ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 9ರಂದು ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ: ಕಾರಜೋಳ

ವಿಜಯಪುರ, ಬಾಗಲಕೋಟೆ ನೀರಾವರಿ ಯೋಜನೆಗೆ ₹10 ಸಾವಿರ ಕೋಟಿ ಅನುದಾನ
Last Updated 6 ಮಾರ್ಚ್ 2023, 13:14 IST
ಅಕ್ಷರ ಗಾತ್ರ

ವಿಜಯಪುರ: ಇಂಡಿ, ನಾಗಠಾಣ, ಚಡಚಣ ಭಾಗದ ಜನರ ದಶಕಗಳ ಕಾಲದ ಬೇಡಿಕೆಯಾಗಿದ್ದ ಹೊರ್ತಿ–ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ 9ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಮೊದಲ ಹಂತಕ್ಕೆ ₹ 3 ಸಾವಿರ ಕೋಟಿ ಮೀಸಲಿಡಲಾಗಿದೆ. ಈ ಯೋಜನೆ ಅನುಷ್ಠಾನದಿಂದ ಲಕ್ಷಾಂತರ ಎಕರೆ ಒಣ ಭೂಮಿ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.

ಸಂತ್ರಸ್ತರಿಗೆ ಪರಿಹಾರ:

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ ಬಬಲೇಶ್ವರ ತಾಲ್ಲೂಕಿನ 20 ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯಕ್ರಮವೂ ಮಾರ್ಚ್‌ 9ರಂದು ನಡೆಯಲಿದೆ ಎಂದು ತಿಳಿಸಿದರು.

ಯುಕೆಪಿ ಮೂರನೇ ಹಂತಕ್ಕೆ 1.34 ಲಕ್ಷ ಎಕರೆ ಭೂಸ್ವಾಧೀನ ಮಾಡಬೇಕಾಗಿದೆ. ಈ ಸಂತ್ರಸ್ತರಿಗೆ ಪರಿಷ್ಕೃತ ಪರಿಹಾರ ನೀಡುವುದಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದರು.

ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗೆ ನಾನು ನೀರಾವರಿ ಸಚಿವನಾದ ಬಳಿಕ ₹ 10 ಸಾವಿರ ಕೋಟಿ ಅನುದಾನವನ್ನು ಮಂಜೂರಾತಿ ನೀಡಿದ್ದೇನೆ. ಈ ವರ್ಷ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ₹ 5 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.

ಈ ಎರಡು ಮಹತ್ವಪೂರ್ಣ ಕಾರ್ಯಕ್ರಮಗಳಿಗೆ ಜಿಲ್ಲೆಯ ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ವಿಮಾನ ನಿಲ್ದಾಣ ಶೀಘ್ರ:

ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ವಿಜಯಪುರ ನೂತನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಸಿದ್ಧತೆ ಭರದಿಂದ ನಡೆದಿದೆ ಎಂದು ಹೇಳಿದರು.

ಶ್ರೇಯಸ್ಸು ಕಾರಜೋಳಗೆ: ಯತ್ನಾಳ

ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ನಾನು ಮಾಡಿದ್ದು, ತಾನು ಮಾಡಿದ್ದು ಎಂದು ಕ್ರೆಡಿಟ್‌ ಪಡೆಯಲು ಜಿಲ್ಲೆಯಲ್ಲಿ ಡಿಶುಂ.. ಡಿಶುಂ..ರಾಜಕಾರಣ ಶುರುವಾಗಿದೆ. ಯಾರೂ ಮಾಡಿಲ್ಲ, ಈ ಯೋಜನೆ ಜಾರಿಗೆ ತರುತ್ತಿರುವವರು ಇಂದಿನ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಾಹೇಬರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡರು.

ನಗರದ ದರ್ಗಾದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶಿವಶರಣ ಮಾದಾರ ಚೆನ್ನಯ್ಯ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT