದೈನಂದಿನ ಆಡಳಿತ, ಆರ್ಥಿಕ ವ್ಯವಹಾರಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಗತ್ಯವಾದ ನಿರ್ಧಾರ ಕೈಗೊಳ್ಳುವ ತಾತ್ಕಾಲಿಕ ಅಧಿಕಾರ ಹೊಂದಿರಬೇಕು. ಮೂರು ತಿಂಗಳ ಒಳಗಾಗಿ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈ ಸಮಿತಿಯೇ ನೆರವೇರಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT