ನಾಲತವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಟ್ಟಣಕ್ಕೆ ಮಾರ್ಚ್ 21ರಂದು ಬೆಳಿಗ್ಗೆ 11ಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ಸೋಮವಾರ ಸಿದ್ಧತೆಯನ್ನು ಪರಿಶೀಲಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಸಿದ್ಧಪಡಿಸಿರುವ ಹೆಲಿಪ್ಯಾಡ್ ಅನ್ನು ಪೊಲೀಸ್ ಅಧಿಕಾರಿಗಳ ಒಡಗೂಡಿ ವೀಕ್ಷಿಸಿದರು.
ಬಳಿಕ ಶ್ರೀ ವೀರೇಶ್ವರ ಕಾಲೇಜು ಕಚೇರಿಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
ಸಮಾವೇಶಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ತಿಳಿಸಿದರು. ಸ್ವಚ್ಛತೆ ಬಗ್ಗೆ ಗಮನ ನೀಡ ಬೇಕು, ಎಲ್ಲ ಇಲಾಖೆಯವರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಾಲತವಾಡದ ಶ್ರೀ ಶರಣ ವಿರೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮುದ್ದೇಬಿಹಾಳ ವಿಧಾನ ಸಭಾ ಮತಕ್ಷೇತ್ರದ ಬೇರೆ ಬೇರೆ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರೂ ಆದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಜಲ ಸಚಿವರಾದ ಗೋವಿಂದ ಎಂ ಕಾರಜೋಳ, ಬಿ. ಶ್ರೀರಾಮುಲು, ವಿ. ಸೋಮಣ್ಣ, ಡಾ. ಅಶ್ವತ್ಥನಾರಾಯಣ ಸಿ.ಎನ್, ಆನಂದ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜ,ಡಾ. ಕೆ.ಸುಧಾಕರ್, ಶಶಿಕಲಾ ಜೊಲ್ಲೆ, ಎಂ.ಟಿ.ಬಿ ನಾಗರಾಜ್ , ಡಾ.ನಾರಾಯಣ ಗೌಡ, ಬಿ.ಸಿ. ನಾಗೇಶ, ವಿ.ಸುನಿಲ್‌ಕುಮಾರ್, ಜಿ.ಸಿ.ಮಾಧುಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಹಶೀಲ್ದಾರ್ ರೇಖಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜೆ.ನಾಯಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಇಸಿಒ ಎ.ಬಿ.ಬಗಲಿ, ರಕ್ಕಸಗಿ ಸಿಆರ್‌ಪಿ ಮಹಾಂತೇಶ ನೂಲಿನವರ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಆರೀಫ್ ಮುಶಾಪುರಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.