ವಿಜಯಪುರ: ‘ಭಗತ್‌ಸಿಂಗ್ ಅವರ ಹೋರಾಟ, ತ್ಯಾಗ, ಬಲಿದಾನ, ಚಿಂತನೆಗಳು ಇಂದಿನ ಯುವಜನರ ಬದುಕಿಗೆ ಮಾರ್ಗದರ್ಶಿ’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದ ಗ್ರಂಥಾಲಯದಲ್ಲಿ ಶನಿವಾರ ನಡೆದ ಭಗತಸಿಂಗ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾನವನಿಂದ ಮಾನವನ ಶೋಷಣೆ ತಡೆಗಟ್ಟುವ, ಅಸಮಾನತೆಯನ್ನು ತೊಡೆದು ಹಾಕುವ ಸಮಾಜವಾದಿ ಭಾರತ ನಿರ್ಮಾಣ ಭಗತ್ ಸಿಂಗ್ ಕನಸಾಗಿತ್ತು. ಭಗತ್ ಸಿಂಗ್ ಅವರ ಆಲೋಚನೆಗಳು, ಅವರ ಕ್ರಾಂತಿಕಾರಿ ಮನೋಭಾವ ಹಾಗೂ ನ್ಯಾಯ, ಸ್ವಾತಂತ್ರ್ಯಕ್ಕಾಗಿ ಇದ್ದ ಅವರ ನಿರಂತರ ಬದ್ಧತೆ ಇಂದಿಗೂ ಪ್ರೇರಣಾದಾಯಕ’ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ‘ಕೇವಲ ತನಗಾಗಿ ಬದುಕದೇ ಇಡೀ ಜೀವನವನ್ನೇ ದೇಶದ ವಿಮೋಚನೆಗೋಸ್ಕರ ಮೀಸಲಿಟ್ಟ ಭಗತ್ ಸಿಂಗ್ ಇಂದು ನಮಗೆ ಆದರ್ಶವಾಗಬೇಕಾಗಿದೆ’ ಎಂದು ಹೇಳಿದರು.